Light
Dark

ಅಮಿತ್ ಶಾ-ಬಿಎಸ್‌ವೈ ಮಾತುಕತೆ ಊಹೆಗೆ ನಿಲುಕದ್ದಲ್ಲ…

ಕಳೆದ ವಾರ ಕರ್ನಾಟಕಕ್ಕೆ ಬಂದ ಕೇಂದ್ರ ಸಚಿವ ಅಮಿತ್ ಶಾ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ಜತೆ ರಹಸ್ಯ ಚರ್ಚೆ ನಡೆಸಿದರು. ಈ ಚರ್ಚೆಯ ಸಂದರ್ಭದಲ್ಲಿ ಅಮಿತ್ ಶಾ ಮತ್ತು ಯಡಿಯೂರಪ್ಪ ಅವರ ನಡುವೆ ನಡೆದ ಮಾತುಕತೆಯ ವಿವರ ಈವರೆಗೆ ಬಹಿರಂಗವಾಗಿಲ್ಲ.

ಆದರೆ ಅವರಿಬ್ಬರ ನಡುವೆ ಏನು ಮಾತುಕತೆ ನಡೆದಿರಬಹುದು ಎಂಬ ಕುರಿತು ರಾಜಕೀಯ ವಲಯಗಳಲ್ಲಿ ಕುತೂಹಲಕಾರಿ ವ್ಯಾಖ್ಯಾನಗಳಂತೂ ನಡೆಯುತ್ತಲೇ ಇವೆ. ಈ ವ್ಯಾಖ್ಯಾನಗಳು ಎಷ್ಟರ ಮಟ್ಟಿಗೆ ನಿಜ ಅಂತ ಬಹಿರಂಗಪಡಿಸುವ ಶಕ್ತಿ ಇದ್ದರೆ ಅದು, ಅಮಿತ್ ಶಾ ಹಾಗೂ ಯಡಿಯೂರಪ್ಪ ಅವರಿಬ್ಬರಿಗೆ ಮಾತ್ರ.

ಆದರೆ ಇವತ್ತಿನ ಸಂದರ್ಭದಲ್ಲಿ ತಮ್ಮ ನಡುವೆ ನಡೆದ ಮಾತುಕತೆಯ ಬಗ್ಗೆ ಅಮಿತ್ ಶಾ ಮಾತನಾಡುವುದಿಲ್ಲ. ಅದೇ ರೀತಿ ಈ ಮಾತುಕತೆಯ ಸುಳಿವನ್ನು ಬಿಟ್ಟು ಕೊಡುವ ಸ್ಥಿತಿಯಲ್ಲಿ ಯಡಿಯೂರಪ್ಪ ಕೂಡ ಇಲ್ಲ. ಆದರೆ ಇವತ್ತಿನ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಈ ಇಬ್ಬರು ನಾಯಕರ ನಡುವೆ ಏನು ಮಾತುಕತೆ ನಡೆದಿರಬಹುದು ಅಂತ ಊಹಿಸುವುದು ಸತ್ಯಕ್ಕೆ ತುಂಬ ದೂರ ಇರಲಾರದು.

ಅಂದ ಹಾಗೆ ಈ ಇಬ್ಬರ ನಡುವಣ ಮಾತುಕತೆಯ ಬಗ್ಗೆ ಊಹಿಸುವ ಮುನ್ನ ಒಂದು ವಿಷಯವನ್ನು ಗಮನಿಸಿ ಮುಂದುವರಿಯಬೇಕು. ಅದೆಂದರೆ ಅಮಿತ್ ಶಾ ಅವರು ಯಡಿಯೂರಪ್ಪ ಅವರ ಜತೆ ರಹಸ್ಯ ಚರ್ಚೆ ನಡೆಸಿದ್ದು.

ವಸ್ತುಸ್ಥಿತಿ ಎಂದರೆ ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದ ನಂತರ ಅಮಿತ್ ಶಾ ಅವರು ಯಾವತ್ತೂ ಯಡಿಯೂರಪ್ಪ ಅವರ ಜತೆ ಇಷ್ಟು ಆತ್ಮೀಯವಾಗಿ ಚರ್ಚಿಸಿರಲಿಲ್ಲ. ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ಕೆಳಗಿಳಿಯುವ ಮುನ್ನ ದೆಹಲಿಗೆ ಹೋದರಲ್ಲ- ಆ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರಿಬ್ಬರೇ ಆಪರೇಷನ್ ಯಡಿಯೂರಪ್ಪ ಎಪಿಸೋಡನ್ನು ಮುಗಿಸಲಿ ಅಂತ ಅಮಿತ್ ಶಾ ಬಯಸಿದ್ದರು.

