Mysore
30
few clouds

Social Media

ಶನಿವಾರ, 22 ಮಾರ್ಚ್ 2025
Light
Dark

75 ತಲುಪಿದ ಭಾರತ, 80 ದಾಟಿದ ರೂಪಾಯಿ

ಟಿ.ಎಸ್.ವೇಣುಗೋಪಾಲ್

ಆರ್ಥಿಕ ಸಂಕಷ್ಟದ ಸಮಯದಲ್ಲಿ ಅತಿಯಾಗಿ ಲಾಭ ಮಾಡಿಕೊಳ್ಳುತ್ತಿರುವ ಕಾರ್ಪೊರೇಟ್ ಜಗತ್ತಿಗೂ ಒಂದು ಜವಾಬ್ದಾರಿಯಿದೆ

೧೯೪೭ರಲ್ಲಿ ಒಂದು ಡಾಲರಿಗೆ ೪.೧೬ ರೂಪಾಯಿ ಇತ್ತು. ಈಗ ೭೫ ವರ್ಷಗಳ ನಂತರ ಅದು ೮೦ ರೂಪಾಯಿಯ ಹೊಸ್ತಿಲಲ್ಲಿ ಇದೆ. ರೂಪಾಯಿ ಮೌಲ್ಯದ ಕುಸಿತ ಇನ್ನೂ ಮುಂದುವರಿಯುತ್ತಿರುವುದು ಆತಂಕದ ವಿಷಯವಾಗಿದೆ. ನಿಜ, ರೂಪಾಯಿ ಮೌಲ್ಯ ಮಾತ್ರ ಕುಸಿಯುತ್ತಿಲ್ಲ, ಹಲವಾರು ದೇಶಗಳ ನಾಣ್ಯಗಳ ಮೌಲ್ಯವು ಕುಸಿಯುತ್ತಿದೆ. ಕೆಲವು ನಾಣ್ಯಗಳು ರೂಪಾಯಿಗಿಂತ ವೇಗವಾಗಿ ಕುಸಿಯುತ್ತಿವೆ, ಕೆಲವು ನಿಧಾನವಾಗಿ ಕುಸಿಯುತ್ತಿವೆ. ಕೆಲವು ನಾಣ್ಯಗಳ ಮೌಲ್ಯ ಹೆಚ್ಚುತ್ತಲೂ ಇವೆ. ಸದ್ಯಕ್ಕೆ ಬೇರೆ ಬೇರೆ ಚರ್ಚೆಗಳ ಹಿನ್ನೆಲೆಯಲ್ಲಿ ಹಿನ್ನೆಲೆಗೆ ಸೇರಿದ್ದರೂ ನಮ್ಮ ಆರ್ಥಿಕ ಬಿಕ್ಕಟ್ಟಿನ ಲಕ್ಷಣವಾಗಿ ಗಂಭೀರವಾದ ವಿಷಯವೆ. ನಿರುದ್ಯೋಗ, ಹಣದುಬ್ಬರ ಇತ್ಯಾದಿ ಸಮಸ್ಯೆಗಳನ್ನು ಕುರಿತ ಚರ್ಚೆ ಗಂಭೀರವಾಗಿ ಮುಂದುವರಿಯಬೇಕಾಗಿದೆ.

