Mysore
21
overcast clouds
Light
Dark

ಆಂದೋಲನ ನಾಲ್ಕು ದಿಕ್ಕಿನಿಂದ : 28 ಸೋಮವಾರ 2022

ಹಳೆ ಪಿಂಚಿಣಿ ಯೋಜನೆಯ ಹೊಸ ಭರವಸೆ!

ಗುಜರಾತ್‌ನಲ್ಲಿ ಅಧಿಕಾರ ಗ್ರಹಿಸಲು ದಂಡಯಾತ್ರೆ ಹೊರಟಿರುವ ಅರವಿಂದ್ ಕೇಜ್ರಿವಾಲ್ ಪಡೆ, ಉಚಿತ ವಿದ್ಯುತ್, ನೀರು, ಶಿಕ್ಷಣದ ಜತೆಗೆ ಹಳೆ ಪಿಂಚಣಿ ಯೋಜನೆ ಜಾರಿ ಮಾಡುವ ಭರವಸೆಯನ್ನು ನೀಡಿದೆ. ಹೊಸ ಪಿಂಚಣಿ ಯೋಜನೆ ಬಗ್ಗೆ ಬಹುತೇಕ ಸರ್ಕಾರಿ ನೌಕರರು ಆಕ್ರೋಶಗೊಂಡಿರುವ ಹಿನ್ನೆಲೆಯಲ್ಲಿ ಈ ಹೊಸ ಭರವಸೆಯು ಆಪ್‌ಗೆ ನಿಜಕ್ಕೂ ಗುಜರಾತ್ ಗೆಲ್ಲುವ ಭರವಸೆ ಮೂಡಿಸಿದೆಯಂತೆ! ಜತೆಗೆ ಆಪ್ ನಾಯಕರ ಆತ್ಮವಿಶ್ವಾಸವನ್ನು ಇಮ್ಮಡಿಸಿದೆಯಂತೆ. ಯಾವ ಮಟ್ಟಕ್ಕೆ ಎಂದರೆ- ‘ನಾನು ನಿಮ್ಮೆಲ್ಲರ ಮುಂದೆ ಲಿಖಿತವಾಗಿ ಭವಿಷ್ಯ ನುಡಿಯಲಿದ್ದೇನೆ… ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚಿಸಲಿದೆ ಎಂಬ ಭವಿಷ್ಯವನ್ನು ಗಮನಿಸಿ. ೨೭ ವರ್ಷಗಳ ದುರಾಡಳಿತದ ನಂತರ, ಗುಜರಾತ್‌ನ ನಾಗರಿಕರಿಗೆ ಈ ಜನರಿಂದ ಪರಿಹಾರ ಸಿಗಲಿದೆ…’ ಎಂದು ಅರವಿಂದ್ ಕೇಜ್ರಿವಾಲ್ ಹೇಳುತ್ತಿದ್ದಾರೆ. ಡಿಸೆಂಬರ್ ೧ ಮತ್ತು ೫ ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜನರು ಎಎಪಿಗೆ ಬಹಿರಂಗವಾಗಿ ಬೆಂಬಲ ನೀಡಲು ಆಡಳಿತಾರೂಢ ಬಿಜೆಪಿಯಿಂದ ತುಂಬಾ ಹೆದರುತ್ತಿದ್ದಾರಂತೆ!


ರಿಷಿ ಮನೆಗೆ ದುಬಾರಿ ಪ್ರತಿಮೆ

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಅಧಿಕೃತ ನಿವಾಸ ನಂ.೧೦ ಡೌನಿಂಗ್ ಸ್ಟ್ರೀಟ್ ಗಾರ್ಡನ್‌ಗೆ ತರಲಾಗಿರುವ ೧.೩ ದಶಲಕ್ಷ ಪೌಂಡ್ (೧೨.೮೪ ಕೋಟಿ ರೂಪಾಯಿಗಳು)ಮೌಲ್ಯದ ಕಂಚಿನ ಪ್ರತಿಮೆ ಹೊಸ ವಿವಾದ ಹುಟ್ಟುಹಾಕಿದೆ. ಬ್ರಿಟನ್ ಸರ್ಕಾರ ಇಷ್ಟು ದೊಡ್ಡ ಮೊತ್ತದ ಪ್ರತಿಮೆ ಖರೀದಿಸುವ ಅಗತ್ಯವಿರಲಿಲ್ಲ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ. ತೆರಿಗೆದಾರರ ಹಣ ಪೋಲು ಮಾಡಲಾಗುತ್ತಿದೆ ಎಂದೂ ದೂರಲಾಗಿದೆ. ದಿ ಸನ್ ಪತ್ರಿಕೆಯ ಪ್ರಕಾರ, ಹೆನ್ರಿ ಮೂರ್ ಅವರ ‘ವರ್ಕಿಂಗ್ ಮಾಡೆಲ್ ಫಾರ್ ಸೀಟೆಡ್ ವುಮನ್ – ೧೯೮೦’ರ ಅಮೂರ್ತ ಕೃತಿಯನ್ನು ಕ್ರಿಸ್ಟಿಯ ಹರಾಜಿನಲ್ಲಿ ಮಾರಾಟವಾಗಿತ್ತು. ಮತ್ತು ತೆರಿಗೆದಾರರಿಂದ ಹಣ ಪಡೆದ ಸರ್ಕಾರಿ ಕಲಾ ಸಂಗ್ರಹದಿಂದ ಈ ಪ್ರತಿಮೆ ಖರೀದಿಸಲಾಗಿದೆ . ಹೆಚ್ಚುತ್ತಿರುವ ಹಣದುಬ್ಬರ, ಹಿಗ್ಗುತ್ತಿರುವ ದೈನಂದಿನ ವೆಚ್ಚಗಳು ಮತ್ತು ಸಾರ್ವಜನಿಕ ನಿಧಿಯಾದ್ಯಂತ ವೆಚ್ಚ ಕಡಿತ ಕ್ರಮಗಳ ಮೂಲಕ ದೇಶವು ಹೆಣಗಾಡುತ್ತಿರುವ ಸಮಯದಲ್ಲಿ ಇಂತಹ ದುಬಾರಿ ಬೆಲೆಯ ಪ್ರತಿಮೆ ಖರೀದಿ ಬೇಕಿತ್ತೆ ಎಂಬ ಪ್ರಶ್ನೆ ಎದ್ದಿದೆ.


