Light
Dark

ಆಂದೋಲನ ಓದುಗರಪತ್ರ : 21 ಗುರುವಾರ 2022

ಖಂಡಿಸುವ ನೈತಿಕತೆ ನಮಗಿದೆಯೇ?

ಕೆನಡಾದ ಒಟ್ಟಾವದಲ್ಲಿ ಮಂದಿರ ಒಂದರ ಮುಂದೆ ನಿಲ್ಲಿಸಿರುವ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಗಳಿಸಿದ್ದಾರಂತೆ. ಇದನ್ನು ಪ್ರಜ್ಞಾವಂತ ಜಗತ್ತು ಖಂಡಿಸಿದೆ. ಭಾರತದಲ್ಲಿ ಇದರ ವಿರುದ್ದ ತೀವ್ರ ಅಕ್ರೋಶ ವ್ಯಕ್ತವಾಗಿದೆ. ಸರ್ಕಾರವೂ ಕೂಡಾ ಈ ಬಗೆಗೆ ಕೆನಡಾ ಸರ್ಕಾರದೊಂದಿಗೆ ಮಾತನಾಡಬಹುದು. ಅದರೆ, ನಮ್ಮ ದೇಶದಲ್ಲಿಯೇ ಗಾಂಧಿ ಪ್ರತಿಮೆಯನ್ನು ವಿರೂಗೊಳಿಸುವ , ಅವಮಾನಿಸುವ, ಅವಹೇಳನ ಮಾಡುವ ಮತ್ತು ಮಹಾತ್ಮಾ ಗಾಂಧಿಯನ್ನು ಕೊಲೆಗೈದವರನ್ನು ವೈಭವಿಕರಿಸುವ ಕೃತ್ಯಗಳು ನಡೆಯುವಾಗ, ಕೆನಡಾದಲ್ಲಿ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸುವ ಕೃತ್ಯ ನಡೆದಿರುವುದನ್ನು ಖಂಡಿಸುವ ಹಕ್ಕು ನಮಗಿದೆಯೇ?

-ರಮಾನಂದ ಶರ್ಮಾ, ಬೆಂಗಳೂರು.


ರೈತರ ಖಾತೆ ತಲುಪದ ರಾಗಿ ಖರೀದಿ ಹಣ

ಜೂನ್ ೬ರಂದು ಪಿರಿಯಾಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡಿ ಬಂದಾಗಿದೆ. ಈವರೆಗೂ ಅದರ ಹಣ ರೈತರ ಖಾತೆ ತಲುಪಿಲ್ಲ. ಜೂನ್ ತಿಂಗಳ ೬ನೇ ತಾರೀಖಿಗೂ ಮುನ್ನ ಖರೀದಿಸಿದ ಹಣ ಈಗಾಗಲೇ ಕೈಸೇರಿದೆ. ಆನಂತರದ್ದೂ ತುಂಬಾ ವಿಳಂಬವಾಗುತ್ತಿದೆ. ಇವರಿಗೆ ಇನ್ನೆಷ್ಟು ಸಮಯ ಬೇಕೋ ತಿಳಿದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರು ಪರದಾಡುವಂತಾಗಿದೆ. ಇನ್ನಾದರೂ ರೈತರ ರಾಗಿ ಖರೀದಿ ಹಣ ಆದಷ್ಟು ಬೇಗ ಅವರ ಖಾತೆ ತಲುಪಲಿ.

-ಎ ಎಸ್ ಗೋವಿಂದೇಗೌಡ, ಅರೇನಹಳ್ಳಿ, ಪಿರಿಯಾಪಟ್ಟಣ ತಾಲ್ಲೂಕು.


ಮೈಸೂರು ನಗರದಲ್ಲೊಂದು ಕೆಸರು ಗದ್ದೆ

ಮೈಸೂರು ಎಂದ ತಕ್ಷಣವೇ ನನಪಿಗೆ ಬರುವುದು ಒಂದು ಸುಂದರ ನಗರ ಅಂತ. ಆದರೆ ಮೈಸೂರಿನ ೭೫% ರಸ್ತೆಗಳು ಗುಂಡಿ ಬಿದ್ದಿವೆ. ಕೆಲವು ದಿನಗಳ ಇಂದೆ ಪ್ರಧಾನಿ ಮೋದಿ ಅವರು ಮೈಸೂರಿಗೆ ಬಂದಾಗ ಅವರು ಹಾದು ಹೋಗುವಂತಹ ರಸ್ತೆಗಳನ್ನು ಮಾತ್ರ ಸರಿಪಡಿಸಿದರು. ಆದರೆ ಅದನ್ನು ಬಿಟ್ಟು ಉಳಿದ ಬಡವಣೆ ರಸ್ತೆಗಳನ್ನು ದುರಸ್ತಿ ಮಾಡಿಲ್ಲ. ಅದರಲ್ಲೂ ಮೈಸೂರಿನ ಹೃದಯ ಭಾಗದಲ್ಲಿರುವ ಅಗ್ರಹಾರದ ಬಸವೇಶ್ವರ ಬಡವಣೆಯ ೩ನೇ ಕ್ರಾಸ್ ರಸ್ತೆಯಂತು ಮಳೆಯಿಂದಾಗಿ ಕೆಸರುಗದ್ದೆಯಂತಾಗಿದೆ . ಈ ರಸ್ತೆಯಲ್ಲಿ ಪಾದಚಾರಿಗಳು ಹಾಗೂ ವಾಹನ ಸವಾರರು ಓಡಾಡಲು ತುಂಬಾ ಹರಸಾಹಸ ಪಡುವಂತಾಗಿದೆ. ತಕ್ಷಣ ದುರಸ್ತಿಗೊಳಿಸಿ.

