Mysore
21
overcast clouds
Light
Dark

ಆಂದೋಲನ ಓದುಗರ ಪತ್ರ : 23 ಮಂಗಳವಾರ 2022

ಬೇಡದ ಕೆಲಸಕ್ಕೆ ಪಾಲಿಕೆ ಅಸ್ತು ಅಂದಿದ್ದೇಕೆ?

ಮೈಸೂರಿನಲ್ಲಿರುವ ಪಾರ್ಕುಗಳ ಸುತ್ತ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸುತ್ತಿರುವುದು ಕಂಡು ಬಂದಿದೆ. ವಿಪರ್ಯಾಸವೆಂದರೆ ಅಲ್ಲಿ ಮೊದಲೇ ಇದ್ದ ಗ್ರಿಲ್ ಗಳನ್ನು ತೆಗೆದು ಹೊಸ ಗ್ರಿಲ್ ಅಳವಡಿಸುತ್ತಿರುವುದು. ಇದು  ಅನವಶ್ಯಕವಾಗಿ ಖರ್ಚು ಮಾಡುತ್ತಿರುವುದಕ್ಕೆ ಸೂಕ್ತ ಉದಾಹರಣೆ. ಚೆನ್ನಾಗಿಯೇ ಇರುವ ಗ್ರಿಲ್‌ಗಳನ್ನು ಕಿತ್ತು ಅಲ್ಲಿಗೆ ಹೊಸ ಗ್ರಿಲ್ ಹಾಕುತ್ತಿರುವುದರ ಉದ್ದೇಶ ಏನೆಂದು ತಿಳಿಯದಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಸಾರ್ವಜನಿಕರ ಬಳಕೆ ವಸ್ತುಗಳ ಮೇಲೆ ಮನಬಂದಂತೆ ತೆರಿಗೆ ವಿಧಿಸುವ ಸರ್ಕಾರಗಳು ಈ ತರದ ಅನವಶ್ಯಕ ಕಾಮಗಾರಿಗೆ ಹಣ ಪೋಲು ಮಾಡುವುದು ಎಷ್ಟು ನ್ಯಾಯ? ಈ ಹಣದಲ್ಲಿ ಬೇರೆ ಅಭಿವೃದ್ಧಿ ಕೆಲಸ ಕೈಗೊಳ್ಳಲು ಪಾಲಿಕೆ ಯೋಚಿಸಲಿಲ್ಲವೇ? ಒಂದು ವೇಳೆ ಅದು ಪಾರ್ಕು ಅಭಿವೃದ್ಧಿಗೆ ಇರುವ ಹಣವಾದರೆ ಗಿಡಗಂಟಿ ಬೆಳೆದು ಸಾರ್ವಜನಿಕರೂ ಕೂರಲೂ ಆಗದ ಪಾರ್ಕುಗಳನ್ನಾದರೂ ಅಭಿವೃದ್ಧಿಪಡಿಸಬಹುದಿತ್ತು. ಸಾರ್ವಜನಿಕರ ಹಣ ಪೋಲಾಗದಂತೆ ಯೋಜನೆ ರೂಪಿಸುವುದು ಪಾಲಿಕೆಯ ಜವಾಬ್ದಾರಿ ಕೂಡ.

-ಸೋಮಶೇಖರ ಯು.ಟಿ., ಮೈಸೂರು.


ಮೊಟ್ಟೆ ಎಸೆತ ಖಂಡನೀಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಅವರಿಗೆ ದಿಕ್ಕಾರ ಕೂಗಿ ಅವಮಾನಿ ಸಿರುವುದು ಖಂಡನೀಯ. ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯಾಗಿ ಅವರ ಸಾಧನೆ ಸ್ಮರಣಿಯ. ಇವರ ಹುಟ್ಟು ಹಬ್ಬದ ಅಂಗವಾಗಿ ನಡೆದ ಸಮಾರಂಭ, ಜನ ಮನ್ನಣೆಯಿಂದ  ಬಿಜೆಪಿಯವರು ವಿಚಲಿತರಾದಂತೆ ಕಾಣುತ್ತಿದ್ದಾರೆ. ಇದನ್ನು ಮೊಟ್ಟೆ ಎಸೆತವೇ ಸಾಕ್ಷೀಕರಿಸುತ್ತದೆ.  ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರೀವಾಲ್ ಅವರಿಗೆ ಚುನಾವಣಾ ಪ್ರಚಾರದ ವೇಳೆ ಕಿಡಿಗೇಡಿಗಳು  ಶೂ ಎಸೆದು, ಕಪಾಳಮೋಕ್ಷ ಮಾಡಿದ್ದು  ಜಗಜ್ಜಾಹಿರಾಗಿತ್ತು. ಇಂತಹ ಘಟನೆಯಿಂದ ಅವರು ವಿಚಲಿತರಾಗಲಿಲ್ಲ. ಬದಲಿಗೆ ಚುನಾವಣೆಯಲ್ಲಿ ಗೆದ್ದು ದೆಹಲಿಯ ಮುಖ್ಯಮಂತ್ರಿಯಾದರು. ಕಾಕತಾಳಿಯ ಎಂಬಂತೆ ಸಿದ್ದರಾಮಯ್ಯ ಅವರಿಗೂ ಹೀಗೆ ಆದರೂ ಅಚ್ಚರಿ ಇಲ್ಲ. ಏಕೆಂದರೆ ಸಿದ್ದರಾಮಯ್ಯ ಓರ್ವ ಜನಪ್ರಿಯ ನಾಯಕ . ಪ್ರಮುಖವಾಗಿ ಬಿಜೆಪಿ ರಾಮನಾಮ ಜಪಿಸುತ್ತದೆ. ಸಿದ್ದರಾಮಯ್ಯನವರು ರಾಮ ರಾಜ್ಯದ ಕಲ್ಪನೆ ಸಾಕಾರಗೊಳಿಸುವ ಗುರಿ ಹೊಂದಿದ್ದಾರೆ.
 – ದಡದಹಳ್ಳಿ ರಮೇಶ್, ಚಾಮರಾಜನಗರ ಜಿಲ್ಲೆ