ಯಾಕೆ ಹೀಗಾಗುತ್ತಿದೆ? ರೂಪಾಯಿ ಅಥವಾ ಯಾವುದೇ ನಾಣ್ಯದ ಮೌಲ್ಯ ಹೇಗೆ ನಿರ್ಧಾರವಾಗುತ್ತದೆ? ಎಲ್ಲಾ ಸರಕುಗಳ ವಿಷಯದಲ್ಲಿ ಆಗುವಂತೆ ನಾಣ್ಯಗಳ ಮೌಲ್ಯ ಅದರ ಬೇಡಿಕೆ ಹಾಗೂ ಪೂರೈಕೆಯನ್ನು ಆಧರಿಸಿ ನಿರ್ಧಾರ ವಾಗುತ್ತದೆ. ರೂಪಾಯಿಗೆ ಬೇಡಿಕೆ ಹೆಚ್ಚಿದರೆ ಅದರ ಮೌಲ್ಯ ಹೆಚ್ಚುತ್ತದೆ. ಬೇಡಿಕೆ ಇಳಿದರೆ ಅದರ ಮೌಲ್ಯ ಕುಸಿಯುತ್ತದೆ. ಸರ್ಕಾರ ಅಥವಾ ಕಂಪೆನಿಗಳು ಅಥವಾ ಉದ್ದಿಮೆಗಳು ಸರಕುಗಳನ್ನು ಆಮದು ಮಾಡಿಕೊಳ್ಳುವಾಗ ಅದಕ್ಕೆ ಡಾಲರಿನಲ್ಲಿ ಹಣ ಪಾವತಿಸಬೇಕಾಗುತ್ತದೆ. ಅದಕ್ಕಾಗಿ ರೂಪಾಯಿ ಕೊಟ್ಟು ಡಾಲರನ್ನು ಕೊಳ್ಳುತ್ತವೆ. ಆಮದು ಹೆಚ್ಚಾದಷ್ಟು ಡಾಲರಿಗೆ ಬೇಡಿಕೆ ಹೆಚ್ಚುತ್ತದೆ.
ಆಗ ಡಾಲರ್ ಮೌಲ್ಯ ಹೆಚ್ಚುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ರಫ್ತು ಮಾಡುವ ಸಂದರ್ಭದಲ್ಲಿ ರೂಪಾಯಿಗೆ ಬೇಡಿಕೆ ಹೆಚ್ಚುವುದರಿಂದ ರೂಪಾಯಿ ಮೌಲ್ಯ ಹೆಚ್ಚುತ್ತದೆ.
ಭಾರತದ ಸಮಸ್ಯೆಯೆಂದರೆ ಹಲವು ವರ್ಷಗಳಿಂದ ನಮ್ಮಲ್ಲಿ ರಫ್ತಿಗಿಂತ ಆಮದಿನ ಪ್ರಮಾಣ ವೇಗವಾಗಿ ಬೆಳೆಯುತ್ತಿದೆ. ಇದರಿಂದ ವ್ಯಾಪಾರದ ಕೊರತೆ ಹೆಚ್ಚುತ್ತಿದೆ. ಇದರಿಂದ ಚಾಲ್ತಿ ಖಾತೆಯಲ್ಲಿನ ಕೊರತೆ,ಅಂದರೆ ಸರಕು ಹಾಗೂ ಸೇವೆಗಳ ಆಮದು ಮತ್ತು ರಫ್ತಿನ ಮೌಲ್ಯದ ನಡುವಿನ ಅಂತರ ಹೆಚ್ಚುತ್ತಿದೆ. ಈ ಹಣಕಾಸಿನ ವರ್ಷದ ಮೊದಲ ನಾಲ್ಕು ತಿಂಗಳಿನಲ್ಲಿ ನಮ್ಮ ಒಟ್ಟಾರೆ ರಫ್ತು ಶೇಕಡಾ ೨೦.೧ರಷ್ಟು ಹೆಚ್ಚಿದೆ. ಒಟ್ಟು ೧೫,೭೪೦ ಕೋಟಿ ಡಾಲರ್ ಆಗಿದೆ. ಆದರೆ ಆಮದು ಶೇಕಡಾ ೪೮.೧ರಷ್ಟು ಹೆಚ್ಚಿದೆ. ಒಟ್ಟು ೨೫,೬೪೦ ಕೋಟಿ ಡಾಲರ್‌ಗಳಷ್ಟು ಆಮದು ಮಾಡಿಕೊಂಡಿದ್ದೇವೆ. ಹಾಗಾಗಿ ನಮ್ಮ ಚಾಲ್ತಿ ಖಾತೆಯಲ್ಲಿನ ಕೊರತೆ ೯೯೦೦ ಕೋಟಿ ಡಾಲರ್ ಆಗಿದೆ. ತಿಂಗಳಿನ ಲೆಕ್ಕ ನೋಡಿದರೆ ಜುಲೈ ತಿಂಗಳಿನಲ್ಲಿ ಈ ಕೊರತೆ ೩೧.೦೨ ಬಿಲಿಯನ್ ಡಾಲರ್‌ಗಳಷ್ಟಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಅದು ಮೂರು ಪಟ್ಟು ಹೆಚ್ಚಿದೆ. ಅಂದರೆ ಡಾಲರಿಗೆ ಆ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಾಗಿದೆ.
