‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಕರ್ನಾಟಕದಿಂದ ಇಲ್ಲಿನ ವಾಣಿಜ್ಯ ಮಂಡಳಿಯಾಗಲಿ, ನಿರ್ಮಾಪಕರ ಸಂಘವಾಗಲಿ ಯಾವುದೇ ಹೆಸರನ್ನು ಶಿಫಾರಸು ಮಾಡಿಲ್ಲ !
ಕನ್ನಡ ಚಿತ್ರರಂಗದ ಹಿರಿಯ ಸಾಧಕರನ್ನು ಗುರುತಿಸುವ, ಅವರಿಗೆ ಸೂಕ್ತ ಗೌರವ ಸಲ್ಲಲು ಶಿಫಾರಸು ಮಾಡುವ ಕೆಲಸವನ್ನೂ ಸಂಬಂಧ ಪಟ್ಟವರು ಮರೆತಿದ್ದಾರೆಯೇ? ಪ್ರಸ್ತುತ ದಿನಮಾನಗಳ ಬೆಳವಣಿಗೆ ಹೌದು ಎನ್ನುತ್ತಿದೆ.
೨೦೨೦ರ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರಕಟಣೆ ಆಗಿದೆ. ಇದೇ ತಿಂಗಳಲ್ಲಿ ಅದರ ಪ್ರದಾನ ಆಗಲಿದೆ. ಅದಕ್ಕೂ ಮೊದಲು ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡಿದ ಸಾಧಕರೊಬ್ಬರನ್ನು ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಆಯ್ಕೆ ಮಾಡಬೇಕು. ಬಹುಶಃ ಈಗಾಗಲೇ ಆ ಆಯ್ಕೆ ನಡೆದಿದ್ದು, ಇಂದೋ ನಾಳೆಯೋ ಅದರ ಪ್ರಕಟಣೆ ಆಗಬಹುದು.
೧೯೬೯ರಲ್ಲಿ, ೧೭ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯೊಂದಿಗೆ ಫಾಲ್ಕೆ ಪ್ರಶಸ್ತಿ ಸೇರಿತು. ಮೊದಲ ಪ್ರಶಸ್ತಿ ದೇವಿಕಾರಾಣಿ ಅವರಿಗೆ ಸಂದಿತು. ಕನ್ನಡ ಚಿತ್ರರಂಗಕ್ಕೆ ಆ ಪ್ರಶಸ್ತಿ ಡಾ. ರಾಜಕುಮಾರ್ ಅವರಿಗೆ ಸಲ್ಲುವುದರ ಮೂಲಕ ೧೯೯೫ರ ಸಾಲಿನಲ್ಲಿ ಬಂತು. ಈ ಪ್ರಶಸ್ತಿ ಪಡೆದ ಇನ್ನಿಬ್ಬರು ಕನ್ನಡಿಗರು ವಿ.ಶಾಂತಾರಾಮ ಮತ್ತು ಛಾಯಾಗ್ರಾಹಕ ವಿ.ಕೆ.ಮೂರ್ತಿ.
ಫಾಲ್ಕೆ ಪ್ರಶಸ್ತಿಯ ಆಯ್ಕೆಗಾಗಿ ತಮಿಳುನಾಡು, ಕೇರಳ, ಆಂಧ್ರ ಪ್ರದೇಶಗಳಿಂದ ಪ್ರತಿ ವರ್ಷ ಅಲ್ಲಿನ ಚಲನಚಿತ್ರ ಸಂಸ್ಥೆಗಳು ಕಡಿಮೆ ಎಂದರೂ ನಾಲ್ಕು ನಾಲ್ಕು ಹೆಸರುಗಳನ್ನು ಶಿಫಾರಸ್ಸು ಮಾಡುತ್ತವೆ. ಹಿಂದಿ ಚಿತ್ರರಂಗದಿಂದ ಇದರ ದುಪ್ಪಟ್ಟು ಹೆಸರುಗಳು ಶಿಫಾರಸ್ಸುಗೊಳ್ಳುತ್ತವೆ. ಚೋದ್ಯವೆಂದರೆ, ಕರ್ನಾಟಕದಿಂದ ಇಲ್ಲಿನ ವಾಣಿಜ್ಯ ಮಂಡಳಿಯಾಗಲಿ, ನಿರ್ಮಾಪಕರ ಸಂಘವಾಗಲಿ, ಅಕಾಡೆಮಿಯಾಗಲಿ ಯಾವುದೇ ಹೆಸರನ್ನು ಶಿಫಾರಸು ಮಾಡಿಲ್ಲ ಎನ್ನುತ್ತಿವೆ ಮೂಲಗಳು. ಎರಡು ವರ್ಷಗಳ ಹಿಂದೆ ತಾರೆ ಜಯಂತಿಯವರ ಹೆಸರನ್ನು ಆಯ್ಕೆ ಸಮಿತಿಯಲ್ಲಿದ್ದ ಕನ್ನಡಿಗ ಸದಸ್ಯರು ಸೂಚಿಸಿದ್ದರಂತೆ.
