ದೀರ್ಘಾಯುಷ್ಯ ಅಥವಾ ದೀರ್ಘಕಾಲ ಬದುಕುವುದು ಮಾನವನ ಬಹು ನಿರೀಕ್ಷಿತ ಗುರಿಯಾಗಿದೆ. ಜೊತೆಗೆ ವಾಸ್ತವದಲ್ಲಿ ಇದು ನಮ್ಮ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ಹೀಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ಹಿರಿಯರು ಹೆಚ್ಚಿನ ಸಂದರ್ಭದಲ್ಲಿ ಎದುರಿಗೆ ಸಿಕ್ಕ ಕಿರಿಯರಿಗೆ ‘ಆಯುಷ್ಮಾನ್ ಭವ’ (ನೀವು ನೂರು ವರ್ಷ ಬದುಕಿ) ಎಂದು ಆಶೀರ್ವಾದ ಮಾಡುವುದನ್ನು ಕಾಣಬಹುದು.
ಸ್ವಾತಂತ್ರ್ಯಾ ನಂತರದ ಭಾರತ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸುವವರೆಗೆ ಹಸಿವು, ಅಪೌಷ್ಟಿಕತೆ, ಅನಾರೋಗ್ಯ ಮೊದಲಾದ ಕಾರಣಗಳಿಂದಾಗಿ ೧೯೫೦ರ ದಶಕದಲ್ಲಿ ಭಾರತದಲ್ಲಿ ಜನರ ಜೀವಿತಾವಽ ೩೫ ವರ್ಷಗಳಿದ್ದುದು ೨೦೨೦ನೇ ಇಸವಿ ಹೊತ್ತಿಗೆ ಜಗತ್ತಿನ ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳಂತೆ ೭೦ ವರ್ಷಗಳಿಗೆ ಹೆಚ್ಚಾಗಿದೆ.
ಹಿರಿಯ ನಾಗರಿಕರು ನಿಸ್ಸಂದೇಹವಾಗಿ ಭಾರತೀಯ ಸಮಾಜದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯಾ ವಿಭಾಗವಾಗಿದ್ದಾರೆ. ಆರೋಗ್ಯ ರಕ್ಷಣೆಯಲ್ಲಿನ ಪ್ರಗತಿಗಳು ಮತ್ತು ದೀರ್ಘಾಯುಷ್ಯ, ಮರಣ ಪ್ರಮಾಣ ಕಡಿಮೆಯಾಗುವುದರೊಂದಿಗೆ ಹಿರಿಯ ನಾಗರಿಕರ ಪ್ರಮಾಣವು ವೇಗವಾಗಿ ಬೆಳೆಯುತ್ತಿದೆ. ೨೦೧೭ರಲ್ಲಿ ದೇಶದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಸುಮಾರು ೧೦೦ ಮಿಲಿಯನ್ ಆಗಿದ್ದು, ಒಟ್ಟಾರೆ ಜನಸಂಖ್ಯೆಯ ಶೇ.೮ರಷ್ಟಿತ್ತು. ೨೦೨೨ರಲ್ಲಿ ಈ ಪ್ರಮಾಣ ಶೇ.೧೦.೫ಕ್ಕೆ ಏರಿತು. ೨೦೫೦ರ ವೇಳೆಗೆ ಈ ಪ್ರಮಾಣ ಶೇ.೨೦.೮ಕ್ಕೆ ಏರಿಕೆಯಾಗಿ, ಈ ಶತಮಾನದ ಅಂತ್ಯದ ವೇಳೆಗೆ ಶೇ.೩೬ ತಲುಪಲಿದೆ ಎಂದು ಹಿರಿಯ ನಾಗರಿಕರಿಗಾಗಿ ಕೆಲಸ ಮಾಡುತ್ತಿರುವ ಹೆಲ್ಪ್‌ಏಜ್ ಇಂಡಿಯಾ ಸ್ವಯಂಸೇವಾ ಸಂಸ್ಥೆ ಹೇಳಿದೆ.