-ಪ್ರದೀಪ್ ಕುಮಾರ್ ಎ, ಮಹಾರಾಜ ಕಾಲೇಜು, ಮೈಸೂರು.


ಬೀದಿನಾಯಿಗಳಿಂದ ಮಕ್ಕಳನ್ನು ವಯೋವೃದ್ಧರನು ರಕ್ಷಿಸಿ

ಮೈಸೂರಿನ ರಾಮಕೃಷ್ಣ ‘ಐ’ ಬ್ಲಾಕಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಶಾಲೆಯಿಂದ ಹಿಂತಿರುಗಿದ ನಂತರ ಆಟ ವಾಡಲು ಬೀದಿಗಿಳಿಯುವ ಚಿಕ್ಕ ಮಕ್ಕಳ ಮೇಲೆ ಆಕ್ರಮಣ ಮಾಡುತ್ತವೆ. ಹಾಗೆಯೇ ರಸ್ತೆಯಲ್ಲಿ ಓಡಾಡುವ ವಯೋವೃದ್ದರ ಮೇಲೂ ಆಕ್ರಮಣ ಮಾಡುತ್ತವೆ. ಹೆಚ್ಚಿನ ಅವಘಡ ಸಂಭವಿಸುವ ಮುನ್ನ ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತು ತುರ್ತು ಕ್ರಮ ಕೈಗೊಳ್ಳಬೇಕೆಂಬುದು ‘ಐ’ ಬ್ಲಾಕಿನ ನಿವಾಸಿಗಳು ಆಗ್ರಹ.

-ಎಸ್.ರವಿ, ವಕೀಲ,ಮೈಸೂರು.


ಕೈದಿಗಳ ವೇತನ ಹೆಚ್ಚಳ ಸರಿಯೇ?

ರಾಜ್ಯದಲ್ಲಿ ಕೈದಿಗಳ ಕನಿಷ್ಠ ವೇತನವನ್ನು ಹೆಚ್ಚಿಸಲು ಕರ್ನಾಟಕ ಕಾರಾಗೃಹಗಳ ಅಭಿವೃದ್ಧಿ ಪ್ರಾಧಿಕಾರ (ಕೆಪಿಡಿಎ) ಶಿಫಾರಸು ಮಾಡಿದೆ. ಶಿಫಾರಸುಗಳನ್ನು ಅಂಗೀಕರಿಸಿದರೆ, ಹೊಸ ವೇತನವು ಕರ್ನಾಟಕ ಕನಿಷ್ಠ ವೇತನ ಮಾರ್ಗಸೂಚಿಗಳ ಪ್ರಕಾರ ಇರುತ್ತದೆ. ಪ್ರಸ್ತುತ, ಕೈದಿಗಳು ತಿಂಗಳಿಗೆ ಸುಮಾರು ೮,೦೦೦ ರೂ.ಗಳನ್ನು ಪಡೆಯುತ್ತಾರೆ. ಪರಿಷ್ಕೃತ ಕನಿಷ್ಠ ವೇತನದ ಅಡಿಯಲ್ಲಿ, ಅವರ ಮಾಸಿಕ ಆದಾಯವು ಸುಮಾರು ೧೪,೦೦೦ ರೂಪಾಯಿಗಲಿಗೆ ಏರಲಿದೆ. ಕಾನೂನು ಬಾಹಿರ ಕೆಲಸವನ್ನು ಮಾಡಿ ಜೈಲಿಗೆ ಹೋಗಿರುವ ಕೈದಿಗಳಿಗೆ ತಮ್ಮ ತಪ್ಪಿನ ಅರಿವಾಗಲೆಂದು ಶಿಕ್ಷೆ ಕೊಟ್ಟು ತಿದ್ದಬೇಕು. ಅದನ್ನ ಬಿಟ್ಟು ಸರಕಾರವೆ ಅವರಿಗೆ ಇಷ್ಟೊಂದು ವೇತನ ಕೊಟ್ಟರೆ ತಪ್ಪಿನ ಅರಿವು ಅವರಿಗೆ ಆಗುತ್ತದೆಯೇ?

-ಕೃಪ. ಪಿ. ವೈ. ಮಹಾರಾಜ ಕಾಲೇಜು, ಮೈಸೂರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