Light
Dark

ಡಾಲರಿಗೆ 80 ರೂಪಾಯಿ, ಏನಿದರ ಅರ್ಥ?

ಪ್ರೊ.ಆರ್.ಎಂ.ಚಿಂತಾಮಣಿ

ರಫ್ತಿಗಿಂತಲೂ ಆಮದು ಪ್ರಮಾಣ ಹೆಚ್ಚಿದ್ದು, ನಮ್ಮ ವ್ಯಾಪಾರ ಕೊರತೆ ಭಾರೀ ಪ್ರಮಾಣದಲ್ಲಿ ಹಿಗ್ಗಿರುವುದು ಆತಂಕದ ಸಂಗತಿ

ಜಾಗತಿಕ ಮಟ್ಟದಲ್ಲಿ ವಿಪರೀತ ಏರಿದ ಹಣದುಬ್ಬರದ ಹಾವಳಿ ಆರ್ಥಿಕ ಹಿಂಜರಿತದ ಭಯ, ಕಚ್ಚಾ ತೈಲ ಬೆಲೆ ಏರಿಳಿತಗಳಿಂದ ಉಂಟಾದ ಅನಿಶ್ಚಿತತೆ, ಸರಕು ಪೂರೈಕೆ ಸರಪಳಿಯಲ್ಲಾದ ತೊಂದರೆಗಳು ಮತ್ತು ನಿಲ್ಲದ ರಶಿಯ-ಉಕ್ರೇನ್ ಯುದ್ಧದ ಭೌಗೋಳಿಕ ರಾಜಕೀಯ ಆತಂಕ ಮುಂತಾದವುಗಳಿಂದ ಈ ಏಳೆಂಟು ತಿಂಗಳಲ್ಲಿ ಡಾಲರ್ ಹೊರತಾಗಿ ಉಳಿದೆಲ್ಲ ದೇಶಗಳ ಕರೆನ್ಸಿಗಳು ಹೆಚ್ಚು ಮೌಲ್ಯ ಕಳೆದುಕೊಂಡಿವೆ. ಅದರ ಬಿಸಿ ಭಾರತದ ರೂಪಾಯಿಗೂ ತಟ್ಟಿದೆ. ರೂಪಾಯಿ ಶೇ.೭.೦ರಷ್ಟು ಕಳೆದುಕೊಂಡಿದ್ದರೆ, ಇತರ ನಾಣ್ಯಗಳ ನಷ್ಟ ಇನ್ನೂ ಹೆಚ್ಚು. ಆಮೆರಿಕೆಯಲ್ಲೂ ಹಣದುಬ್ಬರ ಕಾಟ ಹೆಚ್ಚಿದ್ದರೂ ಅಲ್ಲಿಯ ಫೆಡರಲ್ ರಿಜರ್ವ್ ಕ್ರಮಗಳಿಂದಾಗಿ ಡಾಲರ್ ಸೂಚ್ಯಂಕ ಶೇ.೧೨.೫ರಷ್ಟು ಹೆಚ್ಚಾಗಿದೆ.

