ಹಣವಿದ್ದವರಿಗೆ ಹಣ ಸೇರುತಿದೆ…
ಕೋವಿಡ್ ಸಂಕಷ್ಟದ ಅವಧಿಯಲ್ಲಿ ಶ್ರೀಮಂತರೇ ಮತ್ತಷ್ಟು ಶ್ರೀಮಂತರಾಗಿದ್ದಾರೆ ಎಂಬುದು ಹೆಚ್ಚು ಸ್ಪಷ್ಟವಾಗಿದೆ. ಯುಬಿಎಸ್ ಸೆಕ್ಯೂರಿಟೀಸ್ ನಡೆಸಿದ ಸಂಶೋಧನಾ ಮಾಹಿತಿ ಪ್ರಕಾರ, ಕೇವಲ ಶೇ.೨೦ರಷ್ಟು ಮೇಲ್ವರ್ಗದ ಜನರು ಖರೀದಿಯಲ್ಲಿ ತೊಡಗಿದ್ದಾರೆ. ಉಳಿದ ಶೇ.೮೦ ರಷ್ಟು ಜನರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಇದರರ್ಥ ದೇಶದ ಆರ್ಥಿಕತೆ ಚೇತರಿಕೆಯು ಸಾಂಕೇತಿಕವಾಗಿದ್ದು, ಪೂರ್ಣಪ್ರಮಾಣದಲ್ಲಾಗಿಲ್ಲ. ಕೋವಿಡ್ ಸಂಕಷ್ಟವು ದೇಶದ ಶ್ರೀಮಂತ ಗ್ರಾಹಕರ ಆದಾಯದ ಮಟ್ಟಗಳ ಮೇಲೆ ಪರಿಣಾಮ ಬೀರಿಲ್ಲ. ಅವರು ಎಂದಿನಂತೆ ಉದಾರವಾಗಿ ಖರ್ಚು ಮಾಡುತ್ತಿದ್ದಾರೆ. ಈ ವರ್ಗದ ಖರ್ಚು ಮಾಡುತ್ತಿರುವ ಪ್ರಮಾಣವೇ ಗ್ರಾಮೀಣ ಪ್ರದೇಶದಲ್ಲಿ ಶೇ.೫೯ ರಷ್ಟು, ಮತ್ತು ನಗರ ಪ್ರದೇಶಗಳಲ್ಲಿ ಶೇ.೬೬ರಷ್ಟಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಮೇಲ್ವರ್ಗದ ಜನಗಳ ಪೈಕಿ ಶೇ.೫೦ ಕ್ಕಿಂತ ಹೆಚ್ಚು ಮಂದಿ ಈ ಹಿಂದೆ ಯೋಜಿಸಿದಂತೆಯೇ ಚಿನ್ನಾಭರಣ, ದುಬಾರಿ ಗ್ಯಾಡ್ಜೆಟ್ ಗಳನ್ನು ಖರೀದಿಸಿದ್ದಾರೆ. ಬರುವ ದಿನಗಳಲ್ಲಿ ಭೂಮಿ, ಫ್ಲಾಟ್, ಮನೆ, ಕಾರು ಖರೀದಿ ಮಾಡಲು ಯೋಜಿಸಿದ್ದಾರೆ.
ನಿತಿನ್ ಗಡ್ಕರಿ ಹೊಸ ದಾಖಲೆ
ಹೆದ್ದಾರಿ ನಿರ್ಮಾಣದಲ್ಲಿ ದಾಖಲೆ ಮಾಡುತ್ತಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸದೊಂದು ದಾಖಲೆ ಮಾಡಿದ್ದಾರೆ. ದಸರಾ ಹಬ್ಬದಂದು ಅವರು ನಾಲ್ಕು ಗಂಟೆಗಳಲ್ಲಿ ೨೨ ಪೂಜಾ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅಷ್ಟಾದರೂ ಸುಸ್ತಾಗಿಲ್ಲ. ಎನ್‌ಡಿಟಿವಿ ಆರೋಗ್ಯ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ನಿತಿನ್ ಗಡ್ಕರಿ, ಸ್ವತಃ ಈ ಸಂಗತಿಯನ್ನು ಹೇಳಿಕೊಂಡಿದ್ದಾರೆ. ನಾನು ಆರೋಗ್ಯದಿಂದ ಇರುವುದರಿಂದಲೇ ಇಷ್ಟು ಕಡಿಮೆ ಅವಧಿಯಲ್ಲಿ ೨೨ ಪೂಜಾಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಯಿತು. ನಮ್ಮ ವೈಯಕ್ತಿಕ ಆರೋಗ್ಯವನ್ನು ನಾವು ಚನ್ನಾಗಿ ಕಾಪಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ್ದಾರೆ. ನಾನು ಎರಡು ಬಾರಿ ಕೋವಿಡ್‌ಗೆ ತುತ್ತಾಗಿದ್ದೇನೆ. ಆ ಹಂತದಲ್ಲಿ, ನನ್ನ ವೈದ್ಯರು ಸ್ವಲ್ಪ ವ್ಯಾಯಾಮ ಮಾಡಲು ನನಗೆ ಸೂಚಿಸಿದರು, ಅಂದಿನಿಂದ, ನಾನು ಪ್ರತಿದಿನ ಒಂದು ಗಂಟೆ ಪ್ರಾಣಾಯಾಮವನ್ನು ಮಾಡುತ್ತಿದ್ದೇನೆ, ನಂತರ ವ್ಯಾಯಾಮವನ್ನು ಮಾಡುತ್ತಿದ್ದೇನೆ. ಇದರಿಂದ ನನ್ನ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡಿತು ಎಂದು ಹೇಳಿದ್ದಾರೆ.
