Mysore
26
few clouds

Social Media

ಶುಕ್ರವಾರ, 17 ಜನವರಿ 2025
Light
Dark

ಆಂದೋಲನ ಓದುಗರ ಪತ್ರ : 30 ಮಂಗಳವಾರ 2022

ಓದುಗರ ಪತ್ರ

ಈ ಬಾರಿ ಪರಿಸರ ಸ್ನೇಹಿ ಗಣಪ ಇರಲಿ!
ಪ್ರತಿ ವರ್ಷದಂತೆ ಈ ವರ್ಷವೂ ಗೌರಿ ಗಣೇಶ ಹಬ್ಬ ಬಂದಿದೆ. ಈ ಸಂದರ್ಭದಲ್ಲಿ ಪ್ರತಿ ಮನೆ, ಗ್ರಾಮ, ನಗರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ  ಗಣೇಶ ಮೂರ್ತಿ ಕೂರಿಸಿ ಸಂಭ್ರಮಿಸುವ ಭಕ್ತಸಮೂಹ ದೊಡ್ಡದಿದೆ. ಇತ್ತೀಚೆಗೆ ಜನರು ಭಕ್ತಿಭಾವದ ಜೊತೆಗೆ ಆಡಂಬರದ ಪೂಜೆಯನ್ನು ಮಾಡುತ್ತಿದ್ದಾರೆ. ಬಹುದೊಡ್ಡ ಗಾತ್ರದ ಮತ್ತು ರಾಸಾಯನಿಕ ಬಣ್ಣಗಳಿಂದ ಹೊಳೆಯುವ ಗಣೇಶನನ್ನು ಕೂರಿಸುತ್ತಾರೆ. ಈ ನಿಟ್ಟಿನಲ್ಲಿ ದೊಡ್ಡ ದೊಡ್ಡ ಧ್ವನಿವರ್ಧಕಗಳನ್ನು ಬಳಸಿ, ಬೆಳಿಗ್ಗೆಯಿಂದ ಸಂಜೆ ತನಕ ಹಾಡನ್ನು ಹಚ್ಚಿಯೇ ಇಡುವುದು, ವಾಯು ಮಾಲಿನ್ಯ ಉಂಟಾಗುವಷ್ಟು ಪಟಾಕಿ ಸಿಡಿಸುವುದು ತಪ್ಪಬೇಕಿದೆ. ಇದರಿಂದ  ವೃದ್ಧರಿಗೆ, ಪುಟಾಣಿಗಳಿಗೆ, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕಷ್ಟವಾಗುತ್ತದೆ.  ಮಣ್ಣು ಮತ್ತು ಪರಿಸರ ಸ್ನೇಹಿ  ಬಣ್ಣಗಳಿಂದ ಮಾಡಿದ ಮೂರ್ತಿಯ ಹೊರತಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್, ಥರ್ಮಕೋಲ್, ರಾಸಾಯನಿಕ ಬಳಿದ ಮೂರ್ತಿಗಳು, ಅಂಟು ವಸ್ತುಗಳಿಂದ ಮಾಡಿದ, ಪ್ಲಾಸ್ಟಿಕ್‌ನಿಂದ ಮಾಡಿದ ಮೂರ್ತಿಗಳೆಲ್ಲವೂ ತೀವ್ರ ಹಾನಿಕರ ಮತ್ತು ವಿಷಕಾರಿ. ಕಾರಣ ಇವುಗಳು ನೀರಲ್ಲಿ ಕರಗುವುದಿಲ್ಲ. ಸಂಯೋಜಿತ ಬಣ್ಣಗಳಲ್ಲಿ ಅಪಾಯಕಾರಿ ಭಾರ ಲೋಹಗಳಾದ ಸತು, ಕ್ರೋಮಿಯಂ, ಸೀಸ, ನಿಕಲ್, ಕ್ಯಾಡ್ಮಿಯಂ  ಇತ್ಯಾದಿಗಳಿರುತ್ತವೆ. ಇವುಗಳು ಮನುಷ್ಯರು, ಪ್ರಾಣಿ ಸಸ್ಯಗಳಿಗೆ ತೀವ್ರ ಹಾನಿಕರ. ಇನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ  ಕ್ಯಾನ್ಸರ್ ಕಾರಕ ಅಸ್ಬೆಸ್ಟಾಸ್ ಇರುತ್ತದೆ. ಇದಕ್ಕೆ ಬಳಿಯುವ ಆಯಿಲ್ ಪೈಂಟ್‌ಗಳಲ್ಲೂ  ರಾಸಾಯನಿಕಗಳಿದ್ದು, ಗಣಪತಿ ವಿಸರ್ಜನೆ ಮಾಡಿದ ಕೆರೆ, ನದಿ ನೀರನ್ನು ಬಳಸುವುದರಿಂದ ಆರೋಗ್ಯದ ಮೇಲೆ ಅಲ್ಪಾವಧಿ ಮತ್ತು ದೀರ್ಘಾವಧಿ ಪರಿಣಾಮ ಬೀರಬಹುದು! ಆದ ಕಾರಣ ನಮ್ಮನ್ನು ಸಲಹುತ್ತಿರುವ ಪರಿಸರಕ್ಕೆ ಕ್ಷೋಭೆಯಾಗದಂತೆ ಗಣೇಶನ ಮೂರ್ತಿಯನ್ನು ಸಿದ್ಧಪಡಿಸಿ ಪೂಜಿಸುವುದು ನಮ್ಮ ಕೆಲಸವಾಗಬೇಕಿದೆ. ನಾವೆಲ್ಲರೂ ಪರಿಸರ ಕಾಪಾಡಿದರೆ ಪರಿಸರ ನಮ್ಮನ್ನು ಅಷ್ಟೇ ಚೆನ್ನಾಗಿ ಕಾಪಾಡಿಕೊಳ್ಳುತ್ತೆ ಎನ್ನುವುದನ್ನು ನೆನಪಿನಲ್ಲಿ ಇಡೋಣ. ಈ ಬಾರಿಯ ಗಣೇಶನ ಹಬ್ಬದಲ್ಲಿ ಎಲ್ಲರೂ ಪರಿಸರ ಸ್ನೇಹಿ ಗಣಪನ ಮೊರೆ ಹೋಗುವ ಮೂಲಕ ಪರಿಸರ  ಸ್ನೇಹಿಯಾಗಿ ಸಂಭ್ರಮಿಸೋಣ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.



