ಬಸ್ ನಿಲ್ದಾಣಗಳಿಗೆ ರಾಜಕಾರಣಿಗಳ ಹೆಸರು, ಫೋಟೊ ಬಳಸಬೇಡಿ
ಮೈಸೂರು ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಿರ್ಮಾಣ ಹಂತದಲ್ಲಿರುವ ಹಾಗೂ ಈಗಾಗಲೇ ನಿರ್ಮಾಣವಾಗಿರುವ ಸಾರ್ವಜನಿಕ ಬಸ್ ನಿಲ್ದಾಣಗಳಿಗೆ ಸ್ಥಳೀಯ ಶಾಸಕರ, ಚುನಾಯಿತ ಪ್ರತಿನಿಧಿಗಳ ಹೆಸರು ಮತ್ತು ಫೋಟೋಗಳನ್ನು ಹಾಕಿರುವುದು ಉಚಿತವೇ ಎಂದು ಪ್ರಶ್ನಿಸಬೇಕಿದೆ.
ಸಾರ್ವಜನಿಕ ಆಸ್ತಿ-ಪಾಸ್ತಿಗಳ ಮೇಲೆ ಬರೆಸಲು ಅವರು ತಮ್ಮ ಸ್ವಂತ ಹಣದಿಂದ ನಿರ್ಮಾಣ ಮಅಡಿದ್ದಾರೇಯೇ? ಎಲ್ಲ ಸರ್ಕಾರಿ ಕಟ್ಟಡಗಳು ಹಾಗೂ ಬಸ್ ನಿಲ್ದಾಣಗಳನ್ನು ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣ ಮಾಡಲಾಗಿದೆ. ಆದ್ದರಿಂದ ಅಲ್ಲಿ ಇವರ ಹೆಸರು ಮತ್ತು ಫೋಟೊಗಳನ್ನು ಹಾಕುವುದು ಸೂಕ್ತವಲ್ಲ.
ಇನ್ನು ಅನೇಕ ಕಡೆ ಈ ಬಸ್ ನಿಲ್ದಾಣಗಳು ನಿರ್ವಹಣೆೆಯೇ ಇಲ್ಲದೆ ಪಾಳುಬಿದ್ದು, ಅನೈರ್ಮಲ್ಯದಿಂದ ಕೂಡಿವೆ. ಈ ಬಗ್ಗೆ ಅವರು ಗಮನ ನೀಡಲಿ. ಬಸ್ ನಿಲ್ದಾಣಗಳು ಸ್ಥಳೀಯ ಶಾಸಕರ ಅನುದಾನದಿಂದ ನಿರ್ಮಾಣವಾಗಿದ್ದರೆ ‘ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯ ಅನುದಾನಲ್ಲಿ ನಿರ್ಮಿಸಿದ ಬಸ್ ನಿಲ್ದಾಣ’ ಎಂದು ಬರೆಸಲಿ. ಸರ್ಕಾರ ಈ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.
ಭಗವಾನ್ ಅಗಲಿಕೆ ಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟ
ಹಿನ್ನೆಲೆ ಗಾಯಕಿ ವಾಣಿ ಜಯರಾಂರವರ ನಿಧನದ ಬೆನ್ನಲ್ಲೇ ಕನ್ನಡ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ದೇಶಕ ಭಗವಾನ್‌ರವರು ವಯೋಸಹಜ ಕಾಯಿಲೆಯಿಂದ ನಿಧನರಾದ ಸುದ್ದಿ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ವಾಡಿದೆ.
