ನಿಜ ಬಣ್ಣ ಬಯಲಾಗಲಿದೆ!
ಅಂತೂ ಇಂತೂ ರಾಜ್ಯ ಸರ್ಕಾರವು ಮೈಸೂರು ಮೇಯರ್ ಆಯ್ಕೆಗೆ ಮೀಸಲಾತಿ ಪ್ರಕಟಿಸಿದೆ. ಮಹಾನಗರ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಇಲ್ಲದೇ ಇರುವುದರಿಂದ ರಾಜಕೀಯ ಪಕ್ಷಗಳ ನಿಜವಾದ ಬಣ್ಣ ತಿಳಿಯಲಿದು ಸಕಾಲ. ಇದುವರೆಗೆ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದ ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಏರಲು ಮೈತ್ರಿಗೆ ಮುಂದಾಗುತ್ತವೆ. ಅದುವರೆಗೆ ಮಾಡಿದ ಆರೋಪ ಪ್ರತ್ಯಾರೋಪಗಳೆಲ್ಲವೂ ‘ಫ್ರೆಂಡ್ಲಿ ಕಾಮೆಂಟ್ಸ್’ಗಳಾಗಿ ಪರಿವರ್ತನೆಯಾಗುತ್ತವೆ. ಅಧಿಕಾರ ಗ್ರಹಿಸಲು ತತ್ವ ಸಿದ್ಧಾಂತಗಳನ್ನು ಬದಿಗೊತ್ತಿ ಬಿಡುವ ರಾಜಕೀಯ ಪಕ್ಷಗಳ ಗುರಿ ಏನೆಂಬುದು ಗೊತ್ತಾಗುತ್ತದೆ.
-ರಾಜು, ಕೆಸರೆ, ಮೈಸೂರು.
ದಸರದ ಹೊತ್ತಿಗಾದರೂ ರಸ್ತೆ ದುರಸ್ತಿ ಮಾಡಿ!
ಕೆಲವು ತಿಂಗಳ ಹಿಂದೆ ಯೋಗ ದಿನಾಚರಣೆಗೆಂದು ಪ್ರಧಾನಿ ಮೋದಿ ಅವರು ಮೈಸೂರಿಗೆ ಬಂದ ಕಾರಣ ಅವರು ಸಾಗುವ ಮಾರ್ಗದಲ್ಲಿನ ರಸ್ತೆಗಳಿಗೆ ದುರಸ್ತಿ ಭಾಗ್ಯ ದಕ್ಕಿತ್ತು. ಆ ರಸ್ತೆಗಳು ಅಷ್ಟೇ ಬೇಗನೆ ಹಾಳಾದವು. ಆದರೆ, ಮೈಸೂರಿನ ಬಹುತೇಕ ರಸ್ತೆಗಳಿಗೆ ದುರಸ್ತಿ ಭಾಗ್ಯ ಸಿಕ್ಕಿಲ್ಲ. ಬಹುತೇಕ ರಸ್ತೆಗಳು ಮಳೆ ಬಂದರೆ ಸಣ್ಣ ಕೆರೆಯಂತೆ, ನೀರಿನ ಗುಂಡಿಯಂತೆ, ಕೆಸರು ಗದ್ದೆಯಂತಾಗುತ್ತವೆ. ಪಾದಚಾರಿಗಳು ಮತ್ತು ವಾಹನ ಚಾಲಕರು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಮಾಡಬೇಕಾಗುತ್ತದೆ. ನಮ್ಮ ಹೆಮ್ಮೆಯ ಮೈಸೂರಿನ ದಸರಾ ಹಬ್ಬದ ಹೊತ್ತಿಗಾದರೂ ನಗರದ ಎಲ್ಲಾ ರಸ್ತೆಗಳನ್ನು ದುಸಸ್ತಿಗೊಳಿಸಿ. ದಸರಾಗೆ ಬರುವ ಜನರು ಮೆಚ್ಚುಗೆಯಿಂದ ಮೈಸೂರಿನ ಬಗ್ಗೆ ಮಾತನಾಡಲಿ. ಪ್ರವಾಸಿಗರ ದಸರಾ ಭೇಟಿಯು ನೆಮ್ಮದಿಯ ಪಯಣವಾಗಲಿ
-ಸಿಂಚನ ಎಲ್., ಮಹಾಜನ ಕಾಲೇಜು, ಮೈಸೂರು.
‘ವಿವೇಕ’ ಎಲ್ಲಿದೆ?
