Light
Dark

ಸಂಪಾದಕೀಯ: ಯುದ್ಧ ಕಾಲೇ ಶಸ್ತ್ರಭ್ಯಾಸ ಆಡಳಿತಶಾಹಿಯ ಪುರಾತನ ಅಭ್ಯಾಸ!

ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುವ, ಯುದ್ಧ ಕಾಲ ಸಮೀಪಿಸಿದಾಗ ಶಸ್ತ್ರಭ್ಯಾಸ ಮಾಡುವ ಪ್ರವೃತ್ತಿ ಆಡಳಿತಷಾಹಿಗೆ ಬಹಳ ಹಿಂದಿನಿಂದಲೂ ಬಂದಿದೆ. ಇವತ್ತು ಇಡೀ ದಕ್ಷಿಣ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ನದಿಗಳಲ್ಲಿ ಪ್ರವಾಹ ಉಕ್ಕಿ ಹರಿಯುತ್ತಿದ್ದರೆ, ಕೆರೆಕಟ್ಟೆಗಳು ಕೋಡಿ ಬಿದ್ದು ಬೆಳೆಗಳನ್ನೆಲ್ಲ ಆಪೋಷನ ತೆಗೆದುಕೊಂಡಿವೆ. ಇದು ಪ್ರಕೃತಿಯ ಕಡೆಯಿಂದಾದ ಹಾನಿಯಾದರೆ, ಪ್ರಕೃತಿಗೆ ಎದುರಾಗಿ ಮಾನವನೇ ನಿರ್ಮಿಸಿಕೊಂಡ ಜನವಸತಿ ಪ್ರದೇಶಗಳು ಮಳೆಗಾಲದಲ್ಲಿ ಸಂಪೂರ್ಣ ಜಲಾವೃತ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಕೆರೆ ಕಟ್ಟೆಗಳನ್ನು ಮುಚ್ಚಿ ಲೇಔಟ್ ಮಾಡಿದ್ದರ ಪರಿಣಾಮವನ್ನು ಆ ಜಾಗದಲ್ಲಿ ನೆಲೆಕಟ್ಟಿಕೊಂಡವರು ಅನುಭವಿಸುತ್ತಿದ್ದಾರೆ.

ಲೇಔಟ್ ಮಾಡಿ ಮಾರಾಟ ಮಾಡಿದವರು ಕೋಟ್ಯಂತರ ರೂ. ಸಂಪಾದಿಸಿ ಆರಾಮಾಗಿದ್ದಾರೆ. ಇದು ನಮ್ಮ ವ್ಯವಸ್ಥೆ. ಅಸಲಿಗೆ ತಗ್ಗು ಪ್ರದೇಶದಲ್ಲಿ ನಿವೇಶನ ಮಾಡಲು ಅನುಮತಿ ಕೊಡುವ ಸಂಬಂಧಿಸಿದ ಇಲಾಖೆಗಳ ಇಂಜಿನಿಯರ್ಗಳು ಸರ್ಕಾರದ ಯಾವುದಾದರೂ ನಿರ್ದೇಶನ ಪಾಲಿಸಿದ್ದಾರಾ ಎಂಬುದು ಮುಖ್ಯ ಪ್ರಶ್ನೆ!

ಅದು ಮಹಾನಗರಪಾಲಿಕೆಯಾಗಲಿ, ನಗರಸಭೆಯಾಗಲಿ, ಪುರಸಭೆಯಾಗಲಿ ಈ ಎಲ್ಲರ ವ್ಯಾಪ್ತಿಯಲ್ಲಿ ಪರವಾನಗಿ ಸಿಕ್ಕಿದ್ದೇ ದೊಡ್ಡ ‘ವರ’ ಎಂಬಂತೆ ನಿಶ್ಚಿಂತೆಯಿಂದ ಮನೆಕಟ್ಟಿಕೊಂಡವರು, ತಾವಿರುವ ಪ್ರದೇಶ ಯಾವುದು? ಹೇಗಿದೆ? ಮಳೆ ನೀರು ಹರಿದುಹೋಗುವಂತಿದೆಯಾ? ಈ ಯಾವ ಮಾಹಿತಿಯನ್ನೂ ಪಡೆಯದೇ ಮನೆಕಟ್ಟಿಕೊಳ್ಳುತ್ತಿರುವುದು ಒಂದು ಕಡೆಯಾದರೆ, ಯಾರು ಎಲ್ಲಿ ಬೇಕಾದರೂ ಮನೆ ಕಟ್ಟಿಕೊಳ್ಳಲಿ ನಮಗೇನಂತೆ ಎಂದು ಮನಸೋಇಚ್ಛೆ ಪರವಾನಗಿ ವಿತರಿಸಿದ ಸಕ್ಷಮ ಪ್ರಾಧಿಕಾರಗಳದ್ದು ದೊಡ್ಡ ಲೋಪ ಇದೆ.