ಅಂತಾರಾಷ್ಟ್ರೀಯ ಹಣಕಾಸು ಪೇಟೆಯಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ನಮ್ಮ ರೂಪಾಯಿಯ ಮೌಲ್ಯ ನಿರೀಕ್ಷೆ ಮೀರಿ ಕುಸಿಯುತ್ತಿರುವುದನ್ನು ಕಾಣುತ್ತಿದ್ದೇವೆ. ಕಳೆದ ಗುರುವಾರ ಒಂದು ಡಾಲರಿಗೆ ೭೯.೯೬ ರೂ.ದಾಟಿತ್ತು. ನಮ್ಮ ರಿಜರ್ವ್ ಬ್ಯಾಂಕ್ ತನ್ನ ನೀತಿಯಂತೆ ಬೆಲೆಯಲ್ಲಿ ಅನವಶ್ಯಕ ಏರು ಪೇರುಗಳನ್ನು ತಡೆದು ಸ್ಥಿರಗೊಳಿಸುವ ಉದ್ದೇಶದಿಂದ ಮಧ್ಯ ಪ್ರವೇಶಿಸಿ ರೂಪಾಯಿ ಬೇಡಿಕೆ ಹೆಚ್ಚಿಸಿದ್ದರಿಂದ ವಾರಾಂತ್ಯದಲ್ಲಿ ೭೯.೮೬ ರೂ.ಗೆ ನಿಂತಿದೆ. ಇದು ಆತಂಕಕಾರಿ ಹೌದು. ಆದರೆ ಬೆಟ್ಟವೇ ತಲೆಯ ಮೇಲೆ ಬಿದ್ದಂತೆ ಗಾಬರಿಯಾಗುವ ಮತ್ತ ದೇಶದ ಅರ್ಥವ್ಯವಸ್ಥೆಗೆ ದೊಡ್ಡ ಅಪಾಯ ಕಾದಿದೆ ಎಂದು ಭಾವಿಸುವ ಅನಿವಾರ್ಯತೆ ಖಂಡಿತವಾಗಿಯೂ ಇಲ್ಲ.

ಅರ್ಥವ್ಯವಸ್ಥೆಯ ಸುಸ್ಥಿರತೆಯ (sustainability) ಹಲವು ಮಾನದಂಡಗಳಲ್ಲಿ ದೇಶದ ನಾಣ್ಯದ ವಿನಿಮಯ ದರವೂ ಒಂದು. ನಮ್ಮ ಆರ್ಥಿಕ ಬುನಾದಿ ಮತ್ತು ಮೂಲ ವಸ್ತುಗಳು (fundamentals) ಭದ್ರವಾಗಿವೆ. ಇಂಥ ಶಾಕ್‌ಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ನಮ್ಮ ಅರ್ಥವ್ಯವಸ್ಥೆಗಿದೆ. ಅರ್ಥಸಚಿವರೂ ಇದನ್ನೆ ಹೇಳಿದ್ದಾರೆ.

ಬೇಡಿಕೆ ಮತ್ತು ಪೂರೈಕೆಗಳ ಮಾರುಕಟ್ಟೆ ಬೆಲೆ ನಿರ್ಧಾರದ ತತ್ವದ ಆಧಾರದ ಮೇಲೆ ವಿದೇಶಿ ವಿನಿಮಯ ಪೇಟೆಯಲ್ಲಿ ಇತರ ದೇಶಗಳ ನಾಣ್ಯಗಳೊಡನೆ ಒಂದು ದೇಶದ ನಾಣ್ಯದ ವಿನಿಮಯ ದರವನ್ನು ನಿರ್ಧಾರ ಮಾಡಲಾಗುತ್ತದೆ. ಇದಕ್ಕೆ ದೇಶದ ಸರಕ ಮತ್ತು ಸೇವೆಗಳ ಆಮದುಗಳು ಮತ್ತು ರಫ್ತುಗಳು, ಬಂಡವಾಳದ ಒಳ ಮತ್ತು ಹೊರ ಹರಿವು, ಬೌದ್ಧಿಕ ಹಕ್ಕುಗಳು ಮತ್ತು ತಂತ್ರಜ್ಞಾನದ ವರ್ಗಾವಣೆ, ವಿದೇಶಿ ವಿನಿಮಯ ನಿಧಿಯ ಮಟ್ಟ, ಬಂಡವಾಳ ಪೇಟೆ ಹೂಡಿಕೆಗಳ (ಶೇರುಗಳು ಮತ್ತು ಸಾಲಪತ್ರಗಳು), ತೆರಿಗೆ ನೀತಿಗಳು, ಆಮದು ಮತ್ತು ರಫ್ತು ನೀತಿ ನಿಯಮಗಳು (ಮುಕ್ತ, ನಿರ್ಬಂಧಗಳಿಗೊಳಪಟ್ಟ ಮತ್ತು ನಿಷೇಧಿತ) ಮತ್ತು ವಿದೇಶಿಯ ವ್ಯವಹಾರ ಅನುಕೂಲತೆಯ ಮಟ್ಟ ( ease of doing business) ಮುಂತಾದವುಗಳು ಆಧಾರವಾಗಿರುತ್ತವೆ.

