ಜನಾಕ್ರೋಶಕ್ಕೆ ಮಣಿದ ಸರ್ಕಾರ
ಸರ್ಕಾರಿ ಕಚೇರಿಗಳಲ್ಲಿ ಫೋಟೋ ತೆಗೆಯುವುದು ಹಾಗೂ ವಿಡಿಯೋ ಚಿತ್ರೀಕರಣ ನಿರ್ಬಂಧಿಸಿ ಹೊರಡಿಸಿದ್ದ ಆದೇಶವನ್ನು ವಿರೋಧ ಪಕ್ಷಗಳ ಮತ್ತು ಸಂಘ-ಸಂಸ್ಥೆಗಳ ಟೀಕೆ ಹಾಗೂ ಜನಕ್ರೋಶಕ್ಕೆ ಮಣಿದು ಸರ್ಕಾರ ಮಧ್ಯರಾತ್ರಿ ಹಿಂಪಡೆದಿದೆ. ಭ್ರಷ್ಟಾಚಾರ ತಾಂಡವಾಡುತ್ತಿರುವ ಸಂದರ್ಭದಲ್ಲಿ ಈ ಆದೇಶವು ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಸರ್ಕಾರವೇ ಕುಮಕ್ಕು ನೀಡುವಂತಿತ್ತು ಎಂಬ ಸಂಶಯ ಎಲ್ಲರಲ್ಲಿ ಮನೆ ಮಾಡಿತ್ತು. ಇದನ್ನರಿತ್ತ ಮುಖ್ಯಮಂತ್ರಿಗಳು ಆದೇಶ ವಾಪಾಸ್ ಪಡೆದಿರುವುದು ಉತ್ತಮ ನಿರ್ಧಾರ.
-ಸಿದ್ದರಾಜು ಕೆ.ಎಸ್. ಮೈಸೂರು.
ರಾಜಕಾರಣಿಗಳು ಪಾಠ ಕಲಿಯಲಿ
ವಿರೋಧ ಪಕ್ಷದ ನಾಯಕ ರಾದ ಶ್ರೀ ಸಿದ್ದರಾಮಯ್ಯ ನವರು ತಮ್ಮ ವಿಧಾನಸಭಾ ಕ್ಷೇತ್ರದ ಕೆರೂರಿನಲ್ಲಿ ನಡೆದ ಒಂದು ಗಲಭೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡುತ್ತಿರುವವರ ಯೋಗಕ್ಷೇಮ ವಿಚಾರಿಸಿ, ಚಿಕಿತ್ಸೆಗಾಗಿ ಧನ ಸಹಾಯ ಮಾಡಿದ್ದನ್ನು, ಗಾಯಾಳುಗಳು ಮತ್ತು ಅವರ ಕುಟುಂಬದ ವರು ನಿರಾಕರಿಸಿದ ಘಟನೆ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ರಾಜಕೀಯ ನೇತಾರರು ತಮ್ಮ ಕ್ಷೇತ್ರದಲ್ಲಿ ಯಾವುದಾದರು ಗಲಾಟೆಯಾಗಿ ಹೊಡೆದಾಟಗಳಾದರೆ, ಆ ಗಲಾಟೆಯ ಮೂಲ ಹುಡುಕಿ ಅದನ್ನು ಶಾಶ್ವತವಾಗಿ ನಿವಾರಣೆ ಮಾಡುವುದನ್ನು ಬಿಟ್ಟು, ಒಂದಿಷ್ಟು ಹಣವನ್ನು ಅಂಥಹವರ ಕೈಯಲ್ಲಿಟ್ಟು ಮಾಧ್ಯಮಗಳಲ್ಲಿ ಪ್ರಚಾರ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಕೆರೂರಿನಲ್ಲಿ ಸಿದ್ದರಾಮಯ್ಯ ನವರಿಗೆ ಆದ ಮುಖಭಂಗದಿಂದಲಾದರೂ ರಾಜಕೀಯ ನೇತಾರರು ಪಾಠ ಕಲಿಯಬೇಕು. ಎಲ್ಲವನ್ನೂ ದುಡ್ಡಿನಿಂದ ಅಳೆಯದೆ ಮಾನವೀಯವಾಗಿ ವರ್ತಿಸುವುದನ್ನು ಕಲಿಯಬೇಕು ಎಂಬುದಕ್ಕೆ ಕೆರೂರು ಘಟನೆ ನಾಂದಿ ಹಾಡಿದೆ ಎಂದರೆ ತಪ್ಪಾಗಲಾರದು.
