ಸಿಹಿ ಹಂಚಿಕೆಯಲ್ಲಿ ಕಹಿ ಅನುಭವ!
ಗಾಂಧಿ ಚೌಕದಲ್ಲಿ ಇರುವ ಮೈಸೂರು ಕೋ- ಆಪರೇಟಿವ್ ಬ್ಯಾಂಕಿನ ಸಾಮಾನ್ಯ ಸಭೆ ಕಳೆದ ಭಾನುವಾರ ಜೆ.ಕೆ.ಮೈದಾನದಲ್ಲಿ ಜರುಗಿತು. ಬ್ಯಾಂಕಿನಲ್ಲಿ ಒಟ್ಟು ೩೫ ಸಾವಿರ ಸದಸ್ಯರಿದ್ದು, ಸಿಹಿ ಪೊಟ್ಟಣ ಹಂಚಿಕೆಯಲ್ಲಿ ಗೊಂದಲದ ವಾತಾವರಣ ಕಂಡು ಬಂತು. ಸಯ್ಯಾಜಿರಾವ್ ರಸ್ತೆಯಲ್ಲಿರುವ ಇಂದ್ರಭವನ್ ಪಾರಾಸ್‌ನಿಂದ ತಯಾರಿಸಿದ ಸಿಹಿ ಹಾಗೂ ಖಾರದ ಪೊಟ್ಟಣಗಳನ್ನು ಬ್ಯಾಂಕಿನ ಸದಸ್ಯರಿಗೆ ವಿತರಿಸಲಾಯಿತು. ಆದರೆ ಸಿಹಿ ಪೊಟ್ಟಣ ವಿತರಣೆ ಪ್ರಾರಂಭವಾದ ಸ್ವಲ್ಪ ಹೊತ್ತಿನಲ್ಲೇ ಖಾಲಿಯಾದವು. ಇದರಿಂದ ಬೇಸತ್ತ ಸದಸ್ಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯರು ಬುಧವಾರ ಬೆಳಿಗ್ಗೆ ೧೦.೩೦ರಿಂದ ಸಂಜೆ ೬ ಗಂಟೆವರೆಗೆ ಬ್ಯಾಂಕಿಗೆ ಬಂದು ತಮ್ಮ ಕೂಪನ್‌ಗಳನ್ನು ತೋರಿಸಿ ಸಿಹಿ ಪೊಟ್ಟಣಗಳನ್ನು ಪಡೆದುಕೊಳ್ಳಿ ಎಂದು ಘೋಷಿಸಿದರು. ನಿನ್ನೆ ಬ್ಯಾಂಕಿಗೆ ಬಂದ ಸದಸ್ಯರು ಕೂಪನ್ ಇರುವವರು ಸಿಹಿ ಪೊಟ್ಟಣಗಳನ್ನು ಪಡೆದರು. ಆದರೆ, ಸಾಮಾನ್ಯ ಸಭೆಯಲ್ಲಿ ಕೂಪನ್ ಮುಗಿದ ಬಳಿಕ ನೀವು ಬುಧವಾರ ಬ್ಯಾಂಕಿಗೆ ಹೋಗಿ ಪಾಸ್ ಬುಕ್ ತೋರಿಸಿ ಸಿಹಿ ಪೊಟ್ಟಣಗಳನ್ನು ಪಡೆದುಕೊಳ್ಳಿ ಎಂದು ತಿಳಿಸಲಾಗಿತ್ತು. ಅದನ್ನು ನಂಬಿಕೊಂಡ ಕೆಲವು ವೃದ್ಧ ಸದಸ್ಯರು ಬ್ಯಾಂಕಿಗೆ ಬಂದು ಪಾಸ್‌ಬುಕ್ ತೋರಿಸಿದಾಗ ನಿಮಗೆ ಯಾರು ಈ ರೀತಿ ಹೇಳಿ–ದರು? ಯಾರ್ಯಾರಿಗೆ ಸಿಹಿ ಪೊಟ್ಟಣ ಸಿಕ್ಕಿಲ್ಲವೋ ಅವರು ಒಂದು ಪತ್ರ–ವನ್ನು ಬರೆದು ಕೊಡಿ ನಾನು ಅಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದು ಓರ್ವ ಸಿಬ್ಬಂದಿ ತಿಳಿಸಿದರು. ಎಷ್ಟೋ ಮಂದಿ ಸದಸ್ಯರು ಗಾಡಿಗೆ ಪೆಟ್ರೋಲ್ ಹಾಕಿಸಿಕೊಂಡು ಬಂದು ಬ್ಯಾಂಕಿನ ಆಡಳಿತ ಮಂಡಳಿಯನ್ನು ಶಪಿಸುತ್ತಾ ಮನೆಗೆ ಹಿಂತಿರುಗಿದರು. ಸಿಹಿ ಪೊಟ್ಟಣ ವಿತರಣೆಯನ್ನು ಸರಿಯಾದ ಕ್ರಮದಲ್ಲಿ ನಡೆಸಿ, ಯಾರಿಗೂ ಅನ್ಯಾಯವಾಗದಂತೆ ಇನ್ನು ಮುಂದಾದರೂ ಸದರಿ ಬ್ಯಾಂಕಿನ ಆಡಳಿತ ಮಂಡಳಿ ಕ್ರಮ ಕೈಗೊಳ್ಳುವುದೇ?