ಕಳೆದ ಹತ್ತು ವರ್ಷಗಳಲ್ಲಿ ಫಾಲ್ಕೆ ಪ್ರಶಸ್ತಿ ಪಡೆದವರ ಸಾಲಿನಲ್ಲಿ ನಟರಾದ ಸೌಮಿತ್ರ ಚಟರ್ಜಿ, ಪ್ರಾಣ್, ಶಶಿ ಕಪೂರ್, ಮನೋಜ್‌ಕುಮಾರ್, ವಿನೋದ್‌ಖನ್ನ, ಅಮಿತಾಭ್ ಬಚ್ಚನ್ ಮತ್ತು ರಜನಿಕಾಂತ್ ಇದ್ದಾರೆ. ದಕ್ಷಿಣ ಭಾರತದಿಂದ ಕಲಾವಿದರನ್ನು, ತಂತ್ರಜ್ಞರನ್ನು ಪರಿಗಣಿಸಿದ್ದು ಕಡಿಮೆ.
ಈ ತಾರತಮ್ಯದ ಕುರಿತಂತೆ, ೨೦೧೩ರಲ್ಲಿ ತಮಗೆ ಸಂದ ‘ಪದ್ಮಭೂಷಣ’ ಗೌರವವನ್ನು ಪ್ರತಿಭಟನಾರ್ಥವಾಗಿ ನಿರಾಕರಿಸಿದ ಗಾಯಕಿ ಎಸ್.ಜಾನಕಿ ಹೇಳಿದ್ದರೆನ್ನಲಾದ ಮಾತು ವರದಿಯಾಗಿತ್ತು: ‘
ಪದ್ಮ ಪ್ರಶಸ್ತಿ ನಾಮಕರಣದಲ್ಲಿ ದಕ್ಷಿಣ ಭಾರತೀಯರನ್ನು ಯಾವಾಗಲೂ ಕಡೆಗಣಿಸಲಾಗುತ್ತದೆ. ಉತ್ತರದವರನ್ನೇ ಹೆಚ್ಚು ಮೆರೆಸಲಾಗುತ್ತದೆ. ಈ ಕುರಿತು ಸರಕಾರ ಸ್ಪಷ್ಟನೆ ನೀಡಬೇಕು ಎಂದ ಅವರು, ‘ಪದ್ಮ ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ. ಕಳೆದ ಆರು ದಶಕಗಳಿಂದಲೂ ನಾನು ಹಾಡುತ್ತಿದ್ದೇನೆ. ವಿವಿಧ ಭಾಷೆಗಳಲ್ಲಿ ಥರೇಹವಾರಿ ಹಾಡುಗಳಿಗೆ
ಧ್ವನಿಯಾಗಿದ್ದೇನೆ. ಕೋಟ್ಯಂತರ ಅಭಿಮಾನಿಗಳು ಹಾಡು ಕೇಳಿ ನನಗೆ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ. ಅಭಿಮಾನಿಗಳ ಈ ಪ್ರೀತಿ ಮುಂದೆ ಇನ್ನೇನೂ ದೊಡ್ಡದಲ್ಲ. ಅವರ ಸಂಪ್ರೀತ ಮನಸ್ಸೇ ನನಗೆ ಶ್ರೀರಕ್ಷೆ. ಈ ಪ್ರಶಸ್ತಿ ಏನೇನೂ ಅಲ್ಲ,’ ಎಂದಿದ್ದರು. ಈ ಮಾತು ಪದ್ಮ ಪ್ರಶಸ್ತಿಗೆ ಮಾತ್ರವಲ್ಲ, ಫಾಲ್ಕೆ ಸೇರಿದಂತೆ ಇತರ ರಾಷ್ಟ್ರೀಯ ಗೌರವಕ್ಕೂ ಸಲ್ಲುವ ಮಾತು. ಹ್ಞಾಂ, ಜಾನಕಿಯವರು ಈಗ ಹಾಡುವುದನ್ನು ನಿಲ್ಲಿಸಿದ್ದಾರೆ. ಮೈಸೂರಿನಲ್ಲಿ ನೆಲೆಸಿದ್ದಾರೆ.
