ದಸರಾ ರಜೆಯ ಮಜ ಹೀಗಿರಲಿ!
ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ಕೋವಿಡ್ ೧೯ರ ಭಯದಿಂದಾಗಿ ಶಾಲೆಗೆ ರಜೆ ನೀಡಿ ಮಕ್ಕಳು ಗಳಿಸಬೇಕಾದ ಸಾಮರ್ಥ್ಯಗಳೆಲ್ಲವನ್ನೂ ಪಡೆಯಲು ಸಾಧ್ಯವಾಗಿಲ್ಲದ ಕಾರಣ ೨೦೨೨-೨೩ ರ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕಾ ವರ್ಷವನ್ನಾಗಿ ಸರ್ಕಾರ ಆಚರಿಸುತ್ತಿದೆ. ಈ ಕಾರಣದಿಂದಾಗಿಯೇ ಈ ಹಿಂದೆ ಇದ್ದಂತಹ ಒಂದು ತಿಂಗಳ ದಸರಾ ರಜೆಯನ್ನು ೧೪ ದಿನಗಳಿಗೆ ಕಡಿತಗೊಳಿಸಿ ಮಕ್ಕಳ ಕಲಿಕೆಗೆ ಹೆಚ್ಚು ಒತ್ತನ್ನು ಸರ್ಕಾರ ನೀಡಿದೆ. ಶಾಲೆಯಲ್ಲಿ ಮಕ್ಕಳು ಇದ್ದಾಗ ಶಾಲಾ ಪಠ್ಯ ವಿಷಯಕ್ಕೆ ಸಂಬಂಧಪಟ್ಟಂತೆ ಮಕ್ಕಳ ನಿರಂತರ ಕಲಿಕೆ ಇದ್ದೇ ಇರುತ್ತದೆ. ಆದರೆ ದಸರಾ ರಜೆಯ ಮಜವನ್ನು ಮಕ್ಕಳು ಅರ್ಥಪೂರ್ಣವಾಗಿ ಆಚರಿಸದೆ ಇದ್ದರೆ ಹೇಗೆ? ರಜಾ ಅವಧಿಯಲ್ಲಿ ಮಕ್ಕಳಿಗೆ ಒಳಾಂಗಣ ಕ್ರೀಡೆಗಳಿಗಿಂತ ಹೊರಾಂಗಣ ಕ್ರೀಡೆಗಳಿಗೆ ಹೆಚ್ಚಿನ ಒತ್ತನ್ನು ನೀಡಬೇಕು. ಗಾಳಿಪಟ ಆಡಿಸುವುದು, ಗೋಲಿ ಗಜ್ಜುಗ ಆಡುವುದು, ಚಿನ್ನಿದಾಂಡು, ಸಂಬಂಧಿಕರ ಊರುಗಳಿಗೆ ಸುತ್ತಾಟ, ಅಜ್ಜ ಅಜ್ಜಿಯರಿಂದ ಕಥೆ ಕಲಿಯುವುದು, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿಕೆ, ಜಾತ್ರೆ ಹಾಗೂ ಉತ್ಸವಗಳಲ್ಲಿ ನಾಟಕವನ್ನು ನೋಡಿ ಸಂಭ್ರಮಿಸುವುದು… ಈ ರೀತಿಯ ಹತ್ತು ಹಲವು ಕಾರ್ಯ ಚಟುವಟಿಕೆಗಳಲ್ಲಿ ಮಕ್ಕಳು ರಜಾ ಅವಧಿಯಲ್ಲಿ ಭಾಗಿಯಾದರೆ ಎಷ್ಟೊಂದು ಚೆಂದ ಅಲ್ಲವೇ? ಇದರಿಂದ ಮಕ್ಕಳು ಒತ್ತಡ ರಹಿತವಾಗಿ ಮೋಜಿನ ಜೊತೆ ರಜೆಯ ಮಜವನ್ನು ಅನುಭವಿಸಿದಂತಾಗುತ್ತದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.
ರಸ್ತೆಗಳ ಒತ್ತುವರಿ!