ಜಾಗತಿಕ ಆರ್ಥಿಕ ಬೆಳವಣಿಗೆ, ಹಣದುಬ್ಬರದ ಸ್ಥಿತಿ, ಭೌಗೋಳಿಕ-ರಾಜಕೀಯ ಬೆಳವಣಿಗೆಗಳು ಮತ್ತು ಅಂತಾರಾಷ್ಟ್ರೀಯ ಸರಕುಗಳ ಪೂರೈಕೆ ಸರಪಳಿ ವ್ಯವಸ್ಥೆ ಮುಂತಾದವುಗಳೂ ಪ್ರಭಾವ ಬೀರುತ್ತವೆ. ಎರಡನೇ ಮಹಾಯುದ್ಧದ ನಂತರ ಆಮೇರಿಕೆಯ ಆರ್ಥಿಕ ಪಾರಮ್ಯದಿಂದಾಗಿ ಅದರ ಡಾಲರ್ ಜಗತ್ತಿನಲ್ಲಿಯೇ ಬಲಿಷ್ಠ ನಾಣ್ಯವಾಗಿ ಬೆಳೆಯಿತು. ಅಲ್ಲದೆ ಪೂರ್ಣ ಮುಕ್ತ ವಿನಿಮಯ (free convertiability)  ) ನಾಣ್ಯವಾಯಿತು.

ಇತರ ದೇಶಗಳೆಲ್ಲ ತಮ್ಮ ನಾಣ್ಯಗಳ ಮೌಲ್ಯವನ್ನು ಡಾಲರ್ ನೊಡನೆ ವಿನಿಮಯ ದರವನ್ನಾಧರಿಸಿ ನಿರ್ಧರಿಸಿಕೊಂಡು ತಮ್ಮೊಳಗೆ ವಿನಿಮಯ ದರಗಳನ್ನು ನಿಗದಿಪಡಿಸಿಕೊಳ್ಳುತ್ತಿದ್ದವು. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವ್ಯವಸ್ಥೆಯಲ್ಲಿಯೂ ನಾಣ್ಯಗಳಿಗೆ ಮುಖ ಬೆಲೆಗಳಿದ್ದಾಗ (per value ) ಇದೆ ವ್ಯವಸ್ಥೆ ಇತ್ತು. ನಂತರ ೧೯೭೫ರಲ್ಲಿ ಮುಖಬೆಲೆಗಳನ್ನು ಐಎಂಎಫ್ ರದ್ದು ಮಾಡಿತು. ಅಂದಿನಿಂದ ಪೇಟೆ ಶಕ್ತಿಗಳ ನಾಣ್ಯದ ಕೊಳ್ಳುವ ಶಕ್ತಿಯನ್ನು ಆಧರಿಸಿ ವಿನಿಮಯ ದರಗಳನ್ನು ನಿರ್ಧರಿಸುವದು ಆರಂಭವಾಯಿತು.

ಈಗಲೂ ಆಮೇರಿಕೆಯ ಡಾಲರಿನದೇ ಪಾರಮ್ಯವಿದ್ದು ಎಲ್ಲ ದೇಶಗಳ ವಿದೇಶಿ ವಿನಿಮಯ ನಿಧಿಯಲ್ಲಿ (ಕೇಂದ್ರೀಯ ಬ್ಯಾಂಕುಗಳಲ್ಲಿ) ಡಾಲರಿನದೇ ಸಿಂಹ ಪಾಲು.