-ಬ್ಯಾಂಕ್ ಶಿವಕುಮಾರ್, ಜೆ.ಪಿ.ನಗರ,ಮೈಸೂರು.
ಸಮಿತಿ ಏಕೆ? ಸಚಿವರೇ ಸಾಕು!
ಸರಕಾರವೇ ನೇಮಕ ಮಾಡಿದ ತಜ್ಞರ ಸಮಿತಿ ಶ್ರಮವಹಿಸಿ ಸಿದ್ಧಮಾಡಿ ಕೊಟ್ಟ ವರದಿಯನ್ನು ಜನಪ್ರತಿನಿಧಿಗಳು ರದ್ದುಮಾಡಿಸುತ್ತಾರೆ. ತಜ್ಞರ ವರದಿಯ ಮೌಲ್ಯ ಮಾಪನ ಮಾಡುವುದು ತಜ್ಞರಲ್ಲ, ರಾಜಕಾರಣಿಗಳು! ಖ್ಯಾತ ಪರಿಸರ ತಜ್ಞ ಕಸ್ತೂರಿ ರಂಗನ್ ಸಮಿತಿ ನೀಡಿದ ಶಿಫಾರಸ್ಸು ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳ ಉಳಿವಿಗೂ, ಜೀವ ಪರಿಸರ ಹಾಗೂ ಮಾನವರ ಉಳಿವಿಗೂ ತೀರಾ ಅಗತ್ಯವಿದೆ. ಆದರೆ ಅದು ರಾಜಕಾರಣಿಗಳಿಗೆ ಬೇಡ. ತಜ್ಞರ ವರದಿ ಒಪ್ಪಿ ಪರಿಸರ ಉಳಿದರೆ ಮಲೆನಾಡಿನ ಜನರಿಗೆ ತೊಂದರೆಯಾಗುತ್ತದೆ ಎಂಬ ನೆಪ ಒಡ್ಡಿ ಗೃಹ ಸಚಿವರು ರದ್ದು ಮಾಡಿಸಲು ಮುಂದಾಗಿದ್ದಾರೆಂದು ವರದಿಯಾಗಿದೆ. ವಿಜ್ಞಾನಿಗಳಿಗೆ ಅವಮಾನವಾದರೂ ಸರಿ ಸಚಿವರನ್ನು ಸಿಎಂ ಬಿಡುವಂತಿಲ್ಲ. ಬಹುಶ: ಸರಕಾರ ಉಳಿವುದೇ ಮುಖ್ಯವಿರಬಹುದು. ಹೀಗಾಗುವುದಾದರೆ ಇನ್ನು ಮುಂದೆ ಪರಿಣಿತರ ಅಭಿಪ್ರಾಯಗಳಿಗೆ ಬದಲು ಆಯಾ ಶಾಸಕರು ಸಚಿವರನ್ನೇ ಕೇಳಿ ಬೇಕಾದದ್ದು ಮಾಡಿಕೊಳ್ಳಬಹುದು. ಪರಿಸರ ಹಾಳಾದರೂ ತಜ್ಞರ ಸಮಿತಿಯ ಖರ್ಚಾದರೂ ಬೊಕ್ಕಸಕ್ಕೆ ಉಳಿದಂತಾಗುತ್ತದೆಯಲ್ಲವೇ.
– ಡಾ. ಟಿ. ಗೋವಿಂದರಾಜು, ಬೆಂಗಳೂರು .
ತೆರಿಗೆ ಹೇರಿಕೆ ಖಂಡನೀಯ
ಕೇಂದ್ರ ಸರ್ಕಾರ ಆಹಾರ ಪದಾರ್ಥಗಳು ಹಾಗೂ ಮೊಸರು ಮಜ್ಜಿಗೆಗಳ ಮೇಲೆ ತೆರಿಗೆ ಹೇರಿರುವುದು ಖಂಡನೀಯ. ದೇಶದ ಜನರು ಮೊದಲೇ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ಪ್ಯಾಕ್ ಮಾಡಲಾದ ಬ್ರಾಂಡೆಂಡ್ ಮತ್ತು ಬ್ರಾಂಡೆಡ್ ಅಲ್ಲ ಆಹಾರ ಪದಾರ್ಥಗಳ ಮೇಲೆ ಶೇ.೫ರಷ್ಟು ತೆರಿಗೆ ಹೇರಿರುವುದು ಸಮರ್ಥನೀಯವಲ್ಲ.
-ನಿತಿನ್ ಹೆಚ್ ಸಿ, ಮಹಾರಾಜ ಕಾಲೇಜು, ಮೈಸೂರು.