ಮಂಡ್ಯದ ಕೆರೆಯಿದ್ದ ಜಾಗದಲ್ಲಿ ಮುಡಾದವರು ಲೇಔಟ್ ಮಾಡಿ ವಿವೇಕಾನಂದನಗರ ಮಾಡಿದರು. ಆ ಕಡೆ ಬೀಡಿ ಕಾಲೋನಿ, ಮತ್ತೊಂದೆಡೆ ಕೆಎಚ್ಬಿ ಕಾಲೋನಿ ಮಾಡಿ ಸಿಕ್ಕಿದಷ್ಟು ವರಮಾನ ಬಾಚಿಕೊಂಡರು. ಇವತ್ತು ಬೀಡಿಕಾರ್ಮಿಕರ ಕಾಲೋನಿಯಲ್ಲಿ ಮನೆಮನೆಗೆ ಮಳೆನೀರು ನುಗ್ಗಿ ಹಾದಿ ಬೀದಿಯ ಮಲಮೂತ್ರ, ವಿಷಜಂತುಗಳೂ ಮನೆಯೊಳಕ್ಕೆ ಧಾವಿಸುತ್ತವೆ. ಇನ್ನು ಪ್ರತಿಷ್ಠಿತ ವಿವೇಕಾನಂದನಗರ ಬಹುಕಾಲದಿಂದ ಕೆರೆಯಾಗಿದ್ದ ಪ್ರದೇಶ. ಈಗಲೂ ಇಲ್ಲಿ ಫೌಂಡೇಷನ್‌ಗೆ ಅತಿಹೆಚ್ಚು ವೆಚ್ಚ ಮಾಡಬೇಕಾದ ಪರಿಸ್ಥಿತಿಯಿದೆ. ಐದಾರು ಅಡಿ ಆಳ ತೆಗೆದರೂ ಗಟ್ಟಿ ಅರೆಭೂಮಿ ಸಿಗುವುದಿಲ್ಲ. ಇಂತಲ್ಲಿ ಮೊನ್ನೆ ಬಿದ್ದ ಭಾರಿ ಮಳೆಯಿಂದ ಇಡೀ ವಿವೇಕಾನಂದನಗರ ಜಲಾವೃತ್ತಗೊಂಡಿತ್ತು. ನಿವಾಸಿಗಳು ಮನೆಯಿಂದ ದಿನವಿಡೀ ಹೊರಗೆ ಬರಲು ಪರದಾಡಬೇಕಾಯಿತು.

ನಗರದ ಬೀಡಿ ಕಾರ್ಮಿಕರ ಕಾಲೋನಿ ಸಂಪೂರ್ಣ ಜಲಾವೃತಗೊಂಡಾಗ, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಸ್ಥಳೀಯರನ್ನು ಬೋಟ್ ಮೂಲಕ ಹೊರಗೆ ಕರೆತರುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವಯೋ ವೃದ್ಧರು ನೀರು ತುಂಬಿದ ಮನೆಗಳಲ್ಲಿ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ಅವರನ್ನು ಹೊರಗೆ ಕರೆತರುವ ಕೆಲಸ ಮಾಡಿದರು. ಸ್ಥಳಕ್ಕೆ ತಹಸಿಲ್ದಾರ್ ಕುಂಞ ಅಹಮದ್ ಭೇಟಿ ನೀಡಿ ಪರಿಶೀಲನೆ ನಡೆಸಿ, ತಕ್ಷಣ ನಿವಾಸಿಗಳನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದರು. ವಾಸ್ತವದಲ್ಲಿ ಇದು ಈ ವರ್ಷ ಕಳೆದ ವರ್ಷದ ಪರಿಸ್ಥಿತಿಯಲ್ಲ. ಹಲವಾರು ವರ್ಷಗಳಿಂದಲೂ ಇದೇ ಪರಿಸ್ಥಿತಿ ಇದೆ.