ದೀರ್ಘಕಾಲ ಬದುಕುವುದು ಒಂದು ಗುರಿಯಾಗಿದ್ದರೂ ಮಾನವೀಯತೆ, ಸದ್ಗುಣಗಳೊಂದಿಗೆ ಚೆನ್ನಾಗಿ ಬದುಕುವುದು ಅತ್ಯಂತ ಆಳವಾದ ಅಸ್ತಿತ್ವವಾದದ ಪರಿಕಲ್ಪನೆಗಳಲ್ಲಿ ಒಂದಾಗಿದೆ. ೫೦ನೇ ವಯಸ್ಸಿನ ನಂತರದ ದಿನಗಳಲ್ಲಿ ಈ ಕಲ್ಪನೆಯು ಅನೇಕರಲ್ಲಿ ಹೊರಹೊಮ್ಮುತ್ತಿದೆ. ಹಾಗಾದರೆ ೨೦ನೇ ವಯಸ್ಸಿನ ಮಧ್ಯಭಾಗದಲ್ಲಿರುವವರು ಇದರ ಬಗ್ಗೆ ಏಕೆ ಯೋಚಿಸಬೇಕು? ಈಗ ನಮಗೆ ಹೆಚ್ಚು ಸರಳವಾದ, ಪ್ರಾಯೋಗಿಕ ಪರಿಹಾರವಿದೆ. ನಮ್ಮ ಮುಂದಿರುವ ಹಾದಿಯಲ್ಲಿ ನಡೆದವರು, ಉತ್ತಮ ಜೀವನಕ್ಕೆ ಏನು ಮುಖ್ಯ ಎಂಬುದರ ಕುರಿತು ಸಾಕಷ್ಟು ಸಂಶೋಧನೆಗಳನ್ನು ಮಾಡಿ ಹೋಗಿದ್ದಾರೆ.
ಸಂಶೋಧಕರು ೬೦-೭೦ನೇ ವಯೋಮಾನದವರು ಯಾವ ಅಂಶಗಳನ್ನು ವಿಭಿನ್ನವಾಗಿ ಮಾಡಲು ಇಷ್ಟಪಡುತ್ತಾರೆ ಎಂದು ಕೇಳುತ್ತಾರೆ. ಇಷ್ಟು ವರ್ಷ ತಾನು ತನ್ನ ನಿಜ ಸ್ವಭಾವದಲ್ಲಿ ಬದುಕಿದ್ದೇನೆಯೇ? ಜೀವನದಲ್ಲಿ ಉತ್ತಮ ಆಯ್ಕೆಗಳನ್ನು ಮಾಡಿದ್ದೇನೆಯೇ ಎಂದು ಕಂಡುಕೊಳ್ಳಲು ಈ ಇಳಿ ವಯಸ್ಸಿನಲ್ಲಿ ಪ್ರಯತ್ನಿಸುತ್ತಾರೆ ಎಂಬುದನ್ನು ಸಂಸ್ಥೆ ತನ್ನ ಸಂಶೋಧನೆಗಳಲ್ಲಿ ಕಂಡು ಕೊಂಡಿದೆ. ಈಗೀಗ ಮಕ್ಕಳು ತಮ್ಮ ಹೆತ್ತವರನ್ನು ವೃದ್ಧಾಶ್ರಮದಲ್ಲಿ ಬಿಡುವ ಪ್ರವೃತ್ತಿ ಹೆಚ್ಚುತ್ತಿದೆ.
ದುರದೃಷ್ಟವಶಾತ್ ಅಂತಹ ಒಬ್ಬ ಮಗ ಮತ್ತು ಮಗಳು ತಮ್ಮ ತಾಯಿಯನ್ನು ಒಂದು ಮನೆಯಲ್ಲಿ ಬಿಟ್ಟು ಸಾಂದರ್ಭಿಕವಾಗಿ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಒಂದು ಹಂತದಲ್ಲಿ ತಾಯಿ ತನ್ನ ಅಂತ್ಯ ಸಮೀಪಿಸುತ್ತಿದೆ ಎಂದು ಅರಿತುಕೊಂಡು, ತನ್ನ ಪ್ರೀತಿಯ ಮಕ್ಕಳಿಗೆ ಕರೆ ಮಾಡಿ ಮನೆಗೆ ಅಗತ್ಯವಿರುವ ಕೆಲವು ಬದಲಾವಣೆಗಳ ಬಗ್ಗೆ ಮಾತನಾಡುತ್ತಿದ್ದಳು. ಮನೆಗೆ ಒಂದೊಳ್ಳೆಯ -ನ್, ಒಳ್ಳೆಯ ಹಾಸಿಗೆ, ಸಾಗುವಾನಿ ಅಥವಾ ಬೀಟೆ ಮರದಿಂದ ಮಾಡಿದ ಪೀಠೋಪಕರಣಗಳು…ಇತ್ಯಾದಿ.. ಇತ್ಯಾದಿ ಪಟ್ಟಿಯನ್ನು ಹೇಳುತ್ತಲೇ ಹೋಗುತ್ತಿದ್ದಳು.