ಉಕ್ರೇನ್ ಯುದ್ಧದಿಂದ ಪೆಟ್ರೋಲ್ ಬೆಲೆ ಹೆಚ್ಚಿರುವುದರಿಂದ ಹೀಗಾಗಿದೆ, ಇದೊಂದು ತಾತ್ಕಾಲಿಕ ಸಮಸ್ಯೆ ಅನ್ನುತ್ತಿದೆ ಸರ್ಕಾರ. ಇದು ಸ್ವಲ್ಪ ಮಟ್ಟಿಗೆ ನಿಜ. ಆದರೆ ನಾವು ಪೆಟ್ರೋಲ್ ಮಾತ್ರವಲ್ಲ, ಕಲ್ಲಿದ್ದಲಿನಿಂದ ಚಿನ್ನದವರೆಗೆ ಹಲವು ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಕಲ್ಲಿದ್ದಲನ್ನು ಅಪಾರ ಬೆಲೆ ಕೊಟ್ಟು ಕೊಳ್ಳುತ್ತಿದ್ದೇವೆ. ನಮಗೆ ಬೇಕಾದಷ್ಟು ಕಲ್ಲಿದ್ದಲ್ಲನ್ನು ನಮ್ಮಲ್ಲೇ ಉತ್ಪಾದಿಸುವ ಸಾಮರ್ಥ್ಯವಿದ್ದಾಗಲೂ ನಮ್ಮ ಆರ್ಥಿಕನೀತಿಯ ಸಮಸ್ಯೆಯಿಂದ ವಿಪರೀತ ಬೆಲೆ ಕೊಟ್ಟು ಅದನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ವಿದೇಶಿ ಬಂಡವಾಳ ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿದ್ದರೆ ಚಾಲ್ತಿ ಖಾತೆಯ ಕೊರತೆಯನ್ನು ನಿಭಾಯಿಸಬಹುದಿತ್ತು.ಇತ್ತೀಚಿನವರೆಗೂ ವಿದೇಶಿ ಬಂಡವಾಳಿಗರು ನಮ್ಮಲ್ಲಿ ಬಂಡವಾಳ ಹೂಡುತ್ತಿದ್ದರು. ವಿದೇಶಿ ಹಣದ ಒಳಹರಿವು ೨೦೦೮ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಪ್ರಾರಂಭವಾಗಿತ್ತು. ಬಿಕ್ಕಟ್ಟಿನಿಂದ ಹೊರ ಬರುವುದಕ್ಕೆ ಅಮೆರಿಕಾದಂತಹ ದೇಶಗಳು ಬಡ್ಡಿದರವನ್ನು ಗಣನೀಯವಾಗಿ ಇಳಿಸಿ ಆರ್ಥಿಕತೆಯಲ್ಲಿ ಡಾಲರ್ ಯಥೇಚ್ಛವಾಗಿ ದೊರೆಯುವಂತೆ ಮಾಡಿದ್ದವು. ಹಾಗೆಯೇ ಬಾಂಡುಗಳನ್ನು ಕೊಳ್ಳುವ ಮೂಲಕವೂ ಡಾಲರ್ ಲಭ್ಯತೆಯನ್ನು ಹೆಚ್ಚಿಸಿದವು. ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಡಾಲರ್‌ಸಿಗುತ್ತಿತ್ತು. ಅಗ್ಗದಲ್ಲಿ ಸಿಕ್ಕ ಡಾಲರನ್ನು ಬಂಡವಾಳಿಗರು ಭಾರತದಂತಹ ದೇಶಗಳಲ್ಲಿ ಹೆಚ್ಚಿನ ಲಾಭಕ್ಕೆ ಹೂಡತೊಡಗಿದ್ದರು. ನಮ್ಮಲ್ಲಿಗೆ ವಿದೇಶಿ ಬಂಡವಾಳ ಯಥೇಚ್ಛವಾಗಿ ಹರಿದು ಬಂತು. ಈಗ ಪರಿಸ್ಥಿತಿ ಬದಲಾಗಿದೆ. ಅಮೆರಿಕ ಹಣದುಬ್ಬರವನ್ನು ತಡೆಯುವುದಕ್ಕೆ ಬಡ್ಡಿದರವನ್ನು ತೀವ್ರವಾಗಿ ಹೆಚ್ಚಿಸುತ್ತಿದೆ. ವಿದೇಶಿ ಬಂಡವಾಳ ಮತ್ತೆ ಅಮೆರಿಕಕಡೆ ಹರಿಯತೊಡಗಿದೆ. ವಿದೇಶಿ ಬಂಡವಾಳದ ಹೊರಹರಿವಿಗೆ ಇದೂ ಒಂದು ಕಾರಣ. ಈಗ ಅದು ಲಾಭದಾಯಕ ಹೂಡಿಕೆಯಲ್ಲ. ವಿದೇಶಿ ಬಂಡವಾಳಿಗರು ೨೦೨೨ರಲ್ಲಿ ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ ಸುಮಾರು ೨೯.