ಇದೇ ಕಾರಣಕ್ಕಾಗಿ ದೆಹಲಿಯಲ್ಲಿದ್ದ ಯಡಿಯೂರಪ್ಪ ತಮ್ಮನ್ನು ಭೇಟಿ ಮಾಡಲು ಬಯಸಿದರೂ ಅಮಿತ್ ಶಾ ನಖರಾ ಮಾಡಿದ್ದರು. ಇವತ್ತು ಕಾರ್ಯಕ್ರಮವೊಂದರಲ್ಲಿ ನಾನು ಬಿಜಿ. ಹೀಗಾಗಿ ಭೇಟಿ ಮಾಡಲಾರೆ ಎಂದವರು ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದ್ದರು.

ಇಂತಹ ಸಂದೇಶ ಸ್ವೀಕರಿಸುವ ಯಡಿಯೂರಪ್ಪ ಕಂಗಾಲಾಗುತ್ತಾರೆ. ಹೇಗಾದರೂ ಮಾಡಿ ನಿಮ್ಮ ಭೇಟಿಗೆ ಅವಕಾಶ ಕೊಡಿ ಎಂದು ಗೋಗರೆಯುತ್ತಾರೆ ಎಂಬುದು ಅವರ ನಿರೀಕ್ಷೆಯಾಗಿತ್ತು. ನನ್ನನ್ನು ಅಧಿಕಾರದಲ್ಲಿ ಉಳಿಸಿ ಎಂಬ ಮನ:ಸ್ಥಿತಿಯಲ್ಲಿರುವವರು ಹೀಗೆ ಗೋಗರೆಯದೆ ಇನ್ನೇನು ಮಾಡಲು ಸಾಧ್ಯ ಎಂಬುದು ಅವರ ಯೋಚನೆಯಾಗಿತ್ತು.

ಆದರೆ ಅಮಿತ್ ಶಾ ಅವರ ಇಂತಹ ಲೆಕ್ಕಾಚಾರಕ್ಕೆ ತಿರುಗೇಟು ಕೊಟ್ಟ ಯಡಿಯೂರಪ್ಪ ತಕ್ಷಣವೇ ಬೆಂಗಳೂರಿನ ವಿಮಾನ ಹತ್ತಲು ದೆಹಲಿ ಏರ್‌ಪೋರ್ಟಿಗೆ ಬಂದರು. ಅರ್ಥಾತ್, ಅವರು ಅಮಿತ್ ಶಾ ಭೇಟಿಗೆ ಹಾತೊರೆಯಲೂ ಇಲ್ಲ. ದೆಹಲಿಯಲ್ಲಿ ಉಳಿದು ಅಮಿತ್ ಶಾ ಭೇಟಿ ಮಾಡಲು ತವಕಿಸಲೂ ಇಲ್ಲ.
ಪರಿಣಾಮ- ಯಡಿಯೂರಪ್ಪ ಅವರು ಸಿಟ್ಟಿಗೆದ್ದಿದ್ದಾರೆ ಎಂಬುದನ್ನರ್ಥ ಮಾಡಿಕೊಂಡ ಅಮಿತ್ ಶಾ ಕೆಲವೇ ಕ್ಷಣಗಳಲ್ಲಿ ಧ್ವನಿ ಬದಲಿಸಿದರು. ಯಡಿಯೂರಪ್ಪ ಅವರ ಜತೆ ಚರ್ಚಿಸಿದರು. ಆದರೆ ಇದು ಪೂರ್ತಿ ಔಪಚಾರಿಕ ಚರ್ಚೆ. ಇದಾದ ನಂತರ ಕಳೆದು ಹೋದ ಒಂದು ವರ್ಷದ ಅವಧಿಯಲ್ಲಿ ಅಮಿತ್ ಶಾ ಇಷ್ಟೊಂದು ಆತ್ಮೀಯವಾಗಿ ಯಡಿಯೂರಪ್ಪ ಅವರ ಜತೆ ಚರ್ಚಿಸಿರಲಿಲ್ಲ.