ರೂಪಾಯಿ ಅಂದು ಇಂದು

ಸ್ವಾತಂತ್ರ್ಯ ನಂತರ ಭಾರತವು ಅಭಿವೃದ್ಧಿಶೀಲ ದೇಶವಾಗಿ ಯೋಜಿತ ಆರ್ಥಿಕ ಬೆಳವಣಿಗೆ ಆರಂಭಿಸಿದ ನಂತರ ೧೯೬೦ರ ದಶಕದಲ್ಲಿ ಅಧಿಕೃತವಾಗಿ ಒಂದು ಡಾಲರಿಗೆ ೭.೫ ರೂ.ವಿನಿಮಯ ದರ ಇತ್ತು. ಆದರೆ, ವಿನಿಮಯ ಪೇಟೆಯಲ್ಲಿ ರೂಪಾಯಿ ಮೌಲ್ಯ ಕಡಿಮೆ ಇತ್ತು. ಯಾವುದೆ ಬೆಳೆಯುತ್ತಿರುವ ದೇಶದ ನಾಣ್ಯ ವಿದೇಶಿ ಪೇಟೆಯಲ್ಲಿ ಮೌಲ್ಯ ಕಳೆದು ಕೊಳ್ಳುವದು ಸ್ವಾಭಾವಿಕ. ಯಾಕೆಂದರೆ ಆಮದುಗಳು ಹೆಚ್ಚಾಗಿರುತ್ತದೆ. ವಿದೇಶಿ ಬಂಡವಾಳ ಮತ್ತು ತಂತ್ರಜ್ಞಾನ ಆಕರ್ಷಿಸಬೇಕು. ರಫ್ತುಗಳನ್ನು ಹೆಚ್ಚಿಸುವ ಕ್ರಮಗಳಲ್ಲಿ ಅಪಮೌಲ್ಯಕರಣವೂ ಒಂದು ಇಂಥವೇ ಕಾರಣಗಳಿಗಾಗಿ ಭಾರತ ಸರ್ಕಾರ ೦೬-೦೬-೧೯೬೬ರಂದು ರೂಪಾಯಿತು ಬಾಹ್ಯ ಮೌಲ್ಯವನ್ನು ಶೇ.೩೩ ಕಡಿಮೆ ಮಾಡಿ ಡಾಲರಿಗೆ ೧೦.೦೦ ರೂಪಾಯಿಗಳೆಂದು ಘೋಷಿಸಿತು. ಇದನ್ನೆ ಅಪಮೌಲ್ಯೀಕರಣ (devaluation of currenvy ) ಎಂದು ಕರೆದರು.

ಅಂದಿನಿಂದ ಇಂದಿನವರೆಗೆ ೪೬ ವರ್ಷಗಳ ಬೆಳವಣಿಗೆಗಳನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಡಾಲರ್ ಎದುರು ರೂಪಾಯಿ ನಿಧಾನವಾಗಿ ಕುಸಿಯುತ್ತ ಬಂದಿದ್ದರೂ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದೇ ಹೇಳಬೇಕಾಗುತ್ತದೆ. ಅಲ್ಲಲ್ಲಿ ತೀವ್ರ ಕುಸಿತಗಳು ಕಂಡಿದ್ದೂ ಉಂಟು. ರೂಪಾಯಿ ಜರ್ರನೆ ಕೆಳಗಿಳಿದಿದೆ. ೧೯೮೯-೯೦-೯೧ರ ಆರ್ಥಿಕ ಸಂಕಷ್ಟದ ದಿನಗಳಲ್ಲಿ ಕೇವಲ ೧೫ ದಿನಗಳ ಆಮದಿಗೆ ಪಾವತಿಸಲು ಸಾಕಾಗಲಾರದಷ್ಟು ೦.೧ ಬಿಲಿಯನ್ ಮಾತ್ರ ವಿದೇಶಿ ವಿನಿಯಮ ನಿಧಿ ಉಳಿದಿತ್ತು.

