Light
Dark

ಎನ್‌ಡಿಟಿವಿ ವಶಕ್ಕೆ ಮುಂದಾದ ಅದಾನಿ ಸಮೂಹ!

ವಿಶ್ವಾಸಾರ್ಹತೆ ಉಳಿಸಿಕೊಂಡು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಬರುತ್ತಿರುವ ಎನ್‌ಡಿಟಿವಿ ಸುದ್ದಿಸಂಸ್ಥೆಯನ್ನು ಅದಾನಿ ಸಮೂಹ ತನ್ನ ವಶಕ್ಕೆ ಪಡೆಯಲಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಎನ್‌ಡಿಟಿವಿ ವಿಶ್ವಾಸಾರ್ಹತೆ ಉಳಿಸಿಕೊಂಡಿರುವ ಕಾರಣಕ್ಕಾಗಿ ಅಷ್ಟೇ ಅಲ್ಲ, ಮೋದಿ ಸರ್ಕಾರದ ತಪ್ಪುಗಳನ್ನು ದಿಟ್ಟತನದಿಂದ ಬಯಲಿಗೆಳೆಯುತ್ತಿರುವ ಕಾರಣಕ್ಕೆ ಈ ಬೆಳವಣಿಗೆ ಅಚ್ಚರಿ ಮತ್ತು ಆಘಾತ ತಂದಿದೆ. ಗೌತಮ್ ಅದಾನಿ ಪ್ರಧಾನಿ ನರೇಂದ್ರಮೋದಿ ಅವರ ಆಪ್ತ. ಅವರೀಗ ವಿಶ್ವದ ನಾಲ್ಕನೇ ಅತಿದೊಡ್ಡ ಶ್ರೀಮಂತ ವ್ಯಕ್ತಿ. ಕಳೆದ ಎಂಟು ವರ್ಷಗಳಲ್ಲಿ ಅವರ ಸಂಪತ್ತು ಕ್ಷಿಪ್ರವಾಗಿ ಏರಿದೆ. ಅದಾನಿ ಒಡೆತನಕ್ಕೆ ಎನ್‌ಡಿಟಿವಿ ಸೇರಿದರೆ ಆಡಳಿತಾರೂಢ ಪಕ್ಷದ ತಪ್ಪು ಒಪ್ಪುಗಳನ್ನು ಬಯಲಿಗೆ ತರುವವರು ಯಾರು ಎಂಬುದು ಮುಖ್ಯ ಪ್ರಶ್ನೆ. ಈ ಪ್ರಶ್ನೆಯೇ ದೇಶದಲ್ಲಿರುವ ಇತರ ಮಾಧ್ಯಮಗಳೆಲ್ಲವೂ ಹೇಗೆ ಸರ್ಕಾರಿ ತುತ್ತೂರಿಗಳಾಗಿವೆ ಎಂಬುದನ್ನು ಸಂಕೇತಿಸುತ್ತದೆ.

ಎನ್‌ಡಿಟಿವಿಯನ್ನು ಅದಾನಿ ಸಮೂಹ ವಶಕ್ಕೆ ಪಡೆಯುತ್ತದೆ ಎಂಬ ಸುದ್ದಿಗೆ ಮಹತ್ವ ಬರಲು ಇನ್ನೊಂದು ಸಂಗತಿ ಇದೆ. ಎನ್‌ಡಿಟಿವಿಯಲ್ಲಿ ಈಗಾಗಲೇ ಸುದ್ದಿ ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಿರುವ ಮುಖೇಶ್ ಅಂಬಾನಿ ಅವರು ಪರೋಕ್ಷ ಪಾಲುದಾರರಾಗಿದ್ದಾರೆ. ಮುಖೇಶ್ ಅಂಬಾನಿ ಇಂಡಿಪೆಂಡೆಂಟ್ ಮಿಡಿಯಾ ಟ್ರಸ್ಟ್ ಮೂಲಕ ಟಿವಿ ೧೮ ಮತ್ತು ನ್ಯೂಸ್ ೧೮ ಸಂಸ್ಥೆಯ ಅಡಿಯಲ್ಲಿ ಇಂಗ್ಲಿಷ್, ಹಿಂದಿಯಲ್ಲದೇ ಪ್ರಾದೇಶಿಕ ಭಾಷೆಗಳ ಸುದ್ದಿಹಾಗೂ ಮನರಂಜನಾ ವಾಹಿನಿಗಳ ಬೃಹತ್ ಜಾಲವನ್ನೇ ಹೊಂದಿದ್ದಾರೆ.