ಬಿಜೆಪಿ ಹರಸಾಹಸ!

ದೆಹಲಿ ರಾಜ್ಯದ ಅಧಿಕಾರ ಕಳೆದುಕೊಂಡಿರುವ ಬಿಜೆಪಿ ಸ್ಥಳೀಯ ಸಂಸ್ಥೆಗಳಲ್ಲಿನ ಅಧಿಕಾರ ಉಳಿಸಿಕೊಳ್ಳಲು ಹರ ಸಾಹಸ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರಕ್ಕೆ ಬಿಜೆಪಿಯ ಘಟಾನುಘಟಿ ನಾಯಕರೇ ಇಳಿದಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡಾ ಅಖಾಡಕ್ಕೆ ಇಳಿದಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ಪಿಯೂಷ್ ಗೋಯೆಲ್, ಹರ್ದೀಪ್ ಸಿಂಗ್ ಪುರಿ, ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ನಾಯಕರು ಜನಮನಗೆಲ್ಲಲು ಸಜ್ಜಾಗಿದ್ದಾರೆ. ಬಿಜೆಪಿಯ ನೇರ ಸ್ಪರ್ಧಿ ಆಮ್ ಆದ್ಮಿ ಪಕ್ಷ. ಆ ಪಕ್ಷದ ಎಲ್ಲಾ ನಡೆಗಳನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರು, ಆ ಪಕ್ಷದ ಉಚಿತ ತಂತ್ರಗಳಿಗೆ ಪ್ರತಿಯಾಗಿ ನಗರ ಮರುನಿರ್ಮಾಣದ ತಂತ್ರವನ್ನು ಪ್ರಯೋಗಿಸುತ್ತಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಬಿಜೆಪಿ ದೆಹಲಿಯ ಎಲ್ಲಾ ಏಳು ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದೆ. ಈಗ ಸ್ಥಳೀಯ ಸಂಸ್ಥೆಗಳ ಅಧಿಕಾರ ಉಳಿಸಿಕೊಳ್ಳುತ್ತದೆಯೇ ಎಂಬುದು ಮಿಲಯನ್ ಡಾಲರ್ ಪ್ರಶ್ನೆ!


ದೀದಿಗೆ ಸವಾಲು ಹಾಕಿದ ಸುವೆಂದು

ಪಶ್ಚಿಮಬಂಗಾಲದಲ್ಲಿ ಚುನಾವಣೆ ಮುಗಿದು ಬಹಳ ದಿನಗಳೇ ಕಳೆದರೂ ಟಿಎಂಸಿ- ಬಿಜೆಪಿ ನಡುವಿನ ಜಿದ್ದಾಜಿದ್ದಿ ಮಾತ್ರ ತಣ್ಣಗಾಗಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಬಿಜೆಪಿ ನಾಯಕರು ಟಿಎಂಸಿ ನಾಯಕರನ್ನು ಕೆಣಕುತ್ತಲೇ ಇದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬರಲಿದೆ ಎಂದು ಪ್ರತಿಪಾದಿಸಿದ್ದಾರೆ ಅಷ್ಟೇ ಅಲ್ಲ ತಾಖತ್ ಇದ್ದರೆ ಅದನ್ನು ತಡೆಯಿರಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸವಾಲು ಹಾಕಿದ್ದಾರೆ. ಬಾಂಗ್ಲಾ ದೇಶದ ನಿರಾಶ್ರಿತರು ಹೆಚ್ಚಿರುವ ಪಶ್ಚಿಮ ಬಂಗಾಳದಲ್ಲಿ ಸಿಎಎ ಯಾವತ್ತೂ ಜ್ವಲಂತ ಸಮಸ್ಯೆ. ಈ ಸಮಸ್ಯೆಯನ್ನು ಜೀವಂತವಾಗಿಡುವ ಪ್ರಯತ್ನವನ್ನು ಬಿಜೆಪಿ ಹವ್ಯಾಹತವಾಗಿ ನಡೆಸುತ್ತಿದೆ. ಸಿಎಎ ವಿಷಯವನ್ನು ಮುಂದಿಟ್ಟುಕೊಂಡು ವಿಧಾನಸಭಾ ಚುನಾವಣೆ ಗೆಲ್ಲಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ, ಸಿಎಎ ವಿರುದ್ಧ ಇರುವ ಟಿಸಿಎಂ ಚುನಾವಣೆಯಲ್ಲಿ ಜಯಗಳಿಸಿತ್ತು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