ನಂತರ ೧೯೯೧ ಜುಲೈ ತಿಂಗಳಲ್ಲಿ ಆರ್ಥಿಕ ಸುಧಾರಣೆಗಳನ್ನು ಪ್ರಕಟಿಸಲಾಯಿತು. ಜಾಗತೀಕರಣದ ಹೊಸಗಾಳಿ ಬಲವಾಗಿ ಬೀಸಲಾರಂಭಿತು. ಸುಧಾರಣಾ ಪರ್ವ ನಂತರವೂ ಮುಂದುವರಿಯುತ್ತಿದೆ. ಈ ಇಪ್ಪತ್ತು ವರ್ಷಗಳಲ್ಲಿ ಡಾಲರ ವಿರುದ್ಧ ರೂಪಾಯಿ ಮೌಲ್ಯ ಮಂದಗತಿಯಲ್ಲಿ ಕಡಿಮೆಯಾಗುತ್ತ ಬಂದಿದ್ದು, ಒಂದಷ್ಟು ಅನುಕೂಲಗಳಾಗಿದ್ದರೆ ಒಂದೆರಡು ತೊಂದರೆಗಳಾಗಿವೆ. ೨೦೧೦ರ ದಶಕದ ಆರಂಭದಲ್ಲಿ ಡಾಲರಿಗೆ ೬೦ರೂ.ಗಳಿಗೂ ಹೆಚ್ಚಾದಾಗ ಅಂದಿನ ವಿರೋಧ ಪಕ್ಷ ದೇಶವನ್ನು ಹರಾಜು ಹಾಕುತ್ತಾರೆ ಎಂದು ಟೀಕಿಸಿದ್ದುಂಟು.

ಈಗಲೂ ಟೀಕಿಸುತ್ತಿದ್ದಾರೆ. ಅದು ರಾಜಕೀಯ ಲಾಭದ ಲೆಕ್ಕಚಾರ. ಆದರೆ ವಸ್ತು ನಿಷ್ಠವಾಗಿ ನೋಡಿದರೆ ಆರ್ಥಿಕ ಲಾಭ ನಷ್ಟಗಳ ವಿವರಗಳು ಗೋಚರಿಸುತ್ತವೆ. ಸೂಕ್ತ ಕ್ರಮಗಳನ್ನು ಸೂಚಿಸುವದು ತಜ್ಞರ ಜವಾಬ್ದಾರಿ.

ಇಂದಿನ ಕುಸಿತಕ್ಕೆ ಕಾರಣಗಳು

ಜಾಗತಿಕ ಮಟ್ಟದಲ್ಲಿ ವಿಪರೀತ ಏರಿದ ಹಣದುಬ್ಬರದ ಹಾವಳಿ ಆರ್ಥಿಕ ಹಿಂಜರಿತದ ಭಯ, ಕಚ್ಚಾ ತೈಲ ಬೆಲೆ ಏರಿಳಿತಗಳಿಂದ ಉಂಟಾದ ಅನಿಶ್ಚಿತತೆ, ಸರಕು ಪೂರೈಕೆ ಸರಪಳಿಯಲ್ಲಾದ ತೊಂದರೆಗಳು ಮತ್ತು ನಿಲ್ಲದ ರಶಿಯ-ಉಕ್ರೇನ್ ಯುದ್ಧದ ಭೌಗೋಳಿಕ ರಾಜಕೀಯ ಆತಂಕ ಮುಂತಾದವುಗಳಿಂದ ಈ ಏಳೆಂಟು ತಿಂಗಳಲ್ಲಿ ಡಾಲರ್ ಹೊರತಾಗಿ ಉಳಿದೆಲ್ಲ ದೇಶಗಳ ಕರೆನ್ಸಿಗಳು ಹೆಚ್ಚು ಮೌಲ್ಯ ಕಳೆದುಕೊಂಡಿವೆ. ಅದರ ಬಿಸಿ ಭಾರತದ ರೂಪಾಯಿಗೂ ತಟ್ಟಿದೆ. ರೂಪಾಯಿ ಶೇ.೭.೦ರಷ್ಟು ಕಳೆದುಕೊಂಡಿದ್ದರೆ, ಇತರ ನಾಣ್ಯಗಳ ನಷ್ಟ ಇನ್ನೂ ಹೆಚ್ಚು. ಆಮೆರಿಕೆಯಲ್ಲೂ ಹಣದುಬ್ಬರ ಕಾಟ ಹೆಚ್ಚಿದ್ದರೂ ಅಲ್ಲಿಯ ಫೆಡರಲ್ ರಿಜರ್ವ್ ಕ್ರಮಗಳಿಂದಾಗಿ ಡಾಲರ್ ಸೂಚ್ಯಂಕ ಶೇ.೧೨.೫ರಷ್ಟು ಹೆಚ್ಚಾಗಿದೆ.