ಭಗವಾನ್‌ರವರ ಬಹುತೇಕ ಚಿತ್ರಗಳು ಕನ್ನಡಿಗರ ಮೇಲೆ ಪ್ರಭಾವ ಬೀರುತ್ತಿದ್ದವು. ದೂರಾದ ಕುಟುಂಬಗಳು ಭಗವಾನರ ಚಿತ್ರಗಳನ್ನು ನೋಡಿದ ಬಳಿಕ ಒಂದಾದ ಸಾಕಷ್ಟು ನಿದರ್ಶನಗಳಿವೆ. ಅಷ್ಟರಮಟ್ಟಿಗೆ ನೈಜತೆಗೆ ಹತ್ತಿರವಿದ್ದವು ಅವರ ಚಿತ್ರಗಳು. ಕನ್ನಡ ಚಿತ್ರರಂಗದ ಮೇರು ನಟರಾದ ಡಾ.ರಾಜ್‌ಕುಮಾರ್, ಅನಂತನಾಗ್, ಶ್ರೀನಾಥ್‌ರಂತಹ ನಟರ ಚಿತ್ರಗಳನ್ನು ನಿರ್ದೇಶಿಸಿದ್ದರು. ಅವರ ಚಿತ್ರಗಳ ವಿಶೇಷವೆಂದರೆ, ಒಂದು ಚಿತ್ರಕ್ಕೆ ನಾಲ್ಕು ಹಾಡುಗಳು, ಎರಡು ಫೈಟ್, ಮನಮೋಹಕ ಹೋರಾಂಗಣ ದೃಶ್ಯದ ಜೊತೆ ಉತ್ತಮ ಕಥೆಯನ್ನು ಹೊಂದಿದ್ದು, ಚಿತ್ರ ಪ್ರೇಕ್ಷಕರನ್ನು ಎಲ್ಲಿಯೂ ಬೇಸರಪಡಿಸದಂತಿದ್ದವು.
ಒಂದು ಚಿತ್ರ ಆ ಕಾಲದಲ್ಲಿ ಶತದಿನವನ್ನು ಪೂರೈಸಲು ಬೇಕಾದಂತಹ ಅಂಶಗಳು ಚಿತ್ರದಲ್ಲಿರುತ್ತಿದ್ದವು. ಅಂತಹ ಅದ್ಭುತ ಚಿತ್ರಗಳನ್ನು ನೀಡಿದ ಭಗವಾನ್‌ರವರು ಎಂದಿಗೂ ಕನ್ನಡಿಗರ ಮನದಲ್ಲಿ ಅಜರಾಮರ.
-ಜಿ.ಪಿ.ಹರೀಶ್, ವಿ.ವಿ.ಮೊಹಲ್ಲಾ, ಮೈಸೂರು.
ಇದು ಹೆಮ್ಮೆಯಲ್ಲ, ನಾಚಿಕೆಗೇಡಿನ ಸಂಗತಿ!
ಸರ್ಕಾರ ಶೇ.5ರಷ್ಟು ರಿಯಾಯಿತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ವಾಹನಗಳಿಗೆ ದಂಡ ಪವಾತಿಸಲು ಅವಕಾಶ ನೀಡಿದ ಬಳಿಕ ಸಂಗ್ರಹವಾದ ದಂಡದ ಮೊತ್ತ 120 ಕೋಟಿ ರೂ.ಗಳನ್ನು ಮೀರಿದೆ ಎಂದು ಪೊಲೀಸ್ ಇಲಾಖೆಯು ಸಂತಸಪಡುತ್ತಿದೆ.
ಆದರೆ, ಇದು ಇಷ್ಟು ದಂಡದ ಮೊತ್ತದ ಸಂಗ್ರಹವಾಗಿದೆ ಎಂದು ಹೆಮ್ಮೆ ಪಡುವ ಬದಲು ನಾಚಿಕೆಗೇಡಿನ ವಿಷಯವಾಗಿದೆ. 120 ಕೋಟಿ ರೂ.ಗಳ ದಂಡ ವಸೂಲಾಗಿದೆ ಎಂದರೆ ಅದರರ್ಥ ಅದರ ದುಪ್ಪಟ್ಟು ಸಂಚಾರ ನಿಯಮಗಳು ಉಲ್ಲಂಘನೆಯಾಗಿವೆ ಎಂದಲ್ಲವೇ? ರಾಜ್ಯದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದು, ಸಂಚಾರ ನಿಯಮಗಳನ್ನು ಜನರು ಗಾಳಿಗೆ ತೂರಿದ್ದಾರೆ ಎಂದಲ್ಲವೇ? ಸಂಚಾರ ನಿಯಂತ್ರಣ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದು, ಶೇ.50ರಷ್ಟು ರಿಯಾಯಿತಿಯ ಆಫರ್ ನೀಡುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಉತ್ತೇಜನ ನೀಡಿದಂತಾಗಲಿಲ್ಲವೇ?
