ಭಾವೈಕ್ಯತೆಯ ಬಂಧ ಬೆಸೆಯಲಿ..!
ಹಿಂದೂ ಕ್ರಿಶ್ಚಿಯನ್ ಮುಸ್ಲಿಂ
ಧರ್ಮಗಳು ಹಲವು ಇದ್ದರೂ
ಭಾರತ ಒಂದೇ!
ರಾಮ ಏಸು ಅಲ್ಲಾ
ದೇವರುಗಳು ಹಲವು ಇದ್ದರೂ
ಭಕ್ತಿ ಭಾವ ಒಂದೇ!
ಜಾತಿ ಧರ್ಮಗಳಡಿಯಲ್ಲಿ
ಹತ್ಯೆಗಳು ನಿಲ್ಲಲಿ.
ಕೋಮುಸಂಘರ್ಷ ತಗ್ಗಲಿ.
ಸರ್ವಧರ್ಮಗಳು ಮೇಳೈಸಲಿ.
ಧಾರ್ಮಿಕ ಮನೋಭಾವಗಳಿಗೂ
ಕಿಂಚಿತ್ತೂ ಚ್ಯುತಿ ಬಾರದಿರಲಿ
ಭವ್ಯಭಾರತದ
ಭಾವೈಕ್ಯತೆಯ
ಬಂಧ ಬೆಸೆಯಲಿ!
-ಹರಳಹಳ್ಳಿಪುಟ್ಟರಾಜು, ಪಾಂಡವಪುರ.
ಸಿದ್ದರಾಮೋತ್ಸವದ ಯಶಸ್ಸು!
ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಅಂತಹದ್ದೊಂದು ಕಾರ್ಯಕ್ರಮ ನಡೆದು ಎಷ್ಟೋ ವರ್ಷಗಳೇ ಆಗಿತ್ತು. ಆಡಳಿತಾರೂಡ ಬಿಜೆಪಿ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಾಗಲೆಲ್ಲ ಅದ್ದೂರಿ ಕಾರ್ಯಕ್ರಮ ಮಾಡುತ್ತದೆ. ಜನರನ್ನು ಸೇರಿಸುತ್ತದೆ. ಸಿದ್ದರಾಮೋತ್ಸವಕ್ಕೆ ಜನರೇ ಸೇರಿದ್ದರು ಎಂಬುದು ಹೆಗ್ಗಳಿಕೆ. ಒಂದು ಸಮಾರಂಭ ಯಶಸ್ವಿಯಾದ ತಕ್ಷಣವೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬಿಡುತ್ತದೆ ಎಂದು ಭಾವಿಸಬೇಕಿಲ್ಲ. ಕೇಂದ್ರದ ಹಿಡಿತದಲ್ಲಿರುವ ಜಾರಿ ನಿರ್ದೇಶನಾಲಾಯವು ಈಗಾಗಲೇ, ರಾಹುಲ್ ಗಾಂಧಿ, ಸೋನಿಯಾಗಾಂಧಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ವಿರುದ್ಧ ತನಿಖೆ ನಡೆಸುತ್ತಿದೆ. ಇನ್ನು ಸಿದ್ದರಾಮಯ್ಯ ಒಬ್ಬರು ಬಾಕಿ. ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರ ಕೆಂಗಣ್ಣು ಯಾವಾಗ ಸಿದ್ದರಾಮಯ್ಯ ಅವರ ಮೇಲೆ ಬೀಳುತ್ತದೋ ಆವತ್ತು ಸಿದ್ದರಾಮಯ್ಯ ಅವರ ಮೇಲೂ ಇಡಿ ದಾಳಿ ಮಾಡಿದರೆ ಅಚ್ಚರಿ ಏನಿಲ್ಲ!
ನಂದಕುಮಾರ್, ಸರಸ್ವತಿಪುರಂ, ಮೈಸೂರು.
ಕೆರೆಯಾಗುವ ರಸ್ತೆ!