-ಶ್ರೀಕಂಠೇಗೌಡ, ರಾಮಕೃಷ್ಣನಗರ, ಮೈಸೂರು.
ನಗರಪಾಲಿಕೆ ಸದಸ್ಯರ ಶ್ಲಾಘನೀಯ ಕೆಲಸ !
ಮೈಸೂರಿನ ವಿ.ವಿ.ಮೊಹಲ್ಲಾದ ೨ನೇ ಮುಖ್ಯರಸ್ತೆಯ ಹಿಂದೆ ಇರುವ ಕನ್ಸರ್ವೆನ್ಸಿಯಲ್ಲಿ ಸಾಕಷ್ಟು ಗಿಡ, ಗಂಟಿಗಳು ಬೆಳೆದು ನಿಂತಿದ್ದವು. ಹುಲ್ಲುಗಳು ಬೃಹದಾಕಾರವಾಗಿ ಬೆಳೆದು ಪರಿಸರ ಅನೈರ್ಮಲ್ಯದಿಂದ
ಕೂಡಿತ್ತು. ಇದನ್ನು ಗಮನಿಸಿದ ವಾರ್ಡ್ ನಂ.೧೯ರ ಪಾಲಿಕೆ ಸದಸ್ಯೆ ಭಾಗ್ಯ ಮಹದೇಶ್ ಅವರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ, ಜೆಸಿಬಿಯಿಂದ ಅಲ್ಲಿ ಬೆಳೆದಿದ್ದ ಗಿಡ, ಗಂಟಿಗಳನ್ನು
ತೆಗೆಸಿರುವುದು ತುಂಬಾ ಶ್ಲಾಘನೀಯ ಕಾರ್ಯ–ವಾಗಿದೆ. ಇನ್ನೊಂದು ಸಮಸ್ಯೆ ಎಂದರೆ ೨ನೇ ಮುಖ್ಯರಸ್ತೆಯಲ್ಲಿರುವ ಜನರು ಎಲ್ಲೆಂದರಲ್ಲಿ ಒಣ ಕಸ ಹಾಕುತ್ತಿದ್ದಾರೆ. ಇದರ ಜೊತೆಗೆ ರಾತ್ರಿ ಸಮಯದಲ್ಲಿ ಫಾಸ್ಟ್‌ಫುಡ್‌ನವರು ತಮ್ಮ ವ್ಯಾಪಾರ ಮುಗಿದು ಹೊರಡುವ ಮುನ್ನ ಎಲ್ಲೆಂದರಲ್ಲಿ ಕಾಗದ ಚೂರುಗಳನ್ನು ಎಸೆಯದೇ ಒಂದು ಟಬ್‌ನಲ್ಲಿ
ಅದನ್ನು ಹಾಕಿದರೆ ಪರಿಸರ ಸ್ವಚ್ಛವಾಗಿರುತ್ತದೆ. ಪಾಲಿಕೆಯು ದಂಡ ವಸೂಲು ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರೂ ಜನರು ಕ್ಯಾರೇ ಅನ್ನುತ್ತಿಲ್ಲ. ಅದಕ್ಕೆ ಈ ರಸ್ತೆಯಲ್ಲಿ ಸಿಸಿ ಕ್ಯಾಮೆರಾವನ್ನು
ಅಳವಡಿಸಿದರೆ ಆಗ ಜನ ಒಣ ಕಸ ಎಸೆಯುವುದನ್ನು ತಪ್ಪಿಸಬಹುದು. ನಗರಪಾಲಿಕೆಯವರು ಆದಷ್ಟು ಬೇಗ ಕ್ರಮ ಕೈಗೊಳ್ಳುವರೆಂದು ಆಶಿಸೋಣವೇ?