ಸಂಚಾರ ನಿಯಮಗಳನ್ನು ಉಲ್ಲಂಘಿಸಲು ಅವಕಾಶ ನೀಡಿರುವ ಪೊಲೀಸರು ನಿಯಮ ಉಲ್ಲಂಘನೆಯಾದ ಬಳಿಕ ಶೇ.50ರಷ್ಟು ರಿಯಾಯಿತಿ ನೀಡುತ್ತೇವೆಂದು ಆಫರ್ ನೀಡಿ ದಂಡ ವಸೂಲಿ ಮಾಡಿ ಬೀಗುವ ಬದಲು ರಸ್ತೆಗಿಳಿದು ಸಂಚಾರ ನಿಯಂತ್ರಣ ,ಮಾಡಿದ್ದರೆ ದಂಡ ವಿಧಿಸುವ, ರಿಯಾಯಿತಿ ನೀಡುವ, ಕೋಟಿಗಟ್ಟಲೆ ದಂಡ ವಸೂಲಿ ಮಾಡುವ ಪ್ರಸಂಗವೇ ಎದುರಾಗುತ್ತಿರಲಿಲ್ಲ. ಆದ್ದರಿಂದ ಇನ್ನು ಮುಂದಾದರೂ ಸಂಚಾರ ಪೊಲೀಸರು ರಸ್ತೆಗಿಳಿದು ಸಂಚಾರ ನಿಯಂತ್ರಣ ಮಾಡುವಂತಾಗಲಿ.
-ಪಿ.ಜೆ.ರಾಘವೇಂದ್ರ, ನ್ಯಾಯವಾದಿ, ಮೈಸೂರು.
ಅಧಿಕಾರಿಗಳ ಜಗಳ ಶೋಭೆ ತರುವಂಥದ್ದಲ್ಲ
ಹಿರಿಯ ಮಹಿಳಾ ಅಧಿಕಾರಿಗಳಿಬ್ಬರು ಸಾರ್ವಜನಿಕವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಜಗಳವಾಡುತ್ತಿರುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರಿಗೆ ಶೋಭೆ ತರುವಂತಹದಲ್ಲ. ಇಬ್ಬರೂ ಅಧಿಕಾರಿಗಳು ತಮ್ಮ ನಡುವೆ ಇರುವಂತಹ ಆರೋಪ ಪ್ರತ್ಯಾರೋಪಗಳನ್ನು ತಮ್ಮ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅಥವಾ ದೂರು ನೀಡುವ ಮೂಲಕ ತನಿಖೆ ನಡೆಸಿ ಬಗೆಹರಿಸಿಕೊಳ್ಳಬೇಕು. ಅದರ ಬದಲಿಗೆ ಮಾಧ್ಯಮಗಳೆದುರು, ಸಾವಾಜಿಕ ಜಾಲತಾಣಗಳಲ್ಲಿ ಜಗಳವಾಡುವುದು ಸರಿಯಲ್ಲ.
ಈ ಇಬ್ಬರೂ ಅಧಿಕಾರಿಗಳು ತಮ್ಮ ಸೇವೆಯಲ್ಲಿ ದಕ್ಷತೆ ಮತ್ತು ಬದ್ಧತೆಯೊಂದಿಗೆ ಕರ್ತವ್ಯ ನಿರ್ವಹಿಸಬೇಕು. ಅದನ್ನು ಬಿಟ್ಟು ಈ ರೀತಿಯಾಗಿ ಬೀದಿರಂಪ ಮಾಡಿಕೊಂಡು ಒಬ್ಬರನ್ನೊಬ್ಬರು ಅವಹೇಳನ ಮಾಡಿಕೊಳ್ಳುವುದು ಆರೋಗ್ಯಕರ ಬೆಳವಣಿಗೆಯಲ್ಲ.
ಪರಸ್ಪರ ದೋಷಾರೋಪ, ಜಗಳ, ನಿಂದನೆ ಹಾಗೂ ಅವಹೇಳನ ಇವೆಲ್ಲವನ್ನು ಸೂಕ್ಷತ್ಮವಾಗಿ ನೋಡುತ್ತಿರುವ ಜನರ ಮೇಲೆ ಪ್ರಭಾವ ಬೀರಲಿದೆ. ಈ ಬಗ್ಗೆ ಈ ಅಧಿಕಾರಿಗಳಿಗೆ ಗಮನಿವಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಆದ್ದರಿಂದ ಇಲಾಖೆಯ ಮೇಲಧಿಕಾರಿಗಳು ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ ತಾ.