ಹವಾಮಾನ ಇಲಾಖೆ ಮುನ್ಸೂಚನೆ ಕೊಡುತ್ತದೆ. ಆದರೂ ಸಂಬಂಧಿಸಿದ ಇಲಾಖೆಯರು ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸುವುದಿಲ್ಲ. ಬಂದ ರಾಜಕಾರಣಿಗಳೆಲ್ಲ ಬರೀ ಭರವಸೆಯ ಮಾತು ಹೇಳಿ ಹೋದವರೇ. ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಸ್ಥಳೀಯರಲ್ಲಿ ಸಿಟ್ಟು ಮಡುಗಟ್ಟಿದೆ.

ಮಂಡ್ಯ ಜಿಲ್ಲೆಯೊಂದರಲ್ಲೇ ಶುಕ್ರವಾರ ರಾತ್ರಿ ಒಂದೇ ದಿನ ಸರಾಸರಿ ೧೨೮.೬ ಮಿ.ಮೀ. ಮಳೆಯಾಗಿದೆ. ವಾಡಿಕೆ ಮಳೆಗೆ (೫೬.೫ಮಿ.ಮೀ.) ಹೋಲಿಸಿದರೆ ಶೇ.೧೨೭.೬ರಷ್ಟು ಹೆಚ್ಚುವರಿ ಮಳೆ ಸುರಿದಿದೆ. ಎಲ್ಲ ತಾಲ್ಲೂಕುಗಳಲ್ಲಿ ವಾಡಿಕೆಗಿಂತಲೂ ದುಪ್ಪಟ್ಟು ಪ್ರಮಾಣದ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿ ಪರದಾಡಿದ್ದಾರೆ.

ಹಲವೆಡೆ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಮನೆಗಳು, ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶದ ಜನರು ಎಡೆಬಿಡದೆ ಸುರಿದ ಮಳೆಯಿಂದಾಗಿ ರಾತ್ರಿಯಿಡಿ ಜಾಗರಣೆ ಮಾಡುವಂತಾಗಿದ್ದೆ.

ನಾಗಮಂಗಲ ತಾಲ್ಲೂಕು ಒಂದರಲ್ಲೇ ೩೦ ಹೆಕ್ಟೇರ ಪ್ರದೇಶದಲ್ಲಿ ಕೃಷಿ ಬೆಳೆ ಮತ್ತು ೨೦ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ನಾಶವಾಗಿದೆ. ೧೪ ಮನೆಗಳಿಗೆ ಭಾಗಶಃ ಹಾನಿಯಾಗಿರುವುದನ್ನು ಅಂದಾಜಿಸಲಾಗಿದೆ. ಇದು ಮಳೆಯಿಂದ ಹಾನಿಯಾಗಿರುವ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ತಹಸಿಲ್ದಾರ್ ನಂದೀಶ್ ಮಾಹಿತಿ. ಆದರೆ, ನಷ್ಟಕ್ಕೊಳಗಾದವರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದಾಗ ತಾಲ್ಲೂಕು ಕಚೇರಿ ಕೇಳುವ ದಾಖಲಾತಿಗಳನ್ನು ಪೂರೈಸಲಾಗದೇ ಅದೆಷ್ಟೋ ರೈತರು ಸಾಕಪ್ಪ ಇವರ ಸಹವಾಸ ಎಂದು ದೂರವುಳಿದಿರುವ ನಿದರ್ಶನ ಸಾಕಷ್ಟಿವೆ. ಮಳೆಹಾನಿಯಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡುವಾಗ ಸರ್ಕಾರ ದಾಖಲೆಗಳಿಗಾಗಿ ಒತ್ತಾಯಿಸದೇ ಮಾನವೀಯ ನೆಲೆಯಲ್ಲಿ ತ್ವರಿತ ಪರಿಹಾರ ನೀಡಬೇಕಿದೆ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