Mysore
21
broken clouds

Social Media

ಸೋಮವಾರ, 13 ಜನವರಿ 2025
Light
Dark

ಆಂದೋಲನ ಓದುಗರ ಪತ್ರ : 31 ಬುಧವಾರ 2022

ನಿಷ್ಪಕ್ಷಪಾತ ತನಿಖೆ ನಡೆಯಲಿ!


ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಬಂದಿದೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಶ್ರೀಗಳು ಆರೋಪಿಸಿದ್ದಾರೆ.  ಈ ನೆಲದ ಕಾನೂನನ್ನು ಗೌರವಿಸುತ್ತೇನೆ, ತನಿಖೆಗೆ ಸಹಕರಿಸುತ್ತೇನೆ ಎಂದೂ  ಹೇಳಿದ್ದಾರೆ.  ತಮ್ಮ ವೈಚಾರಿಕ ನಡೆ ನುಡಿಗಳಿಂದಾಗಿ ಜನರ ಮೆಚ್ಚುಗೆ ಪಡೆದಿರುವ  ಶ್ರೀಗಳು ಇಂತಹ ಆರೋಪ ಬಾರದಂತೆ ಎಚ್ಚರಿಕೆ ವಹಿಸಬೇಕಿತ್ತು. ಷಡ್ಯಂತ್ರ ಮಾಡುವವರ ಬಣ್ಣ ಬಯಲು ಮಾಡಬೇಕಿತ್ತು. ಮುರುಘಾ ಮಠದಲ್ಲಿ ಆಡಳಿತಕ್ಕಾಗಿ ಕಿತ್ತಾಟ ನಡೆಯುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.  ತಪ್ಪು ಎಸಗಿದ್ದಾರೋ ಇಲ್ಲವೋ ಅದು ತನಿಖೆಯಿಂದ ಗೊತ್ತಾಗುತ್ತದೆ.  ಈ ಘಟನೆಯ ಬಗ್ಗೆ ರಾಜಕೀಯ ಹಸ್ತಕ್ಷೇಪ ಇಲ್ಲದೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಸತ್ಯವನ್ನು ಹೊರತರಬೇಕು.
-ಚಂದ್ರಶೇಖರ್ ಚಿಲ್ಕುಂದ, ಕ್ಯಾತಮಾರನಹಳ್ಳಿ, ಮೈಸೂರು.

ಗಣೇಶ ಮೂರ್ತಿಯ ತಯಾರಕರನ್ನು ಗೌರವಿಸಿ


ಗಣೇಶನ ಹಬ್ಬ ಬಂದರೆ ವಯಸ್ಸಿನ  ಅಂತರವಿಲ್ಲದೆ ಪ್ರತಿಯೊಬ್ಬರೂ ಹಲವಾರು ಬಡಾವಣೆಗಳಲ್ಲಿ ಗಣೇಶನನ್ನು ಪ್ರತ್ಯೇಕವಾಗಿ ಕೂರಿಸಿ ಸಂಭ್ರಮಿಸುತ್ತಾರೆ.  ಕಲಾವಿದನ ಕೈ ಚಳಕದಲ್ಲಿ ಗಣೇಶನ ಮೂರ್ತಿಯು ಅತ್ಯದ್ಭುತವಾಗಿ ಅರಳುತ್ತದೆ. ಈ ಸಂದರ್ಭದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿ ಅನೇಕ ಗಣ್ಯರಿಗೆ ಸನ್ಮಾನಿಸುತ್ತಾರೆ.  ಇದೇ ಸಂದರ್ಭದಲ್ಲಿ ಗಣೇಶನನ್ನು ತಯಾರಿಸಿದ ಕಲಾವಿದರಿಗೂ ಗೌರವ ನೀಡಿ ಸನ್ಮಾನಿಸಿ. ಇದರಿಂದ ಅವರು ಸಂತೋಷಗೊಂಡು ವಿವಿಧ ಬಗೆಯ ಗಣೇಶನನ್ನು ತಯಾರಿಸಲು ಸ್ಫೂರ್ತಿ ಬರುತ್ತದೆ.   ಎಲ್ಲೆಡೆ ಗಣೇಶ ಮೂರ್ತಿಯ ತಯಾರಕರಾದ ಕಲಾವಿದರನ್ನು ಗೌರವಿಸಿ.  ಅವರು ಪಟ್ಟ ಶ್ರಮವು ಸಾರ್ಥಕವೆನಿಸುತ್ತದೆ. ಅವರ ಸಂತೋಷವು ದುಪ್ಪಟ್ಟವಾಗುತ್ತದೆ. ಎಲ್ಲರೂ ಈ ರೀತಿ ಯೋಚಿಸಿದರೆ ಒಳ್ಳೆಯದು.
 -ಎಂ.ಎಸ್.ಉಷಾ ಪ್ರಕಾಶ್, ಎಸ್.ಬಿ.ಎಂ.ಕಾಲೋನಿ, ಮೈಸೂರು.

ಮನೆಗೊಂದು ತೆಪ್ಪ ಬೇಕಿದೆ!

ರಾಮನಗರದಲ್ಲಿ
ಬಿದ್ದ ಮಳೆ ಅಬ್ಬರ
ನೋಡಿದರೆ….
ಮುಂದಿನ ದಿನಗಳಲ್ಲಿ
ಯಾವುದಕ್ಕೂ
ಮನೆಗೊಂದು
ಬೇಕೇ ಬೇಕು ತೆಪ್ಪ
ತೆಪ್ಪ ಇಲ್ಲದವನು
ಆಗುವನು ಬೆಪ್ಪ!
 -ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

ಗುಂಡಿಬಿದ್ದ ರಸ್ತೆ!

ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಮತ್ತು ಹುರ ಮುಖ್ಯ ರಸ್ತೆಯು ಗುಂಡಿಮಯವಾಗಿದ್ದು, ಕಾರ್ಯ, ಮಾದಾಪುರ ಗ್ರಾಮಗಳಲ್ಲಿ ವಾಹನಗಳು ಸಂಚರಿಸಲು  ಕಷ್ಟವಾಗಿದೆ. ವಾಹನ ಸವಾರರು ಸರ್ಕಸ್ ಮಾಡಿಕೊಂಡು ಜೀವ ಭಯದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಈ ರಸ್ತೆಯು ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವುದರಿಂದ  ನೂರಾರು ರೈತರು ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಈ ಮಾರ್ಗದಲ್ಲೇ ಸಂಚರಿಸುತ್ತಾರೆ.  ದುಗ್ಗಹಳ್ಳಿ ಗೇಟ್, ಪೆಟ್ರೋಲ್ ಬಂಕ್‌ನ ಹತ್ತಿರ ರಸ್ತೆ  ತುಂಬಾ ಹದಗೆಟ್ಟಿದ್ದು ಅನೇಕ ಗುಂಡಿಗಳಿವೆ. ಮಳೆ ಬಂದರೆ  ಕೆಸರುಮಯವಾಗಿ ಸಂಚರಿಸಲು ಸಾಧ್ಯವಾಗುವುದೇ ಇಲ್ಲ. ಮುಖ್ಯ ರಸ್ತೆಯ ಸ್ಥಿತಿ ಈ ರೀತಿ ಆದರೆ, ಇನ್ನು ಗ್ರಾಮಗಳ ರಸ್ತೆಯ ಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ.  ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕೂಡಲೇ ಸ್ಪಂದಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.
-ಪರಶಿವಮೂರ್ತಿ ಎನ್.ಪಿ, ನಂಜೀಪುರ, ಸರಗೂರು ತಾಲ್ಲೂಕು.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