-ಜಿ.ಪಿ.ಹರೀಶ್, ವಿ.ವಿ.ಮೊಹಲ್ಲ, ಮೈಸೂರು.
ಫ್ಲೆಕ್ಸ್ ಹಾವಳಿ ತಪ್ಪಿಸಿ!
ಇತ್ತೀಚೆಗೆ ರಾಜಕೀಯ ಮುಖಂಡರ ಜನ್ಮ ದಿನದ ಪ್ರಯುಕ್ತ ಮೈಸೂರು ನಗರಾದ್ಯಂತ ಫ್ಲೆಕ್ಸ್ ಗಳು ರಾರಾಜಿಸಲ್ಪಟ್ಟವು. ಈ ಹಿಂದೆ ಮೈಸೂರು ಮಹಾನಗರಪಾಲಿಕೆಯವರು ಖಾಸಗಿ ಫ್ಲೆಕ್ಸ್‌ಗಳಿಗೆ ಕಡಿವಾಣ ಹಾಕಿದ್ದರು. ಏನಾದರೂ ಕಾನೂನು ಮೀರಿ ಫ್ಲೆಕ್ಸ್‌ಗಳನ್ನು ಅಳವಡಿಸಿದರೆ ಅವರಿಗೆ ದಂಡ ವಿಧಿಸಲಾ–ಗುತ್ತಿತ್ತು. ಆದರೆ ಈಚಿನ ದಿನಗಳಲ್ಲಿ ಪ್ರಮುಖ–ವಾಗಿ ರಾಜಕೀಯ ಮುಖಂಡರ ಹುಟ್ಟುಹಬ್ಬದ ಪ್ರಯುಕ್ತ ಫ್ಲೆಕ್ಸ್‌ಗಳು ಎಲ್ಲೆಂದರಲ್ಲಿ ರಾರಾಜಿಸುತ್ತಿವೆ. ಲಕ್ಷಾಂತರ ರೂ. ವೆಚ್ಚ ಮಾಡಿ, ಫ್ಲೆಕ್ಸ್‌ಗಳನ್ನು ಹಾಕುವುದರ ಬದಲು ಹುಟ್ಟುಹಬ್ಬ ಆಚರಿಸಿಕೊಳ್ಳುವವರು ಯಾವುದಾ–ದರೂ ಅನಾಥ ಆಶ್ರಮಕ್ಕೆ ತೆರಳಿ ಅಲ್ಲಿರುವ ನಿರ್ಗತಿಕ ಜನರೊಂದಿಗೆ ಹುಟ್ಟುಹಬ್ಬ–ವನ್ನು ಆಚರಿಸಿಕೊಂಡರೆ ಆ ಸೇವೆ ಶಾಶ್ವತವಾಗಿ ಉಳಿಯು–ವುದು. ಇನ್ನು ಮುಂದಾ–ದರೂ ಇಂತಹ ಆಡಂಬರದ ಹುಟ್ಟುಹಬ್ಬಗಳಿಗೆ ಕಡಿವಾಣ ಹಾಕಿ ಆ ಹಣವನ್ನು ಬಡಬಗ್ಗರಿಗೆ, ನಿರ್ಗತಿಕರಿಗೆ ವಿನಿಯೋಗಿಸಲಿ ಎಂಬುದೇ ನಮ್ಮೆಲ್ಲರ ಮನವಿ.
-ಸೌಮ್ಯ, ಜಯನಗರ, ಮೈಸೂರು.