ಮಹಾರಾಣಿ (ಎನ್.ಟಿ.ಎಂ.) ವಿದ್ಯಾಸಂಸ್ಥೆಯು ಇದ್ದ ಶಾಲಾ ಸಂಕೀರ್ಣವನ್ನು ದಬ್ಬಾಳಿಕೆಯಿಂದ (ಪಾರಂಪರಿಕ ಶಾಲಾಭವನ ಎನ್ನುವುದನ್ನೂ ಪರಿಗಣಿಸದೆ) ಹಾಳುಗೆಡವಲಾಯಿತು. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆಂದು ನಿರ್ಮಿಸಿದ್ದ ಶಾಲೆಯು ಕೆಡವಲ್ಪಟ್ಟಿದ್ದನ್ನು ವಿವೇಕಾನಂದರು ಇದ್ದಿದ್ದರೆ, ಅವರಿಗೆ ಹಿತವೆನಿಸುತ್ತಿತ್ತೇ ಎಂದು ಆಲೋಚಿಸಬೇಕು. ಇದರಿಂದ ರಾಮಕೃಷ್ಣತ್ರಯರು- ಶ್ರೀರಾಮಕೃಷ್ಣ, ಶ್ರೀಶಾರದ, ವಿವೇಕಾನಂದರ ಆತ್ಮಗಳಿಗೆ ಶಾಂತಿ ದೊರೆಯುತ್ತದೆಯೇ? ಬಾಲಿಕಾ ಶಿಕ್ಷಣಕ್ಕೆ ಇದ್ದ ಏರ್ಪಾಡನ್ನು ತೆರವುಗೊಳಿಸಿ ಅಲ್ಲಿ ‘ವಿವೇಕ’ ಸ್ಮಾರಕ ರಚಿಸಿದರೆ ಅದು ಬರೆ ವಿಷಾದ- ಸ್ಮಾರಕ ಎನಿಸುತ್ತದೆ. ಈ ಅಂಶವನ್ನು ಸಂಬಂಧ ಪಟ್ಟ ಮಂದಿ ಅರಿವಿನಲ್ಲಿಸಿಕೊಳ್ಳಬೇಕು
-ಡಿ ವಿ ಮೋಹನ್ ಪ್ರಕಾಶ್, ಗೋಕುಲ, ಮೈಸೂರು.
ಪ್ರತಿಷ್ಠೆಯ ಜತೆ ಆರೋಪವೂ ಬರಲಿದೆ!
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ‘ಮೊಟ್ಟೆ ಎಸೆತ’ ಪ್ರಕರಣವನ್ನು ಗಂಭೀರವಾಗಿ, ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿ ಮಡಿಕೇರಿಗೆ ಪಾದಯಾತ್ರೆ ಹೊರಟಿದ್ದು, ಸದ್ಯಕ್ಕೆ ಮುಂದೂಡಿದ್ದಾರೆ. ಇದರಿಂದ ತಾನೊಬ್ಬ ಬಲಿಷ್ಠ ನಾಯಕ ಎಂದು ತೋರ್ಪಡಿಸಿಕೊಳ್ಳಬಹುದು. ಆದರೆ, ಮುದೊಂದು ದಿನ ‘ಕೊಡವರ ವಿರೋಧಿ’ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗಲೂ ಬಹುದು!
-ಬೂಕನಕೆರೆ ವಿಜೇಂದ್ರ. ಮೈಸೂರು.
ತ್ವರಿತವಾಗಿ ರೈತರಿಗೆ ಹಣ ಪಾವತಿಸಿ
ಪಿರಿಯಾಪಟ್ಟಣ ತಾಲ್ಲೂಕಿನ ಎಪಿಎಂಸಿಯಲ್ಲಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ರೈತರಿಗೆ ಇನ್ನೂ ಹಣಪಾವತಿಯಾಗಿಲ್ಲ. ಜೂನ್ ಕೊನೆ ವಾರದಲ್ಲಿ ಮಾರಾಟ ಮಾಡಿದ ರೈತರು ಹಣ ಬಾರದೆ ಸಂಕಷ್ಟದಲ್ಲಿದ್ದಾರೆ. ಸಾಮಾನ್ಯವಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ ಒಂದು ವಾರದೊಳಗೆ ಹಣ ರೈತರ ಖಾತೆಗೆ ಜಮೆಯಾಗುತ್ತಿತ್ತು. ಆದರೆ, ಈಗ ತೀರಾ ವಿಳಂಬವಾಗುತ್ತಿದೆ. ತಾಲೂಕಿನ ಸುಮಾರು ೧೫೦೦ ರೈತರಿಗೆ ಇನ್ನು ಹಣ ಪಾವತಿಯಾಗಿಲ್ಲ.
ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಫಂಡ್ ಬಿಡುಗಡೆಯಾಗಿಲ್ಲ ಎಂದು ನೆಪ ಹೇಳುತ್ತಾರೆ. ರಾಗಿ ಹಣವನ್ನೇ ನಂಬಿರುವ ರೈತರೀಗ ಅತಂತ್ರರಾಗಿದ್ದಾರೆ. ಸರ್ಕಾರ ಕೂಡಲೇ ರಾಗಿ ಮಾರಾಟ ಮಾಡಿದ ರೈತರಿಗೆ ತ್ವರಿತವಾಗಿ ಹಣ ಬಿಡುಗಡೆ ಮಾಡಬೇಕು.
-ಎ ಎಸ್ ಗೋವಿಂದೇಗೌಡ, ಅರೇನಹಳ್ಳಿ, ಪಿರಿಯಾಪಟ್ಟಣ ತಾಲ್ಲೂಕು.