ಅಷ್ಟೇ ಅಲ್ಲ. ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಪ್ರಧಾನಿ ನರೇಂದ್ರ ಮೋದಿ, ತಾವು ಮತ್ತು ೋಂಗಿ ಆದಿತ್ಯನಾಥ್ ಕರ್ನಾಟಕಕ್ಕೆ ದಾಂಗುಡಿ ಇಡುವುದರಿಂದ ಬಿಜೆಪಿ ಸುಧಾರಿಸಿಕೊಳ್ಳುತ್ತದೆ. ಸ್ವಯಂ ಬಲದ ಮೇಲೆ ಅಧಿಕಾರಕ್ಕೆ ಬರುತ್ತದೆ. ಇದಕ್ಕೆ ಯಡಿಯೂರಪ್ಪ ಅವರ ಅಗತ್ಯ ತುಂಬ ಇರುವುದಿಲ್ಲ ಅಂತ ಅಮಿತ್ ಶಾ ಲೆಕ್ಕ ಹಾಕಿದ್ದರು.

ಆದರೆ ಆಗಸ್ಟ್ ಮೂರರಂದು ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಬರ್ತ್ ಡೇ ಎಪಿಸೋಡು ರಾಜ್ಯ ಬಿಜೆಪಿ ನಾಯಕರನ್ನು ಮಾತ್ರವಲ್ಲ. ಖುದ್ದು ಮೋದಿ-ಶಾ ಜೋಡಿಗೆ ಅಚ್ಚರಿಯುಂಟು ಮಾಡಿದೆ.

ಅಷ್ಟೇ ಅಲ್ಲ, ಈ ವರ್ಷದ ಅಂತ್ಯದಲ್ಲಿ ಅವರು ಕರ್ನಾಟಕಕ್ಕೆ ದಂಡೆತ್ತಿ ಬರಲು ನಿರ್ಧರಿಸಿದ್ದಾರಾದರೂ, ಹಾಗೆ ಬಂದ ಕೂಡಲೇ ಕರ್ನಾಟಕ ತಮ್ಮ ವಶವಾಗುತ್ತದೆ ಎಂಬ ಅವರ ನಂಬಿಕೆ ಇದ್ದಕ್ಕಿದ್ದಂತೆ ಕ್ಷೀಣವಾಗಿದೆ. ಈ ಹಿಂದೆ ಪಶ್ಚಿಮಬಂಗಾಳಕ್ಕೆ ಅವರು ದಂಡೆತ್ತಿ ಹೋಗಿ ಗಣನೀಯ ಯಶಸ್ಸು ಕಂಡಿದ್ದೇನೋ ನಿಜ. ಆದರೆ ಕರ್ನಾಟಕದ ಸ್ಥಿತಿ ಬೇರೆ. ಯಾಕೆಂದರೆ ಪಶ್ಚಿಮ ಬಂಗಾಳದಲ್ಲಿ ಹೋರಾಡಿದ್ದು ಆಡಳಿತಾರೂಢ ಟಿಎಂಸಿ ಸರ್ಕಾರದ ವಿರುದ್ಧ.
ಆದರೆ ಇಲ್ಲಿ ಯಾರ ವಿರುದ್ಧ ಹೋರಾಡಬೇಕು? ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿ ಸರ್ಕಾರ.

ಆ ಸರ್ಕಾರದ ಇಮೇಜು ದಿನಕಳೆದಂತೆ ಕುಸಿಯುತ್ತಿದೆೆುೀಂ ಹೊರತು ಮೇಲೇಳುತ್ತಿಲ್ಲ. ಭ್ರಷ್ಟಾಚಾರದ ಆರೋಪ ಅದರ ನೆತ್ತಿಯ ಮೇಲೆ ತಾಂಡವ ನೃತ್ಯ ಮಾಡುತ್ತಿದೆ. ಸರ್ಕಾರದ ಯಾವುದಾದರೂ ಒಂದು ಇಲಾಖೆಯ ವ್ಯಾಪ್ತಿಯಲ್ಲಿ ಲಂಚ ಕೊಡದೆ ಕೆಲಸ ಮಾಡಿಸಿಕೊಳ್ಳಬಹುದು ಎಂಬ ವಿಶ್ವಾಸ ಜನರಿಗಿರಲಿ, ಖುದ್ದು ಆಡಳಿತ ಪಕ್ಷದ ಮಂತ್ರಿ,ಶಾಸಕರಲ್ಲೂ ಕಾಣುತ್ತಿಲ್ಲ. ಇಂತಹ ಸರ್ಕಾರವನ್ನು ಹಿಂದಿಟ್ಟುಕೊಂಡು ಮೋದಿ-ಶಾ ಜೋಡಿ ಯಾರ ವಿರುದ್ಧ ಹೋರಾಡಬೇಕು?