ಈ ಬೆಳವಣಿಗೆ ಎರಡು ಬೃಹತ್ ಕಾರ್ಪೊರೇಟ್‌ಗಳ ನಡುವಿನ ಪ್ರತಿಷ್ಠೆಯ ಯುದ್ಧವಾಗಿ ಮಾರ್ಪಡಲಿದೆ.

ಈಗ ಚಾಲ್ತಿಯಲ್ಲಿರುವ ಸುದ್ದಿಯಂತೆ ಅದಾನಿ ಸಮೂಹವು ಎನ್‌ಡಿಟಿವಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಅಷ್ಟು ಸಲೀಸಲ್ಲ. ಕಾನೂನು ತೊಡಕುಗಳಿವೆ. ಪ್ರಧಾನಿಗಳಿಗೆ ಆಪ್ತರಾಗಿರುವ ಗೌತಮ್ ಅದಾನಿ ಅವರಿಗೆ ಆಡಳಿತಾತ್ಮಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು ಕಷ್ಟವೇನೂ ಅಲ್ಲ. ಆದರೆ, ಕಾನೂನು ತೊಡಕುಗಳನ್ನು ಮೀರುವುದು ಕಷ್ಟ.

ಪ್ರಸ್ತುತ ಹಿಂಬಾಗಿಲಿನ ಮೂಲಕ ಎನ್‌ಡಿಟಿವಿ ಸಂಸ್ಧೆಯ ಶೇ.೩೦ರಷ್ಟು ಷೇರುಗಳನ್ನು ಅದಾನಿ ಖರೀದಿಸಲಿದ್ದಾರೆ. ಸಂಪೂರ್ಣ ಮಾಲೀಕತ್ವ ಬೇಕಾದರೆ ಶೇ.೫೧ಕ್ಕಿಂತ ಹೆಚ್ಚು ಪಾಲಿರಬೇಕು. ಹೀಗಾಗಿ ಇನ್ನೂ ಶೇ.೨೬ರಷ್ಟು ಷೇರುಗಳನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿ ಮಾಡಲಿದ್ದಾರೆ.

ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ದಂಪತಿಗಳು ತಮ್ಮ ಷೇರುಗಳನ್ನು ಆಧಾರವಾಗಿಟ್ಟು ಸಾಲ ಪಡೆದಿದ್ದ ಸಂಸ್ಥೆಯಿಂದ ಅದಾನಿ ಸಮೂಹ ಶೇ.೩೦ರಷ್ಟು ಷೇರುಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ವಾಸ್ತವವಾಗಿ ರಾಯ್ ದಂಪತಿಗಳು ಎನ್‌ಡಿಟಿವಿಯಲ್ಲಿ ಶೇ.೬೧.೪೫ರಷ್ಟು ಷೇರುಗಳನ್ನು ಹೊಂದಿದ್ದಾರೆ. ಆ ಲೆಕ್ಕದಲ್ಲಿ ಸಂಸ್ಥೆಯನ್ನು ವಶಕ್ಕೆ ಪಡೆಯುವುದು ಸಲೀಸಲ್ಲ. ಆದರೆ, ರಾಯ್ ದಂಪತಿಗಳಿಗೆ ಸಾಲ ನೀಡಿದ್ದ ಕಂಪೆನಿಯನ್ನೇ ಹಿಂಬಾಗಿಲ ಮೂಲಕ ಗೌತಮ್ ಅದಾನಿ ಖರೀದಿಸಿದ್ದಾರೆ. ಅಡಇಟ್ಟಿರುವ ಡಿಬೆಂಚರು ಗಳನ್ನು ತಮ್ಮ ವಶಕ್ಕೆ ಪಡೆಯುವುದಾಗಿಯೂ, ಆ ಮೂಲಕ ಎನ್‌ಡಿಟಿವಿಯಲ್ಲಿ ಶೇ.೩೦ರಷ್ಟು ಪಾಲು ಹೊಂದುತ್ತಿರುವುದಾಗಿಯೂ ಅದಾನಿ ಸಮೂಹ ತಿಳಿಸಿದೆ. ಇದೆಲ್ಲವೂ ರಾಯ್ ದಂಪತಿಗಳೊಂದಿಗೆ ಸಮಾಲೋಚನೆ ನಡೆಸದೇ ಏಕಪಕ್ಷೀಯವಾಗಿ ಕಾರ್ಯಚರಣೆ ನಡೆಸಲಾಗಿದೆ.