ನಿತಿಶ್ ಸರ್ಕಾರದಲ್ಲಿ ಹೊಸ ಬಿಕ್ಕಟ್ಟು
ಬಿಹಾರದ ಕೃಷಿ ಸಚಿವ ಸುಧಾಕರ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ನಿತೀಶ್ ಕುಮಾರ್ ಸರ್ಕಾರವನ್ನು ಆಗಾಗ್ಗೆ ಮುಜುಗರಕ್ಕೀಡು ಮಾಡುತ್ತಿದ್ದ ಸುಧಾಕರ್ ಸಿಂಗ್ ರಾಜಿನಾಮೆಯಿಂದ ಹೊಸದೊಂದು ಬಿಕ್ಕಟ್ಟು ಸೃಷ್ಟಿಯಾದಂತಾಗಿದೆ. ಬಿಜೆಪಿ ನಿರ್ದೇಶನದಂತೆ ಸುಧಾಕರ್ ಸಿಂಗ್ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ನಿತಿಶ್ ಆಪ್ತರು ಮಾಡುತ್ತಿದ್ದರು. ಸುಧಾಕರ್ ಇತ್ತೀಚೆಗೆ ಜೆಡಿಯು – ರ್ಆ ಜೆಡಿ ಮೈತ್ರಿ ಸರ್ಕಾರ ರಚನೆಯಾದಾಗ ಸಚಿವ ಸ್ಥಾನ ಗಳಿಸಿದ್ದರು. ಬಿಹಾರ ಆರ್‌ಜೆಡಿ ಅಧ್ಯಕ್ಷ ಜಗದಾನಂದ ಸಿಂಗ್ ಅವರ ಪುತ್ರ ಸುಧಾಕರ್. ಪುತ್ರನನ್ನು ಬೆಂಬಲಿಸಿರುವ ಜಗದಾನಂದ ಸಿಂಗ್, ಅವರು ರೈತ ಸಮುದಾಯದ ಕಾಳಜಿಗೆ ಧ್ವನಿ ನೀಡಿದ್ದಾರೆ, ಆದರೆ ಕೆಲವೊಮ್ಮೆ ಇದು ಸಾಕಾಗುವುದಿಲ್ಲ. ತ್ಯಾಗ ಮಾಡಬೇಕು. ಆದ್ದರಿಂದ, ಕೃಷಿ. ಸಚಿವರು ತಮ್ಮ ರಾಜೀನಾಮೆ ಪತ್ರವನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.
ಆರ್ ಜೆಡಿ- ಜೆಡಿಯು ನಡುವೆ ಬಿರುಕು ದೊಡ್ಡದಾಗುವುದನ್ನು ತಪ್ಪಿಸಲೆಂದೇ ಸುಧಾಕರ್ ರಾಜಿನಾಮೆ ಪಡೆಯಲಾಗಿದೆ ಎಂದೂ ಹೇಳಲಾಗುತ್ತಿದೆ.
ಬಡ್ಡಿದರ ಏರಿಸಲು ಪೈಪೋಟಿ
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋದರವನ್ನು ಶೇ.೫.೯೦ಕ್ಕೆ ಏರಿಕೆ ಮಾಡಿದ ನಂತರ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳು ಬಡ್ಡಿದರ ಏರಿಕೆ ಮಾಡಲು ಪೈಪೋಟಿಗೆ ಇಳಿದಂತಿವೆ. ಆರ್‌ಬಿಐ ರೆಪೋದರವನ್ನು ಶೇ.೦.೫೦ರಷ್ಟು ಏರಿಕೆ ಮಾಡಿದ್ದರೂ ಬ್ಯಾಂಕುಗಳು ಅದಕ್ಕೆ ಪೂರಕವಾಗಿ ಗ್ರಾಹಕರ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡುವ ಬದಲು ಶೇ.೧ರಿಂದ ೧.೫೦ರಷ್ಟು ಬಡ್ಡಿದರ ಏರಿಕೆ ಮಾಡಲಿವೆ. ಸಾಮಾನ್ಯವಾಗಿ ರೆಪೊದರ ಏರಿಕೆ ಮಾಡಿದ ಎರಡು ಮೂರು ದಿನಗಳಲ್ಲಿ ಬ್ಯಾಂಕುಗಳು ಬಡ್ಡಿದರ ಏರಿಕೆ ಮಾಡುತ್ತವೆ. ಸೋಮವಾರದಿಂದ ಬಹುತೇಕ ಬ್ಯಾಂಕುಗಳು ಪರಿಷ್ಕೃತ ಬಡ್ಡಿದರ ಘೋಷಣೆ ಮಾಡಲಿವೆ. ಆರ್‌ಬಿಐ ಸತತವಾಗಿ ರೆಪೊದರ ಏರಿಸುತ್ತಾ ಬಂದಿದೆ. ಶೇ.೪ರಷ್ಟು ಇದ್ದದ್ದು ಈಗ ಶೇ.೫.೯೦ಕ್ಕೆ ಏರಿದೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಬಹುತೇಕ ಎಲ್ಲಾ ಸಾಲಗಳ ಮೇಲಿನ ಬಡ್ಡಿಯೂ ಕಳೆದ ಆರು ತಿಂಗಳಲ್ಲಿ ಶೇ.೨ರಿಂದ ೩ರಷ್ಟು ಏರಿಕೆಯಾಗಿದೆ. ಈಗ ಮತ್ತಷ್ಟು ಏರಿಕೆಯಾಗಲಿದೆ. ಹಣದುಬ್ಬರ ತಡೆಯುವ ಸಲುವಾಗಿ ಆರ್‌ಬಿಐ ಬಡ್ಡಿದರ ಏರಿಸುತ್ತಿದೆ.