Mysore
26
few clouds

Social Media

ಶುಕ್ರವಾರ, 17 ಜನವರಿ 2025
Light
Dark

ಆಂದೋಲನ ಓದುಗರಪತ್ರ : 23 ಶನಿವಾರ 2022

ಪ್ರತಿಮಾ ಪುರಸ್ಕಾರ?

ಊರ ತುಂಬೆಲ್ಲ ಪ್ರತಿಮೆಗಳಿಂದ ಲೋಕೋಪಕಾರ ಆಗುವುದು ಅಷ್ಟರಲ್ಲಿಯೇ ಇದೆ. ಆದರೂ ಹಿತಮಿತವಾಗಿದ್ದರೆ, ಮೂರ್ತಿಗಳು ಊರ ಹೆಮ್ಮೆ-ಹಿರಿಮೆ, ಜನ ಸ್ಪೂರ್ತಿ ಕಾರಣಗಳಿಂದ ಮುಖ್ಯ. ಆದರೆ ರಾಜಮನೆತನದ ಹುಟ್ಟಿದ ಎಲ್ಲ ಪುತ್ರರಿಗೂ ಆ ಮನ್ನಣೆ, ಸ್ಮಾರಕ ಸಲ್ಲಲೇಬೇಕೆ? ಶ್ರೀಕಂಠದತ್ತರ ಬಗ್ಗೆ ಯಾವದೇ ಒಳ್ಳೆಯ ಮಾತು, ಸಾಧನೆ ಕೇಳ ಕಂಡಿರುವುದು ಯಾವುದೂ ಇಲ್ಲವೆನಿಸುತ್ತದೆ. ಅವರ ಪ್ರತಿಮೆ ಸ್ಥಾಪನೆಯಿಂದ ಮೈಸೂರ ಉಳಿದ ಅರಸರ ಮಹಿಮೆಗೂ ಶೋಭೆ ತರುವುದಿಲ್ಲ. ಅವರ ಜಾಗದಲ್ಲಿ ಸಾಧಾರಣ ಪ್ರಜೆಯಾಗಿ ಅಸಾಧಾರಣ ಕೆಲಸ ಮಾಡಿದ ಸಾಲುಮರದ ತಿಮ್ಮಕ್ಕಳ ಒಂದು ಸ್ಮಾರಕ ಮಾಡುವ ಯೋಚನೆ ಮಾಡಿದರೆ ಮೈಸೂರಿನ ಪ್ರೌಢಿಮೆ ಹೆಚ್ಛೀತು.

-ರವಿ ಬಳೆ, ಮೈಸೂರು.


ಯಾರ ಪ್ರತಿಮೆ ಬೇಕು?

ಗನ್ ಹೌಸ್ ವೃತ್ತದಲ್ಲಿ ಯಾರ ಪ್ರತಿಮೆ ಸ್ಥಾಪಿಸಬೇಕು ಎನ್ನುವುದು ವಿವಾದಕ್ಕೆ ಕಾರಣವಾಗಿದೆ. ಅರಮನೆ ಇದ್ದಲ್ಲಿ ಗುರುಮನೆ ಇರುತ್ತದೆ. ಆ ಪ್ರಸ್ತುತತೆಯಲ್ಲಿ ಅಲ್ಲಿ ರಾಜಗುರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಪುತ್ಥಳಿ ಸ್ಥಾಪಿಸುವುದು ಯೋಗ್ಯವಾಗಿದೆ. ಅದು ಬೇಡ ಎನ್ನುವುದು ಸಂಕುಚಿತ. ಆ ಸ್ವಾಮಿಗಳಿಗೆ ಸಾಕ್ಷಾತ್ ಚಾಮರಾಜ ಒಡೆರ್ಯ ಶಿರಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದನು ನಾನು ಕಣ್ಣಾರೆ ನೋಡಿದ್ದೇನೆ. ಲಕ್ಷಾಂತರ ಜನರಿಗೆ ಉಚಿತ ಪ್ರಸಾದ ನೀಡಿ ಅವರನ್ನು ಸುಶಿಕ್ಷಿತ ಪ್ರಜೆಗಳನ್ನಾಗಿ ಮಾಡಿದ ಮತ್ತು ಈಗಲೂ ಮಾಡುತ್ತಿರುವ ಸುತ್ತೂರು ಮಠ ದ ಜನಪರ ಕಾಳಜಿ ದೇಶಕ್ಕೇ ಗೊತ್ತಿದೆ.ಶ್ರೀಕಂಠ ದತ್ತ ನರಿಂಹರಾಜ ಒಡೆಯರ್ ಅವರು ರಾಜ್ಯಾಡಳಿತ ನಡೆಸಿದವರು ಅಲ್ಲ ಎನ್ನುವುದು ನಮಗೆಲ್ಲ ಗೊತ್ತು. ಅವರು ಲೋಕಸಭಾ ಸದಸ್ಯರು ಆಗಿದ್ದರು. ಜನ ಕಲ್ಯಾಣಕ್ಕೆ ಅವರ ಕೊಡುಗೆ ಏನು ಎನ್ನುವುದು ಸ್ಪಷ್ಟ ಇಲ್ಲ. ರಾಜ ವಂಶಸ್ಥರು ಎನ್ನುವ ಒಂದೇ ಕಾರಣಕ್ಕೆ ಸಾರ್ವಜನಿಕ ಸ್ಥಳದಲ್ಲಿ ಅವರನ್ನು ಪ್ರತಿಷ್ಠಾಪಿಸುವ ಯೋಚನೆ ಸಾಧುವೇ? ಹಾಗೆ ನೋಡಿದರೆ ಬ್ರಿಟಿಷರ ವಿರುದ್ಧ ಹೋರಾಡುತ್ತ , ಮಕ್ಕಳನ್ನೇ ಒತ್ತೆಯಾಗಿಟ್ಟ ಮೈಸೂರು ಸಂಸ್ಥಾನ ಆಳಿದ ಸುಲ್ತಾನ ಟಿಪ್ಪು ಅವರ ಪ್ರತಿಮೆಯನ್ನು ಅಲ್ಲಿ ಸ್ಥಾಪಿಸುವುದು ಹೆಚ್ಚು ಸೂಕ್ತ ಅಲ್ಲವೇ?

