Light
Dark

ಆಂದೋಲನ ಓದುಗರ ಪತ್ರ : 12 ಮಂಗಳವಾರ 2022

ಅಭಿಮಾನಿಗಳ ಸಂತೋಷ ಎಲ್ಲೇ ಮೀರಿದೆ

‘ಆಂದೋಲನ’ದ ವಿಶೇಷ ಸಂಚಿಕೆಯನ್ನು ನೋಡಿ ಬೆರಗಾದೆ. ಪತ್ರಿಕೆಯ ಪುಟ ತಿರುವಿದಾಗ ಸಮಾಜದಲ್ಲಿ ನಡೆದ ಘಟನೆಗಳು ಪುನರಾವರ್ತನೆಯಾದಂತಾಯಿತು. ಪತ್ರಿಕೆಯ ತೂಕವು ಜೋರಾಗೆ ಇತ್ತು. ಅದರಲ್ಲಿರುವ ವಿಷಯಗಳು ಮತ್ತಷ್ಟು ತೂಕ! .ಬೆಳಗ್ಗೆಯಿಂದ ಸಂಜೆಯವರೆಗೂ ಪತ್ರಿಕೆಯನ್ನು ಓದುತ್ತಲೇ ಇದ್ದೆ. ಪತ್ರಿಕೆಯ ಸಿಬ್ಬಂದಿ ವರ್ಗದವರ ಪರಿಚಯ ಹಾಗೂ ಜಾಹಿರಾತುಗಳನ್ನು ಒಮ್ಮೆಲೆ ನೋಡುವಂತಾಯಿತು. ಸಾರ್ವಜನಿಕರು ಪತ್ರಿಕೆಯ ಮೇಲೆ ಇಟ್ಟ ಪ್ರೀತಿ ವಿಶ್ವಾಸ ವನ್ನು ಕಂಡು ಸಂತೋಷ ದುಪ್ಪಟವಾಯಿತು. ನೇರವಾಗಿ, ದಿಟ್ಟವಾಗಿ ಸುದ್ದಿಗಳನ್ನು ನಿರ್ಭಯಾವಾಗಿ ನೀಡುವುದೇ ಇದಕ್ಕೆ ಕಾರಣವಾಗಿದೆ. ಪತ್ರಿಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಲಿ, ಜನರ ಪ್ರೀತಿ ಸಾಗರದ ಆಳದಂತೆ ವಿಸ್ತಾರವಾಗಲಿ.

-ಎಂ. ಎಸ್. ಉಷಾ ಪ್ರಕಾಶ್, ಎಸ್. ಬಿ.ಎಂ.ಕಾಲೋನಿ. ಮೈಸೂರು.


ಪತ್ರಿಕಾಧರ್ಮ ಎತ್ತಿಹಿಡಿದ ಪತ್ರಿಕೆ!

ಸುಮಾರು ೨೦೧೦ ರಿಂದ ೨೦೧೪ ರ ವರೆಗೆ ನಾನು ಉದ್ಯೋಗದ ನಿಮಿತ್ತ ಮೈಸೂರಿನಲ್ಲಿದ್ದೆ. ಆಗ ‘ಆಂದೋಲನ’ ಪತ್ರಿಕೆಯಲ್ಲಿ ನಿರಂತರವಾಗಿ ಪತ್ರಗಳನ್ನು ಬರೆಯುತ್ತಿದ್ದೆ.. ಸಂಪೂರ್ಣ ಎಡಪಂತೀಯ ವಿಚಾರಧಾರೆಯ ಪತ್ರಿಕೆಯಾದರೂ ಬಲಪಂತೀಯ ವಿಚಾರಗಳ ಸಮರ್ಥನೆ ಹಾಗೂ ಅಲ್ಲಿ ಬರುತ್ತಿದ್ದ ಎಡಪಂತೀಯ ವಿಚಾರಗಳ ಬಗ್ಗೆ ನಾನು ಮಾಡುತ್ತಿದ್ದ ಚರ್ಚೆಗಳನ್ನು ಹಾಗೂ ನನ್ನ ಬಹುಪಾಲು ಪತ್ರಗಳನ್ನು ಪ್ರಕಟಿಸಿ ಪತ್ರಿಕಾಧರ್ಮ ಎತ್ತಿ ಹಿಡಿಯುತ್ತಿದ್ದ ‘ಆಂದೋಲನ’ ಬಗ್ಗೆ ಹೆಮ್ಮೆ ಇದೆ. ನಂತರ ಶ್ರೀ ಕೋಟಿಯವರನ್ನು ಭೇಟಿಯಾಗಿ ಮಾತನಾಡಿದ್ದೆ ಹಾಗೂ ಅಂದಿನಿಂದ ಪತ್ರಿಕೆಯಲ್ಲಿರುವ ಜಾನ್ ಅವರೊಡನೆಯೂ ನಿರಂತರ ಸಂಪರ್ಕದ್ದಲ್ಲಿದ್ದೆ . ಈ ನಡುವೆ ಬೇರೆ ಬೇರೆ ಊರಿನಲ್ಲಿದ್ದಾಗಲೂ ಪತ್ರ ಪ್ರಕಟವಾಗಿದ್ದಿದೆ. ಈಗ ಐವತ್ತು ವಸಂತ ಪೂರೈಸಿದ ಪತ್ರಿಕೆ ಹಾರ್ದಿಕ ಅಭಿನಂದನೆಗಳು. ಈಗ ಮತ್ತೆ ಮೈಸೂರಿಗೆ ಬಂದಿದ್ದೇನೆ. ‘ಆಂದೋಲನ’ ಮುನ್ನೆಡೆಸುತ್ತಿರುವ ತಂಡಕ್ಕೆ ಶುಭಾಶಯಗಳು.