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ದೇವರಹಳ್ಳಿಯಲ್ಲಿ ರಸ್ತೆ ಹಾಳಾಗಿದೆ. ಗ್ರಾಮಸ್ಥರು ಹಾಗೂ ಶಾಲೆಗೆ ಹೋಗುವ ಮಕ್ಕಳು ಪರದಾಡುವ ಪರಿಸ್ಥಿತಿ ಎದುರಾಗಿದೆ. ಹಲವು ವರ್ಷಗಳಿಂದ ಈ ರಸ್ತೆ ಯಲ್ಲಿ ಶಾಲಾ ವಾಹನಗಳು ಹಾಗೂ ಖಾಸಗಿ ವಾಹನಗಳು ತೀರಗಡುತ್ತವೆ. ಈ ರಸ್ತೆಗೆ ಡಾಂಬರಿಕರಣ ಭಾಗ್ಯ ದಕ್ಕಿಲ್ಲ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣವಾಗಿ ಕೆರೆಯಾಗಿ ಪರಿವರ್ತನೆಯಾಗುತ್ತದೆ. ಗ್ರಾಮಸ್ಥರು ಹಾಗೂ ಮಕ್ಕಳಿಗೆ ರಸ್ತೆಯಲ್ಲಿ ತಿರುಗಾಡಲು ತೊಂದರೆಯಾಗುತ್ತಿದೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧಿಕಾರಿಗಳು ಇತ್ತ ಗಮನ ವಹಿಸಲಿ.
ಸಾಗರ್ ಕೆ.ಎನ್. ಮಹಾರಾಜ ಕಾಲೇಜು, ಮೈಸೂರು.
ದೇಶದ ದುರಂತ!
ಒಬ್ಬ ವಾಸ್ತು ಶಾಸ್ತ್ರ ಹೇಳುವವ ಸಾವಿರಾರು ಕೋಟಿ ಸಂಪಾದಿಸುತ್ತಾನೆ, ಒಬ್ಬ ರಾಜಕಾರಣಿಯ ಪ್ರೇಯಸಿ ನೂರಾರು ಕೋಟಿ ಅಕ್ರಮ ಹಣ ಇಟ್ಟಿರುತ್ತಾಳೆ. ಆದರೆ ಒಬ್ಬ ರೈತ ಕೇವಲ ಸಾವಿರಾರು ಸಾಲ ಮಾಡಿ
ಸಾಲ ತೀರಿಸಲಾಗದೇ, ಮರ್ಯಾದೆಗೊಸ್ಕರ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ .ಇದು ನಮ್ಮ ದೇಶದ ದುರಂತ!
– ಬೂಕನಕೆರೆ ವಿಜೇಂದ್ರ. ಮೈಸೂರು.
ನೋವಿನಲ್ಲೂ ಪದಕ ಗೆದ್ದ ಸಂಕೇತ ಸಾಗರ್
ಬರ್ನಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ ಕ್ರೀಡಾಕೂಟದ ಭಾರತ ಪದಕ ಗೆಲ್ಲುತ್ತಿರುವುದು ಸಂತೋಷದ ವಿಚಾರ. ಅದರಲ್ಲೂ ಮೂರು ಪದಕಗಳು ವೈಟ್ ಲಿಫ್ಟಿಂಗ್ ನ ಹಲವು ವಿಭಾಗದಲ್ಲಿ ಬಂದಿರುವುದು ಹೆಮ್ಮೆಯ ವಿಷಯ. ಇದರಲ್ಲಿ ಮೊದಲಿಗೆ ಸಂಕೇತ್ ಸಾಗರ್‌ರವರು ತನ್ನ ಬಲಗೈ ನೋವಿನಲ್ಲೂ ಪುರುಷರ ೫೬ ಕೆಜಿ ಭಾಗದಲ್ಲಿ ಒಟ್ಟು ೨೪೮ ಕೆಜಿ ಅಂದರೆ ೧೧೩ ಸ್ಲ್ಯಾಚ್ ಮತ್ತು ೧೩೫ ಕ್ಲೀನ್ ಹಾಗೂ ಜರ್ಕ್ ಎತ್ತುವ ಮೂಲಕ ಬೆಳ್ಳಿ ಪದಕ ಗಳಿಸಿದರು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಪದವನ್ನು ಭಾರತಕ್ಕೆ ಸಂಕೇತ್ ಸಾಗರ್ ಅವರೇ ತಂದು ಕೊಟ್ಟಿರುವುದು ಸಂತೋಷದ ವಿಚಾರ ಹಾಗೂ ಭಾರತಕ್ಕೂ ಹೆಮ್ಮೆಯ ಕ್ಷಣ.
-ನಿತಿನ್ ಹೆಚ್ ಸಿ, ಮಹಾರಾಜ ಕಾಲೇಜು, ಮೈಸೂರು.