-ಡಾ.ಭ.ನಾಗರಾಜ್, ಜೆ. ಪಿ.ನಗರ, ಮೈಸೂರು.


ಪತ್ರಿಕೋದ್ಯಮದ ದಿಕ್ಕು ಬದಲಿಸಿದ ಕೋಟಿಯವರು

ದಿನ ಪತ್ರಿಕೆಗಳೆಂದರೆ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯಮಟ್ಟದ ವರದಿಗಳು ಎಂದು ಭಾವಿಸಲಾಗುತ್ತಿದ್ದ ಕಾಲವೊಂದು ಇತ್ತು. ಆದರೆ ಪ್ರಸ್ತುತ ‘ಆಂದೋಲನ’ ದಿನ ಪತ್ರಿಕೆಯು ಗ್ರಾಮಾಂತರ ಅಭಿವೃದ್ಧಿ, ಕುಂದು ಕೊರತೆ, ರೈತರ ಸಮಸ್ಯೆ ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ಎಳೆ ಎಳೆಯಾಗಿ ಬಿಡಿಸಿ ಪತ್ರಿಕೋದ್ಯಮದ ದಿಕ್ಕನ್ನೇ ಬದಲಾಯಿಸಿದೆ. ಅದರ ಕೀರ್ತಿಯು ರಾಜಶೇಖರ ಕೋಟೆ ಅವರಿಗೆ ಸಲ್ಲುತ್ತದೆ. ಖಡ್ಗಕ್ಕಿಂತ ಲೇಖನಿ ಹರಿತ ಎನ್ನುವುದನ್ನು ಇಡೀ ನಾಡಿನ ಜನತೆಗೆ ತೋರಿಸಿಕೊಟ್ಟವರು ಕೋಟಿ. ನಾಡಿನಲ್ಲಿ ಅವರು ಅಂದು ಬಿತ್ತಿದ ‘ಆಂದೋಲನ’ ಇಂದು ಐವತ್ತು ವರ್ಷಗಳ ಹೆಮ್ಮೆರವಾಗಿ ಬೆಳೆದು ನಿಂತಿದೆ. ಇನ್ನು ಹಲವಾರು ಸುಧಾರಣೆಗಳನ್ನು ಕೈಗೊಂಡು ಜಾಗತಿಕ ಮಟ್ಟದಲ್ಲಿ ಪತ್ರಿಕೆಯು ಗುರುತಿಸಿಕೊಂಡು ಶ್ರೇಷ್ಠ ದಿನಪತ್ರಿಕೆಯಾಗಿ ಹೊರಹೊಮ್ಮಲಿ.

-ಸಂತೋಷ್ ಕುಮಾರ್ ಬಿ ಎನ್ ಭೋಗಯ್ಯನಹುಂಡಿ, ನಂಜನಗೂಡು ತಾಲ್ಲೂಕು.


ಪ್ರಧಾನಿ ಅಯ್ಕೆ ; ಇಂಗ್ಲೆಂಡ್ ಮಾದರಿ

 

ಇಂಗ್ಲೆಂಡ್‌ನಲ್ಲಿ ಹೊಸ ಪ್ರಧಾನಿಯನ್ನು ಅಯ್ಕೆ ಮಾಡುವ ಪ್ರಕ್ರಿಯೆಯನ್ನು ನೋಡಿದಾಗ, ಅಲ್ಲಿ ಪ್ರಜಾಪ್ರಭುತ್ವ ಕಾರ್ಯ ನಿರ್ವಹಿಸುವ ವೈಖರಿಯ ಬಗೆಗೆ ಹೆಮ್ಮೆ ಅನಿಸುತ್ತದೆ. ಪ್ರತಿಯೊಂದು ಕ್ರಿಯೆಯೂ ಲೆಕ್ಕಾಚಾರದಂತೆ, ಪ್ರಜಾಪ್ರಭುತ್ವದ ತತ್ವಗಳಿಗೆ ಮತ್ತು ನಿಯಮಾವಳಿಗಳಿಗೆ ಅನುಗುಣವಾಗಿ ಪಾರದರ್ಶಕವಾಗಿ ನಡೆಯತ್ತಿದ್ದು, ಎಲ್ಲಿಯೂ ಅರೋಪಕ್ಕೆ ಮತ್ತು ದೂಷಣೆಗೆ ಅಸ್ಪದ ಕಾಣುವುದಿಲ್ಲ. ಹೈಕಮಾಂಡ್ ಹೆಸರಿಸಿದ ವ್ಯಕ್ತಿಯನ್ನು ನಾವು ಸರ್ವಾನುಮತದಿಂದ ನಮ್ಮ ಧುರೀಣರನ್ನಾಗಿ ಅಯ್ಕೆ ಮಾಡುತ್ತೇವೆ ಎನ್ನುವ ಭಾರತದ ರಾಜಕೀಯ ಪಕ್ಷಗಳು ಮತ್ತು ಧುರೀಣರಿಗೆ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಪ್ರಧಾನಿ ಅಯ್ಕೆಯ ಪ್ರಕ್ರಿಯೆ ಮಾದರಿ ಯಾಗಬೇಕು.

-ರಮಾನಂದ ಶರ್ಮಾ, ಬೆಂಗಳೂರು.

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