ಆಂತರಿಕ ಸಮಸ್ಯೆಗಗಳಿಗೆ ಬಂದರೆ ನಮ್ಮ ರೂಪಾಯಿ ಮೇಲೆ ಹೆಚ್ಚು ಒತ್ತಡ ಬೀಳಲು ಮತ್ತು ಡಾಲರ್ ಬೇಡಿಕೆ ಹೆಚ್ಚಾಗಲು ನಮ್ಮ ಶೇರು ಮತ್ತು ಬಾಂಡ್ ಪೇಟೆಗಳಲ್ಲಿಯ ವಿದೇಶಿ ಹೂಡಿಕೆದಾರರು ಜಾಗತಿಕ ಅನಿಶ್ಚಿತತೆಗಾಗಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಗಳನ್ನು ಹಿಂಪಡೆದದ್ದು ಒಂದು ಪ್ರಬಲ ಕಾರಣ. ಇವರು ಕಳೆದ ಒಂಭತ್ತು ತಿಂಗಳಲ್ಲಿ ೪೯,೪೬೯ ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಶೇರುಗಳನ್ನು ಮಾರಿ ಡಾಲರ್‌ಗಳನ್ನು ಪಡೆದು ಹೋಗಿದ್ದಾರೆ. ಈ ತಿಂಗಳ ೧೫ ದಿನಗಳಲ್ಲೇ ೭೬೩೨ ಕೋಟಿ ರೂ.ಗಳ ಶೇರುಗಳನ್ನು ಮಾರಿದ್ದಾರೆ.

ಇನ್ನು ನಮ್ಮ ಆಮದುಗಳು ಬಹಳ ಹೆಚ್ಚಾಗಿದ್ದು, ನಿರ್ಯಾತಗಳು ಎಷ್ಟೇ ಹೆಚ್ಚಾಗಿದ್ದರೂ ನಮ್ಮ ವ್ಯಾಪಾರ ಶೇಷ ಕೊರತೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಒಂದು ಆತಂಕ. ಅದೇ ರೀತಿ ಹೆಚ್ಚಿನ ಬೆಲೆಯ ಆಮದುಗಳಿಂದ ಹಣ ದುಬ್ಬರವನ್ನೇ ಆಮದು ಮಾಡಿಕೊಂಡಂತಾಗುತ್ತದೆ. ರಿಜರ್ವ್ ಬ್ಯಾಂಕು ರೂಪಾಯಿ ಉಳಿಸಿಲು ಹೋಗಿ ವಿದೇಶಿ ವಿನಿಮಯ ನಿಧಿ ಕರಗುವಂತಾಗಿದೆ.

ನಮ್ಮ ಸರ್ಕಾರ ಚಿನ್ನ ಮತ್ತು ಇತರ ಐಷಾರಾಮಿ ಆಮದುಗಳನ್ನು ನಿಯಂತ್ರಿಸಬೇಕು. ಈ ಸ್ಥಿತಿಯಲ್ಲಿ ನಮ್ಮ ರಫ್ತುಗಳು ವಿದೇಶಿ ಪೇಟೆಗಳಲ್ಲಿ ಸ್ಪರ್ಧಾತ್ಮಕವಾಗಿರುವುದರಿಂದ ಅವುಗಳನ್ನು ಹೆಚ್ಚಿಸಬೇಕು. ವಿದೇಶಿ ವಿನಿಮಯ ನಿಧಿ ಸಾಕಷ್ಟಿರುವಂತೆ ನೋಡಿಕೊಳ್ಳಬೇಕು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