ಮಕ್ಕಳು ಆಶ್ಚರ್ಯ ಚಕಿತರಾಗಿ ತಾಯಿಯನ್ನು ಕೇಳಿದರು. ನೀನು ಇವುಗಳ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮೊದಲೇ ಏಕೆ ನಮಗೆ ಹೇಳಲಿಲ್ಲ? ಮಕ್ಕಳ ಪ್ರಶ್ನೆಗೆ ತಾಯಿ ಹೇಳುತ್ತಾಳೆ: ನಾನು ನಿಮಗೆ ತೊಂದರೆ ನೀಡಲು ಬಯಸುವುದಿಲ್ಲ. ಹೀಗಾಗಿ ಈ ವಿಚಾರಗಳನ್ನು ಮನೆಯಲ್ಲಿದ್ದಾಗ ನಿಮ್ಮೊಂದಿಗೆ ಹಂಚಿಕೊಳ್ಳಲಿಲ್ಲ. ಈಗ ನಾನು ಮನೆಯಲ್ಲಿಲ್ಲ, ವೃದ್ಧಾಶ್ರಮದಲ್ಲಿ ಕಷ್ಟಗಳಿಗೆ ಹೊಂದಿಕೊಂಡಿದ್ದೇನೆ. ಮನೆಗೆ ಬೇಕಿರುವ ವಸ್ತುಗಳ ಪಟ್ಟಿ ಹೇಳಿದ್ದೇನೆ, ತೆಗೆದುಕೊಳ್ಳುವುದು ಬಿಡುವುದು ನಿಮಗೆ ಬಿಟ್ಟಿದ್ದು, ನನ್ನ ಒತ್ತಾಯವೇನಿಲ್ಲ ಎನ್ನುತ್ತಾಳೆ. ಎಲ್ಲಾ ತಾಯಂದಿರು ಮತ್ತು ಪೋಷಕರು ಹೀಗೆಯೇ ಇದ್ದಾರೆ ಅಲ್ಲವೇ? ಅವರು ತಮ್ಮ ಚಿಂತೆ ಮತ್ತು ತೊಂದರೆ ಗಳನ್ನು ಹಂಚಿಕೊಳ್ಳುವುದಿಲ್ಲ. ಆದರೆ, ತನ್ನ ಮಕ್ಕಳ ಬಗೆಗೆ ಕಾಳಜಿ ವಹಿಸುತ್ತಲೇ ಇರುತ್ತಾರೆ.
” ೨೦೧೭ರಲ್ಲಿ ದೇಶದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಸುಮಾರು ೧೦೦ ಮಿಲಿಯನ್ ಆಗಿದ್ದು, ಒಟ್ಟಾರೆ ಜನಸಂಖ್ಯೆಯ ಶೇ.೮ರಷ್ಟಿತ್ತು. ೨೦೨೨ರಲ್ಲಿ ಈ ಪ್ರಮಾಣ ಶೇ.೧೦.೫ಕ್ಕೆ ಏರಿತು. ೨೦೫೦ರ ವೇಳೆಗೆ ಈ ಪ್ರಮಾಣ ಶೇ.೨೦.೮ಕ್ಕೆ ಏರಿಕೆಯಾಗಿ, ಈ ಶತಮಾನದ ಅಂತ್ಯದ ವೇಳೆಗೆ ಶೇ.೩೬ ತಲುಪಲಿದೆ”