ಶಿವಮೊಗ್ಗ ನಾ.ದಿನೇಶ್ ಅಡಿಗ, ಮೈಸೂರು.


ಅಡುಗೆ ಅನಿಲ ಬೆಲೆ ಇಳಿಸಿ

ಅಡುಗೆ ಅನಿಲ ದುಬಾರಿಯಾಗುತ್ತಿದ್ದರೆ ಸಾಮಾನ್ಯ ಜನರು ಹೇಗೆ ಬದುಕುತ್ತಾರೆ? ಈಗಿನ ಬೆಲೆ೧೧೩೦-೧೧೬೦ ಇದೆ. ಅದೇ ಮೋದಿ ಸರ್ಕಾರ ಬರುವುದಕ್ಕಿಂತ ಮುಂಚೆ ೨೦೧೪ ರಲ್ಲಿ ಪ್ರತಿ ಸಿಲೆಂಡರ್ ಬೆಲೆ ೪೧೦-೪೩೦ ರೂಪಾಯಿ ಇತ್ತು. ನರೇಂದ್ರ ಮೋದಿಯವರು ೨೦೧೫ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನ ಜಾರಿ ಮಾಡಿದರು. ಆರಂಭದಲ್ಲಿ ಪ್ರತಿ ಸಿಲಿಂಡರಿಗೆ ಸಬ್ಸಿಡಿ ಕೂಡ ಇತ್ತು. ಆದರೆ ೨೦೨೦ರಲ್ಲಿ ಉಜ್ವಲ ಯೋಜನೆ ಮುಕ್ತಾಯಗೊಳಿಸಿದ್ದಾರೆ. ಜನರಿಗೆ ಹೀಗೆ ಪೆಟ್ಟಿನ ಮೇಲೆ ಪೆಟ್ಟು ಕೊಟ್ಟರೆ ಬದುಕುವುದು ಸಾಧ್ಯವೇ? ತಕ್ಷಣ ಅಡುಗೆ ಅನಿಲ ಬೆಳೆ ಇಳಿಸಿ, ಜನರನ್ನು ರಕ್ಷಿಸಿ.

ಪ್ರಜ್ವಲ್. ಎಸ್, ಮಹಾರಾಜ ಕಾಲೇಜು, ಮೈಸೂರು.


ಬಸ್ ಸೌಲಭ್ಯ ಒದಗಿಸಿ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ್ಣ ತಾಲ್ಲೂಕಿನ ಕಿತ್ತೂರು ಗ್ರಾಮಪಂಚಾಯಿತಿಗೆ ಸೇರುವ ಬೆಟ್ಟೇಗೌಡನಕೊಪ್ಪಲು, ಗುರುವ್ಯನಕೊಪ್ಪಲು, ಪೂಜಾರಯ್ಯನ ಕೊಪ್ಪಲು, ಮೂಡಲಕೊಪ್ಪಲು ಜನತೆ ಬಸ್ ವ್ಯವಸ್ಥೆ ಇಲ್ಲದ ಕಾರಣ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಗ್ರಾಮಗಳ ಜನರು ೩ ಕಿ. ಮೀ ದೂರದವರೆಗೂ ತಮ್ಮ ಕಾಲ್ನಡಿಗೆಯಲ್ಲಿ ಕಿತ್ತೂರಿಗೆ ಬಂದು ಅಲ್ಲಿಂದ ಬಸ್ ಹಿಡಿಯಬೇಕು. ಅದರಲ್ಲೂ ಶಾಲಾ – ಕಾಲೇಜು ವಿದ್ಯಾರ್ಥಿಗಳು, ತಮ್ಮ ವ್ಯಾಸಂಗಕ್ಕೆ ಮೈಸೂರಿಗೆ ಬರುವವರು, ಕೆಲಸಕ್ಕೆ ಹೋಗುವವರ ಪಾಡು ಅಷ್ಟಿಷ್ಟಲ್ಲ. ಬೆಳಿಗ್ಗೆ ಬೇಗನೆ ಬಂದು ಬಸ್ ನಿಲ್ದಾಣದಲ್ಲಿ ನಿಲ್ಲಬೇಕು. ಖಾಸಗಿ ವಾಹನ ಇರುವವರು ಬರುತ್ತಾರೆ, ಕಾಲ್ನಡಿಗೆಯಲ್ಲಿ ನಡೆದು ಬರುವವರಿಗೆ ಕಷ್ಟವಾಗುತ್ತದೆ. ಈ ಗ್ರಾಮಗಳಿಗೆ ಬಸ್ ಸಂಚಾರ ಸೌಲಭ್ಯ ಕಲ್ಪಿಸಿದರೆ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತರಿಗೆ, ವೃದ್ದರಿಗೆ, ಮಹಿಳೆಯರಿಗೆ ಸಹಾಯವಾಗುತ್ತದೆ.

 

-ಲಾವಣ್ಯ, ಕಿತ್ತೂರು, ಪಿರಿಯಾಪಟ್ಟಣ ತಾಲ್ಲೂಕು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