ಫಾಲ್ಕೆ ಪ್ರಶಸ್ತಿಗೆ ಅರ್ಹರಾಗಿರುವ ಚಿತ್ರರಂಗದ ಸಾಧಕರು ಸಾಕಷ್ಟು ಮಂದಿ ದಕ್ಷಿಣದಲ್ಲಿ ಇದ್ದಾರೆ, ಕರ್ನಾಟಕದಲ್ಲೂ. ಈ ಬಾರಿ ಶಿಫಾರಸು ಮಾಡುವ ಸಮಯ ಮೀರಿದೆ. ಮುಂದಿನ ದಿನಗಳಲ್ಲಾದರೂ ಈ ಕುರಿತು ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ.
ಇನ್ನು ಪದ್ಮ ಪ್ರಶಸ್ತಿಯ ಕುರಿತಂತೆ. ಕಳೆದ ಕೆಲವು ವರ್ಷಗಳಿಂದ ಈ ಪ್ರಶಸ್ತಿಗೆ ಶಿಫಾರಸು ಮಾಡಲು ಕೇಂದ್ರ ಗೃಹ ಸಚಿವಾಲಯವು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಸಚಿವಾಲಯ, ಇಲಾಖೆಗಳು, ಭಾರತರತ್ನ ಮತ್ತು ಪದ್ಮವಿಭೂಷಣ ಪುರಸ್ಕೃತರು, ಪ್ರತಿಷ್ಠಿತ ಸಂಸ್ಥೆಗಳು ಮುಂತಾದವನ್ನು ಕೋರುತ್ತದೆ.
ರಾಜ್ಯ ಸರ್ಕಾರಗಳು ಮಾತ್ರವಲ್ಲದೆ, ಸಚಿವರು, ಸಂಸದರು, ವಿಧಾನಸಭೆಯ ಸದಸ್ಯರು ಮುಂತಾಗಿ ಎಲ್ಲರಿಗೂ ಪತ್ರವನ್ನು ಏಪ್ರಿಲ್ ತಿಂಗಳಲ್ಲಿ ಬರೆದು ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಅಸಾಮಾನ್ಯ ಸಾಧಕರ ಹೆಸರನ್ನು ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಲು ಕೋರುತ್ತದೆ. ಜನಸಾಮಾನ್ಯರೂ ಹೆಸರನ್ನು ಸೂಚಿಸಬಹುದು. ಪ್ರತಿ ವರ್ಷ, ಸೆಪ್ಟೆಂಬರ್ ತಿಂಗಳ ೧೫ನೇ ತಾರೀಕು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನ.
ಕಳೆದ ವರ್ಷ ಅನಂತನಾಗ್ ಅವರ ಹೆಸರನ್ನು ಚಲನಚಿತ್ರ ಅಕಾಡೆಮಿ ಸೇರಿದಂತೆ, ಸಾಕಷ್ಟು ಮಂದಿ ಶಿಫಾರಸು ಮಾಡಿದ್ದು ಸುದ್ದಿಯಾಗಿತ್ತು. ಪುನೀತ್‌ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಈ ಪುರಸ್ಕಾರ ನೀಡಬೇಕು ಎನ್ನುವ ಒತ್ತಾಯವಿದೆ. ಆದರೆ ಸಂಬಂಧ ಪಟ್ಟ ಇಲಾಖೆ, ಕನ್ನಡ ಚಿತ್ರರಂಗದ ಪ್ರಾತಿನಿಧಿಕ ಸಂಸ್ಥೆ ಎಂದುಕೊಳ್ಳುವ ಚಲನಚಿತ್ರ ವಾಣಿಜ್ಯ ಮಂಡಳಿ ಈ ತನಕ ಎಷ್ಟು ಹೆಸರುಗಳನ್ನು ಶಿಫಾರಸು ಮಾಡಿದೆ ಎನ್ನುವುದನ್ನು ಅದೇ ಹೇಳಬೇಕು.