ಎನ್‌ಡಿಟಿವಿಯ ಒಡೆತನ ಹೊಂದಿರುವ ಆರ್‌ಆರ್‌ಪಿರ್ ಹೋಲ್ಡಿಂಗ್ ಕಂಪೆನಿಯು, ಸೆಬಿಗೆ ಈ ಸಂಬಂಧ ಮಾಹಿತಿ ನೀಡಿ, ಸಂಸ್ಥೆಯಲ್ಲಿನ ತಮ್ಮ ಪಾಲನ್ನು ಮಾರಾಟ ಮಾಡುವುದಿಲ್ಲ, ಈ ಸಂಬಂಧ ಎದ್ದಿರುವ ಸುದ್ದಿಗಳು ಆಧಾರರಹಿತವಾದುವು ಎಂದು ತಿಳಿಸಿದೆ.

ಆರ್‌ಆರ್‌ಪಿರ್ ಹೋಲ್ಡಿಂಗ್ ಪ್ರೈವೆಟ್ ಲಿಮಿಟೆಡ್ ಎನ್‌ಡಿಟಿವಿಯಲ್ಲಿ ಶೇ.೬೧.೪೫ರಷ್ಟು ಪಾಲು ಹೊಂದಿರುವುದರಿಂದ ರಾಯ್ ದಂಪತಿಗಳು ತಮ್ಮ ಪಾಲು ಮಾರಾಟ ಮಾಡದ ಹೊರತು ಅದಾನಿ ಸಮೂಹ ಎನ್‌ಡಿಟಿವಿಯನ್ನು ಸ್ವಾಧೀನಕ್ಕೆ ಪಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಕಂಪೆನಿ ಕಾನೂನು ತಜ್ಞರು.

ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ ( ವಿಸಿಪಿಎಲ್) ಎಂಬ ಶೆಲ್ ಕಂಪೆನಿ ಇದೆ. ಇದು ಎನ್ ಡಿಟಿವಿಯ ಪ್ರವರ್ತಕ ಸಂಸ್ಥೆಯಾದ ಆರ್‌ಆರ್‌ಪಿರ್‌ನ ಕೆಲವು ಡಿಬೆಂಚರ್‌ಗಳನ್ನು ಹೊರತುಪಡಿಸಿ ತನ್ನ ೧೪ ವರ್ಷಗಳ ಅಸ್ತಿತ್ವದಲ್ಲಿ ಯಾವುದೇ ಆಸ್ತಿಯನ್ನು ಹೊಂದಿಲ್ಲ. ೨೦೦೯ ರಲ್ಲಿ ರಾಧಿಕಾ ಮತ್ತು ಪ್ರಣಯ್ ರಾಯ್ ವಿಸಿಪಿಎಲ್‌ನಿಂದ ಆರ್‌ಆರ್‌ಪಿರ್ ಪರವಾಗಿ ೪೦೩.೮೫ ಕೋಟಿ ರೂ. ಕಾರ್ಪೊರೇಟ್ ಸಾಲವನ್ನು ತೆಗೆದುಕೊಂಡಿದ್ದರು. ಬಯಸಿದಲ್ಲಿ ಆರ್‌ಆರ್‌ಪಿರ್‌ನ ಡಿಬೆಂಚರುಗಳನ್ನು ಷೇರುಗಳಿಗೆ ಪರಿವರ್ತಿಸುವ ಹಕ್ಕುಗಳನ್ನು ನೀಡಿದ್ದರು.

ಎನ್‌ಡಿಟಿವಿ ಗ್ರೂಪ್‌ನ ಅಧ್ಯಕ್ಷೆ ಸುಪರ್ಣಾ ಸಿಂಗ್ ಅವರು ಸಿಬ್ಬಂದಿಗೆ ನೀಡಿರುವ ಮಾಹಿತಿ ಪ್ರಕಾರ, ‘ವಿಸಿಪಿಎಲ್ ಸಂಸ್ಥೆಯುಆರ್‌ಆರ್‌ಪಿರ್ ಅನ್ನು ಸ್ವಾಧೀನಪಡಿಸಿಕೊಂಡಿದೆ, ಇದು ಎನ್‌ಡಿಟಿವಿಯ ಶೇ. ೨೯ರಷ್ಟು ಪಾಲು ಹೊಂದಿದೆ. ಈ ಸ್ವಾಧೀನವನ್ನು ಒಪ್ಪಿಗೆಯಿಲ್ಲದೆ ಅಥವಾ ಯಾವುದೇ ರೀತಿಯ ಸೂಚನೆ ಇಲ್ಲದೆ ಮಾಡಲಾಗಿದೆ. ಇದು ೨೦೦೯-೧೦ರ ಸಾಲ ಒಪ್ಪಂದದ ಮೇಲೆ ನಡೆದಿರುವ ವಹಿವಾಟಾಗಿದೆ. ರಾಧಿಕಾ ಮತ್ತು ಪ್ರಣಯ್ ಎನ್‌ಡಿ ಟಿವಿಯ ಶೇ.೩೨ರಷ್ಟು ಪಾಲನ್ನು ಮುಂದುವರಿಸಿದ್ದಾರೆ. ಮುಂದಿನ ಹಂತಗಳನ್ನು ಮೌಲ್ಯಮಾಪನ ಮಾಡುವ ಪ್ರಕ್ರಿಯೆಜಾರಿಯಲ್ಲಿದೆ’.