ಉತ್ತರ ಭಾರತದ ರಾಜ್ಯಗಳಲ್ಲಿ ಹಿಂದೂ-ಮುಸ್ಲಿಂ ಸಂಘರ್ಷದ ಮೂಲಕ ಹಿಂದೂ ಮತದಾರರನ್ನು ಒಗ್ಗೂಡಿಸುವುದು ಸುಲಭ. ಆದರೆ ಕರ್ನಾಟಕದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷದ ಆಧಾರದ ಮೇಲೆ ಇದುವರೆಗೆ ಯಾರೂ ಅಧಿಕಾರ ಹಿಡಿದಿಲ್ಲ. ಬಿಜೆಪಿ ದಕ್ಷಿಣ ಭಾರತದಲ್ಲಿ ತಲೆ ಎತ್ತಿ ನಿಂತಿದ್ದರೆ ಅದು ಜಾತಿ ರಾಜಕಾರಣದ ಸೂತ್ರದಿಂದಲೇ ಹೊರತು ಇನ್ಯಾವ ಕಾರಣಗಳಿಂದಲೂ ಅಲ್ಲ. ಸಿದ್ದರಾಮಯ್ಯ ಅವರ ಜನ್ಮ ದಿನದ ಹೆಸರಿನಲ್ಲಿ ನಡೆದ ಸಮಾವೇಶ ಕೂಡ ಅಹಿಂದ ಪ್ಲಸ್ ಗಣನೀಯ ಪ್ರಮಾಣದ ಲಿಂಗಾಯತ ಮತಗಳನ್ನು ಕೇಂದ್ರೀಕರಿಸಿಕೊಂಡ ಸಮಾವೇಶ.

ಅ ಮೂಲಕ ಕಾಂಗ್ರೆಸ್ ರೂಪಿಸುತ್ತಿರುವ ಚಕ್ರವ್ಯೆಹವನ್ನು ಭೇದಿಸುವ ಶಕ್ತಿ ಬಿಜೆಪಿ ಪಾಳೆಯದಲ್ಲಿ ಯಾರಿಗಾದರೂ ಇದ್ದರೆ ಅದು ಯಡಿಯೂರಪ್ಪ ಅವರಿಗೆ ಮಾತ್ರ. ಹೀಗಾಗಿ ಎಲ್ಲವೂ ಮೋದಿ ನಾಮಬಲದ ಮೇಲೆ ನಡೆಯುತ್ತದೆ ಎಂಬುದು ಸುಂದರ ಭ್ರಮೆೆುೀಂ ಹೊರತು ವಾಸ್ತವವಲ್ಲ. ಇದು ಗೊತ್ತಿರುವುದರಿಂದಲೇ ಅಮಿತ್ ಶಾ ಈಗ ಯಡಿಯೂರಪ್ಪ ಅವರನ್ನು ಅಚ್ಛಾ ಅಚ್ಚಾ ಮಾಡಲು ಹೊರಟಿದ್ದಾರೆ. ಆದರೆ ರಾಜಕಾರಣದಲ್ಲಿ ಎಲ್ಲರೂ ವ್ಯಾಪಾರಿಗಳೇ. ಹೀಗಾಗಿ ಅಮಿತ್ ಶಾ ತಮ್ಮ ದಾಳ ಉರುಳಿಸಿದರೆ ಯಡಿಯೂರಪ್ಪ ತಮ್ಮ ದಾಳ ಉರುಳಿಸುತ್ತಾರೆ.