ಕೇಂದ್ರದ ಪದ್ಮ, ಫಾಲ್ಕೆ ಪುರಸ್ಕಾರಗಳ ವಿಷಯ ಇರಲಿ. ಬೆಂಗಳೂರು ಮೆಟ್ರೋ ಕುರಿತಂತೆ ಮೊದಲು ಯೋಚನೆ ಮಾಡಿದ್ದು, ಯೋಜನಾ ವರದಿ ಸಿದ್ಧಪಡಿಸಿದ್ದು ನಟ, ನಿರ್ದೇಶಕ, ನಿರ್ಮಾಪಕ, ಸ್ಟುಡಿಯೊ ಮಾಲೀಕರಾಗಿದ್ದ ಶಂಕರನಾಗ್. ಎಂಬತ್ತರ ದಶಕದಲ್ಲೇ ಜರ್ಮನಿಯಿಂದ ತಜ್ಞರನ್ನು ಕರೆಸಿ, ಮೆಟ್ರೋ ಯೋಜನಾ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಅದು ಕಾರ್ಯಗತವಾಗದೆ, ಹಾಗೆಯೇ ಉಳಿಯಿತು.
ಈಗ ಬೆಂಗಳೂರಿನಲ್ಲಿ ‘ನಮ್ಮ ಮೆಟ್ರೋ’ ಆರಂಭವಾಗಿ ಹತ್ತು ವರ್ಷಗಳಾಗಿವೆ, ಬೇರೆ ಬೇರೆ ಸಾಧಕರ, ಮಹಾನುಭಾವರ ಹೆಸರನ್ನು ನಿಲ್ದಾಣಗಳಿಗೆ ಇಡಲಾಗಿದೆ. ಶಂಕರನಾಗ್ ಅವರ ಹೆಸರನ್ನು ಯಾವುದಾದರೂ ನಿಲ್ದಾಣಕ್ಕೆ ಇಡಬಹುದಿತ್ತು. ಮುಂದೆ ಕೂಡಾ ಇಡಬಹುದೆನ್ನಿ.
ಕನ್ನಡ ಚಿತ್ರರಂಗವನ್ನು ಆರಂಭದಲ್ಲಿ ಕಟ್ಟಿ ಬೆಳೆಸಿ, ಭದ್ರ ಅಡಿಪಾಯ ಹಾಕಿದ, ಸಾಂಸ್ಕೃತಿಕ ಲೋಕದ ಅಧ್ವರ್ಯುಗಳ ಹೆಸರುಗಳನ್ನು ಚಿತ್ರರಂಗ ಮತ್ತು ಸರ್ಕಾರ ಮರೆತಂತಿದೆ. ಕನ್ನಡದ ಮೊದಲ ವಾಕ್‌ಚಿತ್ರ ‘ಸತಿಸುಲೋಚನಾ’ ಚಿತ್ರದ ಮುಖ್ಯ ಪಾತ್ರಧಾರಿ ಸುಬ್ಬಯ್ಯನಾಯ್ಡು, ಸಂಗೀತ ಸಂಯೋಜಕ, ನಟ ಆರ್.ನಾಗೇಂದ್ರರಾವ್, ಗುಬ್ಬಿವೀರಣ್ಣ, ಲಕ್ಷ್ಮೀಬಾಯಿ, ಬಿ.ಆರ್. ಪಂತುಲು, ಎಂ.ವಿ.ರಾಜಮ್ಮ, ಹುಣಸೂರು ಕೃಷ್ಣಮೂರ್ತಿ ಸೇರಿದಂತೆ ಹಲವರು ಈ ಸಾಲಿನಲ್ಲಿದ್ದಾರೆ. ಅವರ ಹೆಸರನ್ನು ರಾಜಧಾನಿಯ ಇಲ್ಲವೇ ಸಾಂಸ್ಕೃತಿಕ ರಾಜಧಾನಿಯ ಪ್ರಮುಖ ರಸ್ತೆಗಳಿಗೋ, ವೃತ್ತಗಳಿಗೋ, ಬಡಾವಣೆಗಳಿಗೋ ಇಡುವುದರ ಮೂಲಕ ಅವರ ಸಾಧನೆಯನ್ನು ಕೊಡುಗೆಯನ್ನು ಗೌರವಿಸುವ ಕೆಲಸ ಆಗಬೇಕು. ಜಾತಿ, ಮತ, ಪಂಗಡ, ಪಕ್ಷಗಳ ಬೇಧವಿಲ್ಲದೆ, ಇದು ಸಾಧ್ಯವಾಗಬೇಕು.