ವಿಸಿಪಿಎಲ್ ಸಂಸ್ಥೆಯು ಆರ್‌ಆರ್‌ಪಿರ್‌ಗೆ ನೀಡಿದ ಸಾಲವನ್ನು ರಿಲಯನ್ಸ್ ಅಂಗಸಂಸ್ಥೆ ಶಿನಾನೋ ರಿಟೇಲ್ ಮೂಲಕ ಪಡೆದಿದೆ. ಮಹೇಂದ್ರ ನಹತಾ ಒಡೆತನದ ಎಮಿನೆಂಟ್ ನೆಟ್‌ವರ್ಕ್ ಮೂಲಕ ವಿಸಿಪಿಎಲ್ ೫೦ ಕೋಟಿ ರೂಪಾಯಿ ಸಾಲ ಮಾಡಿದೆ. ಮಹೇಂದ್ರ ನಹತಾ ಅವರು ರಿಲಯನ್ಸ್ ಸಮೂಹದ ಆಪ್ತರಷ್ಟೇ ಅಲ್ಲ, ರಿಲಯನ್ಸ್ ಜಿಯೋ ಇನ್ಫೋಕಾಮ್ ಆಡಳಿತ ಮಂಡಳಿ ನಿರ್ದೇಶಕರು. ಹೀಗಾಗಿ ಆರ್‌ಆರ್‌ಪಿರ್ ಮೇಲೆ ರಿಲಯನ್ಸ್ ಪ್ರಭಾವ ಇದ್ದೆ ಇದೆ. ವಿಸಿಪಿಎಲ್ ಎಮಿನೆಂಟ್ ಸಂಸ್ಥೆಗೆ ೪೦೩ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ.

ನ್ಯೂಸ್ ಲಾಂಡ್ರಿ ವರದಿ ಪ್ರಕಾರ, ಆರ್‌ಆರ್‌ಪಿರ್ ಹೋಲ್ಡಿಂಗ್ ಸಂಸ್ಥೆಯು ಎನ್ ಡಿಟಿವಿಯ ಶೇ.೨೯.೧೮ರಷ್ಟು ಷೇರುಗಳನ್ನು ಹೊಂದಿದೆ. ಇದು ಏಕೈಕ ಅತಿದೊಡ್ಡ ಷೇರುದಾರ ಕಂಪೆನಿ. ಇದಲ್ಲದೇ, ವೈಯಕ್ತಿಕವಾಗಿ ರಾಧಿಕಾ ರಾಯ್ ಶೇ.೧೬.೩೨ ಮತ್ತು ಪ್ರಣಯ್ ರಾಯ್ ಶೇ.೧೫.೯೪ರಷ್ಟು ಷೇರುಗಳನ್ನು ಹೊಂದಿದ್ದು ಒಟ್ಟು ೬೧.೪೫ ಷೇರುಗಳನ್ನು ಹೊಂದಿದಂತಾಗಿದೆ. ಹೀಗಾಗಿ ಅದಾನಿ ಸಮೂಹ ಎನ್‌ಡಿಟಿವಿ ಸ್ವಾಧೀನ ಪಡೆಯುವುದು ಸಲೀಸಲ್ಲ ಎನ್ನಲಾಗುತ್ತಿದೆ. ಆದರೆ, ಸಾಲಕ್ಕಾಗಿ ಅಡವಿಟ್ಟಿದ್ದ ಡಿಬೆಂಚರುಗಳನ್ನು ವಿಸಿಪಿಎಲ್ ಷೇರುಗಳಾಗಿ ಪರಿವರ್ತಿಸಿದ್ದು ಕಾನೂನುಬದ್ಧವಾದರೆ ಹೆಚ್ಚಿನ ಅಡೆತಡೆ ಇರಲಾರದು. ಏನೇ ಇರಲಿ, ಆಡಳಿತ ಪಕ್ಷಕ್ಕೆ ಆಪ್ತರಾಗಿರುವ ಅದಾನಿ ಅವರಿಗೆ ಎಲ್ಲಾ ರೀತಿಯ ಬೆಂಬಲ ಇರುವುದರಿಂದ ಮುಂದಿನ ಬೆಳವಣಿಗೆಗಳು ಕುತೂಹಲಕಾರಿಯಾಗಿವೆ.

(ವಿವಿಧ ಮೂಲಗಳಿಂದ)

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