 ಮಡಿಕೇರಿ ಸಂಸ್ಕೃತಿ ಮೊಟ್ಟೆ ಎಸೆಯುವುದಲ್ಲ!

ಕೊಡಗು ಜಿಲ್ಲೆ  ವಿಶಿಷ್ಟವಾದ, ದೇಶವೇ ಮೆಚ್ಚುವಂತಹ ಸಂಸ್ಕೃತಿಯನ್ನು ಹೊಂದಿದೆ. ಇಂತಹ ನೆಲದಲ್ಲಿ ರಾಜ್ಯದ ವಿರೋಧ ಪಕ್ಷದ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ  ಎಸೆದಿದ್ದು ಖಂಡನೀಯ.  ಪ್ರವಾಹ ಪೀಡಿತ ಸ್ಥಳಗಳಿ ಭೇಟಿ ನೀಡುವ ವೇಳೆ ಕಿಡಿಗೆಡಿಗಳು  ಪ್ರತಿಭಟನೆಯ ನೆಪದಲ್ಲಿ ಮೊಟ್ಟೆಯನ್ನು ಎಸೆದಿದ್ದಾರೆ. ಇದು ನಿಜವಾಗಿಯು ತಪ್ಪು. ಇದು ಕೊಡಗಿನ ಜನರ   ಸಂಸ್ಕೃತಿಯು ಸಹ ಅಲ್ಲ. ಒಬ್ಬ ವಿಪಕ್ಷನಾಯಕನಾಗಿ ಕರ್ತವ್ಯ ನಿರ್ವಹಿಸಲು ಬಂದವರಿಗೆ     ಅಡ್ಡಿಪಡಿಸುವುದು ಸರಿಯಲ್ಲ.  ಇನ್ನೂ ಮುಂದಾದರೂ ಯಾರೇ ನಾಯಕರು ಜಿಲ್ಲೆಯ ಅಭಿವೃದ್ಧಿ ಕೆಲಸಕ್ಕೆ ಬಂದಾಗ ಅವರನ್ನು ಉತ್ತಮವಾಗಿ ನಡೆಸಿಕೊಳ್ಳಬೇಕಿದೆ.
  -ನಾಗೇಶ್, ಮಾನಸಗಂಗೋತ್ರಿ, ಮೈಸೂರು.


ಮೌಲ್ಯ ಎತ್ತಿಹಿಡಿಯಬೇಕು

ಪಟ್ಟಭದ್ರ ಹಿತಾಸಕ್ತಿಗಳ ಒತ್ತಡದ ಪರಿಣಾಮವಾಗಿ ನ್ಯಾಯದ ಸ್ಥಾಪಿತ ಮಾನದಂಡಗಳನ್ನು ಮೀರುವ ಪ್ರಯತ್ನಗಳು ಭಾರತದಲ್ಲಿ ಹೊಸ ಬೆಳವಣಿಗೆಯಲ್ಲ. ಆದರೆ ಇದಕ್ಕೂ ಒಂದು ಮಿತಿ ಇದೆ. ಭಾರತವು ತನ್ನನ್ನು ತಾನು ಎದುರು ನೋಡುವ ರಾಷ್ಟ್ರವೆಂದು ಪರಿಗಣಿಸಿದರೆ, ಅದು ನ್ಯಾಯದ ನಿಯಮಗಳನ್ನು ಅನುಸರಿಸುವ ಅಗತ್ಯವಿದೆ. ಬಿಲ್ಕಿಸ್ ಬಾನೊ ಪ್ರಕರಣದ ೧೧ ಅಪರಾಧಿಗಳ ಬಿಡುಗಡೆ ಮಾಡಿರುವುದು ಅಕ್ಷಮ್ಯ.  ಕಪ್ಪು ಚುಕ್ಕೆ ಎಂಬುದರಲ್ಲಿ ಸಂದೇಹವಿಲ್ಲ. ಈ ಬೆಳವಣಿಗೆಯು ಅಲ್ಪಸಂಖ್ಯಾತರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ. ಈ ಸಂದರ್ಭದಲ್ಲಿ ನ್ಯಾಯಾಂಗವು ಬಲವಾದ ಸಂಕೇತವನ್ನು ರವಾನಿಸಬೇಕು ಮತ್ತು ನ್ಯಾಯದ ಮೌಲ್ಯಗಳನ್ನು ಎತ್ತಿಹಿಡಿಯಬೇಕು.
-ಪ್ರಶಾಂತ್ ಎಂ., ಮಹಾರಾಜ ಕಾಲೇಜು, ಮೈಸೂರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