ಮೈಸೂರು ನಗರದ ಕೆಲವು ಬಡಾವಣೆಗಳಲ್ಲಿ ತಮ್ಮ ಮನೆಗಳಿಗೆ ಅನುಕೂಲವಾಗುವಂತಹ ವಾತಾವರಣ ಸೃಷ್ಟಿಸುವ ಭರದಲ್ಲಿ ಮೂವತ್ತು ಅಡಿ ರಸ್ತೆಯನ್ನು ನುಂಗಿ ೧೭-೧೮ ಅಡಿ ರಸ್ತೆಯನ್ನಾಗಿ ಮಾರ್ಪಡಿಸುತ್ತಿದ್ದಾರೆ. ಇದರಿಂದ ವಾಹನಗಳ ಸುಲಭ ಸಂಚಾರಕ್ಕೆ ಅಡೆತಡೆಯಾಗುತ್ತಿದೆ. ಇದರಿಂದ ಸಣ್ಣ ಸಣ್ಣ ರಸ್ತೆಯಲ್ಲಿ ವಾಹನಗಳು ಜಾಮ್ ಆಗಿ ತಿರುಗಿಸಲು ಆಗದೆ ಒದ್ದಾಟದ ಜೊತೆಗೆ ಕಿರಿಕಿರಿಯೂ ಆಗುತ್ತಿದೆ. ಹಾಗೆಯೇ ಎಷ್ಟೋ ಬಡಾವಣೆಯಲ್ಲಿನ ಇಕ್ಕೆಲ ರಸ್ತೆಯ ನಡುವೆ ನೆಟ್ಟಿರುವ ಗಿಡಗಳಿಗೆ ಬೇಲಿ ಹಾಕಿಕೊಂಡು ತಮಗೆ ಬೇಕಾದ ಹೂವು, ಹಣ್ಣಿನ ಗಿಡ ನೆಟ್ಟಿದ್ದಾರೆ, ಕೆಲವು ಪರಿಸರ ಪ್ರೇಮಿಗಳು! ಇದು ಸರಿಯಲ್ಲ. ರಸ್ತೆ ಒತ್ತುವರಿ ಮಾಡಿ ಸುಲಲಿತ ಸಂಚಾರಕ್ಕೆ ಅಡ್ಡಿ ಮಾಡುವವರ ವಿರುದ್ಧ ಪಾಲಿಕೆ ಮತ್ತು ಮುಡಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
-ಶಿವಮೊಗ್ಗ ನಾ. ದಿನೇಶ್ ಅಡಿಗ, ಮೈಸೂರು.
ನಾಡಹಬ್ಬ ಎಂದು ಘೋಷಿಸಿದ್ದು ಅರಸರು!
೧೯೭೨ರಲ್ಲಿ ಮೈಸೂರಿನವರೇ ಆದ ದೇವರಾಜ ಅರಸು ಅವರು ನಾಡಿನ ಮುಖ್ಯಮಂತ್ರಿಯಾಗಿದ್ದರು. ಅಂದಿನ ಮೈಸೂರಿನ ಶಾಸಕ ಜಯದೇವರಾಜ ಅರಸು ಅವರು ಸಂಬಂಧಿಕರಾಗಿದ್ದರು. ಆಗ ಶಾಸಕರ ನೇತೃತ್ವದಲ್ಲಿ ಮುಖ್ಯ–ಮಂತ್ರಿ ದೇವರಾಜು ಅರಸು ಅವರನ್ನು ಭೇಟಿಯಾಗಿ ದಸರಾ ಹಬ್ಬವನ್ನು ಸರ್ಕಾರವೇ ಮುಂದಾಳತ್ವ ತೆಗೆದುಕೊಂಡು ಆಚರಿಸುವಂತೆ ಕೋರುತ್ತಾರೆ. ಆ ಮನವಿ–ಯನ್ನು ಒಪ್ಪಿದ ದೇವರಾಜ ಅರಸು ಅವರು, ಸರ್ಕಾರವೇ ದಸರಾ ಆಚರಿಸುವ ಸಂಪ್ರದಾಯವನ್ನು ಆರಂಭಿಸುತ್ತಾರೆ. ಕನ್ನಡಾಂಬೆ ಹಾಗೂ ಭಾರತಾಂಬೆಯ ಫೋಟೋ ಬದಲು ನಾಡದೇವತೆಯಾದ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವಂತೆ ಸೂಚಿಸುತ್ತಾರೆ. ಅಷ್ಟೇ ಅಲ್ಲ, ಅದಕ್ಕಾಗಿ ಅರಮನೆಯಲ್ಲಿದ್ದ ಬಂಗಾರದ ಸಿಂಹಾಸನವನ್ನೂ ತರಿಸುತ್ತಾರೆ. ದಸರಾ ಹಬ್ಬಕ್ಕಾಗಿ ಸರ್ಕಾರದಿಂದ ಇಂತಿಷ್ಟು ಹಣವನ್ನು ಕೂಡ ಮೀಸಲಿಡುತ್ತಾರೆ. ಅಲ್ಲಿಂದಲೇ ದಸರಾ ಅಧಿಕೃತವಾಗಿ ನಾಡಹಬ್ಬವಾಗಿದ್ದು. ಜಂಬೂ ಸವಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ಮೆರವಣಿಗೆ ಆರಂಭವಾಗಿದ್ದು. ದಸರಾ ಮೆರವಣಿಗೆಯಲ್ಲಿ ತಾಯಿ ಚಾಮುಂ–ಡಿಗೆ ಪುಷ್ಪಾರ್ಚನೆ ಮಾಡಿದ ಮೊಟ್ಟ ಮೊದಲ ಮುಖ್ಯಮಂತ್ರಿ ದೇವ–ರಾಜ ಅರಸು ಅವರೇ. ಅವರು ಆರಂಭಿಸಿದ ನಾಡಹಬ್ಬ ಎಂದಿಗೂ ನಿಂತಿಲ್ಲ.
-ಜಾಕೀರ್ ಹುಸೇನ್, ಅಧ್ಯಕ್ಷರು, ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ, ಮೈಸೂರು.