ನಿಮ್ಮನ್ನು ಪಕ್ಷ ನಿರ್ಲಕ್ಷಿಸುವುದಿಲ್ಲ. ನಿಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತದೆ. ಹೀಗಾಗಿ ನಿಮ್ಮ ಶಕ್ತಿ ನಮ್ಮ ಜತೆಗಿರಬೇಕು ಅಂತ ಅಮಿತ್ ಶಾ ಗಿಚ್ಚಿ ಗಿಲಿ ಗಿಲಿ ಷೋ ತೋರಿಸಿದರೆ, ಯಡಿಯೂರಪ್ಪ ಕರಗಿ ನೀರಾಗುವುದಿಲ್ಲ.

ಅವರಿಗೆ ತಮ್ಮ ಪುತ್ರ ವಿಜೆುೀಂಂದ್ರ ಮತ್ತು ರಾಘವೇಂದ್ರ ಅವರ ಭವಿಷ್ಯ ಮುಖ್ಯ. ಅದು ಉಜ್ವಲವಾಗುತ್ತದೆ ಎಂಬುದು ನಿಕ್ಕಿಯಾದರೆ ಮುಂದಿನ ಹೋರಾಟಕ್ಕೆ ದಂಡನಾಯಕನ ಪೋಷಾಕು ತೊಡುತ್ತಾರೆ.

ಸುಖಾಸುಮ್ಮನೆ ದಂಡನಾಯಕನ ಪೋಷಾಕು ತೊಟ್ಟು ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತಂದರೆ ಸಿಎಂ ಆಗಲು ಓಡೋಡಿ ಬರುವ ಮುಖಗಳು ಯಾವುವು ಅಂತ ಅವರಿಗೂ ಗೊತ್ತಲ್ಲ.

ಹೀಗಾಗಿ ಅಮಿತ್ ಶಾ ಬಂದು ಏನೇ ಕತೆ ಹೇಳಿದರೂ, ಆ ಕತೆ ತಮ್ಮ ಹಿತ ರಕ್ಷಿಸದೆ ಹೋದರೆ ಯಡಿಯೂರಪ್ಪ ಬಿಜೆಪಿ ಬಾವುಟವನ್ನು ಕೋಲು ಹಾಕಿ ಮೇಲೆತ್ತುವುದಿಲ್ಲ. ಅವರು ಬಾವುಟ ಎತ್ತದೆ ಹೋದರೆ ಮುಂದಿನ ಚುನಾವಣೆಯಲ್ಲಿ ಅದು ಪಟಪಟಿಸುವುದೂ ಇಲ್ಲ. ಪರವಾಗಿಲ್ಲ, ಸ್ವಯಂಬಲ ಇಲ್ಲದಿದ್ದರೂ ಜಾತ್ಯತೀತ ಜನತಾದಳದ ಜತೆ ಕೈಗೂಡಿಸಿ ಸರ್ಕಾರ ಮಾಡೋಣ ಅಂದುಕೊಂಡರೂ ಮಿನಿಮಮ್ ತೊಂಬತ್ತು ಸೀಟು ಗೆಲ್ಲಬೇಕು.
ಅದಾಗದೆ ಬಿಜೆಪಿಯ ಸಾಧನೆ ಅರವತ್ತರ ಗಡಿಗೆ ಡಿಚ್ಚಿ ಗಿಲಿ ಗಿಲಿಯಾದರೆ ೨೦೧೩ರ ಕತೆ ಪುನರಾವರ್ತನೆಯಾಗುತ್ತದೆ.

ಹಾಗಾಗಲಿ ಎಂಬುದೇ ಕಾಂಗ್ರೆಸ್ ಲೆಕ್ಕಾಚಾರ. ಈ ಲೆಕ್ಕಾಚಾರಕ್ಕೆ ಉಲ್ಟಾ ಹೊಡೆಯುವುದು ಮೋದಿ-ಶಾ ಲೆಕ್ಕಾಚಾರ.

ಅದಕ್ಕಾಗಿ ಈಗ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಆಟ ಶುರು ಮಾಡಿದ್ದಾರೆ. ಮೊನ್ನಿನ ಅಮಿತ್ ಶಾ-ಯಡಿಯೂರಪ್ಪ ಮಾತುಕತೆ ಇದರ ಭಾಗ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದೇ ಸದ್ಯದ ಕುತೂಹಲ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