ಹಿಂದಿ ಮೋಹಕ್ಕೆ ಕಡಿವಾಣ ಯಾವಾಗ?

ಮೈಸೂರು ವಿಮಾನ ನಿಲ್ದಾಣದ ಸಾಮಾಜಿಕ ಜಾಲತಾಣದಲ್ಲಿ ಕನ್ನಡ  ಮರೆತು ಹಿಂದಿ ವ್ಯಾಮೋಹದತ್ತ ವಾಲುತ್ತಿರುವುದು ಕಂಡುಬರುತ್ತಿದೆ. ‘ಐ ಲವ್ ಮೈಸೂರು’ ಎಂಬ ಶೀರ್ಷಿಕೆಯುಳ್ಳ ಛಾಯಾಚಿತ್ರ ತೆಗೆಯುವ ಸ್ಥಳ ಕೂಡ ಆಂಗ್ಲಭಾಷೆಯಲ್ಲಿದೆ.
ಅದನ್ನು ಬದಲಾವಣೆ ಮಾಡುವಂತೆ ಸಂಬಂಧಪಟ್ಟವರ   ಗಮನಕ್ಕೆ ತಂದು ವರ್ಷಗಳೇ ಕಳೆದರೂ ಇನ್ನೂ ಬದಲಾವಣೆ ಆಗಿಲ್ಲ. ಆದರೆ ಐ ಲವ್ ಮಹಾರಾಷ್ಟ್ರ , ಐ ಲವ್ ಚೆನ್ನೈ ಎಂಬ ಆಕರ್ಷಕ ಸ್ವಯಂ ಛಾಯಾಚಿತ್ರಗಳ  ತೆಗೆಯುವ ಸ್ಥಳ ಆಯಾ ರಾಜ್ಯದಲ್ಲಿನ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ಅಲ್ಲಿಯ ಪ್ರಾದೇಶಿಕ ಭಾಷೆಯಲ್ಲೇ ಇರುತ್ತೆ. ಆದರೆ ಮೈಸೂರಿನಲ್ಲಿ ಮಾತ್ರ ಆಂಗ್ಲಭಾಷೆಯಲ್ಲಿದೆ. ಇದು ಕರುನಾಡೊ? ಹಿಂದಿವಾಲಾಗಳ ಬೀಡೋ?  ಈ ಅಧಿಕಾರಿಗಳ ಹಿಂದಿ ವ್ಯಾಮೋಹಕ್ಕೆ ಕಡಿವಾಣ ಯಾವಾಗ?
 -ಅರವಿಂದ್ ಶರ್ಮ, ಮೈಸೂರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