೭೩ ಬಿಲಿಯನ್ ಡಾಲರ್ ಬಂಡವಾಳವನ್ನು ಹಿಂತೆಗೆದುಕೊಂಡಿದ್ದಾರೆ. ವಿದೇಶಿ ಬಂಡವಾಳದ ಹೊರಹರಿವು ರೂಪಾಯಿಯ ಮೌಲ್ಯದ ಕುಸಿತಕ್ಕೆ ಬಹು ಮುಖ್ಯಕಾರಣ. ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದ ಬಹುತೇಕ ಸಂದರ್ಭಗಳಲ್ಲಿ ವಿದೇಶಿ ಬಂಡವಾಳ ಹೊರಹರಿವನ್ನು ಗಮನಿಸಬಹುದು.
ಹಲವು ಕಾರಣಕ್ಕೆ ವಿದೇಶಿ ವಿನಿಮಯದ ಮೀಸಲು ಕರಗುವುದಕ್ಕೆ ಪ್ರಾರಂಭವಾಗಿದೆ. ಸೆಪ್ಟೆಂಬರ್ ೨೦೨೧ರಲ್ಲಿ ೬೪೨೦೦ ಕೋಟಿ ಡಾಲರ್ ಇದ್ದ ವಿದೇಶಿ ವಿನಿಮಯದ ಮೀಸಲು ಈಗ ೫೭೨೭೦ ಕೋಟಿ ಡಾಲರ್ ಆಗಿದೆ. ೨೦೨೧ರ ಜೂನ್ ತಿಂಗಳಿನಲ್ಲಿ ೧೯ ತಿಂಗಳ ಆಮದಿನ ಖರ್ಚನ್ನು ಭರಿಸುವಷ್ಟು ಹಣ ನಮ್ಮಲ್ಲಿತ್ತು. ಈಗ ಹೆಚ್ಚೆಂದರೆ ೯.೫ ತಿಂಗಳ ಆಮದಿನ ಖರ್ಚನ್ನು ಭರಿಸಬಹುದು.
ಆರ್‌ಬಿಐ ಡಾಲರನ್ನು ಮಾರುವ ಮೂಲಕ ರೂಪಾಯಿಯನ್ನು ಬೆಂಬಲಿಸುವ ಪ್ರಯತ್ನ ಮಾಡಿತ್ತು. ಆದರೆ ವಿದೇಶಿ ವಿನಿಮಯ ಕರಗುತ್ತಿರುವುದರಿಂದ ಈ ಕ್ರಮವನ್ನು ಮುಂದುವರಿಸುವುದಕ್ಕೆ ಸಾಧ್ಯವಿಲ್ಲ. ಹಾಗಂತ ‘ರೂಪಾಯಿ ತನ್ನ ಸ್ವಾಭಾವಿಕ ಮಟ್ಟವನ್ನು ಕಂಡುಕೊಳ್ಳಲಿ’ ಅಂತ ಸುಮ್ಮನಿರುವುದಕ್ಕೂ ಸಾಧ್ಯವಿಲ್ಲ.
ನಾಣ್ಯಗಳ ಮೌಲ್ಯ ಕುಸಿಯುವುದರಿಂದ ಸಮಸ್ಯೆಗಳಿವೆ.ಆಮದು ದುಬಾರಿಯಾಗುತ್ತದೆ.ಅದನ್ನು ಭರಿಸಲು ಹೆಚ್ಚು ವಿದೇಶಿ ವಿನಿಮಯ ಖರ್ಚಾಗುತ್ತದೆ. ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುವ ಕೈಗಾರಿಕೆಗಳ ಉತ್ಪಾದನಾ ವೆಚ್ಚವೂ ಹೆಚ್ಚುತ್ತದೆ. ರೂಪಾಯಿ ಮೌಲ್ಯದ ಕುಸಿತದಿಂದ ಹಣದುಬ್ಬರದ ದರ ಹೆಚ್ಚುತ್ತದೆ. ಹಣದುಬ್ಬರ ರೂಪಾಯಿ ಮೌಲ್ಯವನ್ನು ಕುಗ್ಗಿಸುತ್ತದೆ. ಇದೊಂದು ವಿಷವರ್ತುಲ. ರೂಪಾಯಿ ಮೌಲ್ಯದ ಇಳಿತದಿಂದ ವಿದೇಶಿ ವಿನಿಮಯದ ಸಂಗ್ರಹವೂ ಇಳಿಯುತ್ತದೆ. ಯಾಕೆಂದರೆ ಡಾಲರ್‌ಎದುರು ಇತರ ದೇಶಗಳ ನಗದಿನ ಮೌಲ್ಯ ಕುಸಿದಾಗ, ಒಟ್ಟಾರೆ ವಿದೇಶಿ ವಿನಿಮಯದ ಮೀಸಲಿನ ಮೌಲ್ಯಕಮ್ಮಿಯಾಗುತ್ತದೆ. ಉದಾಹರಣೆಗೆ ಯೂರೋ ಬೆಲೆ ಕುಸಿದರೆ, ಸಂಗ್ರಹದಲ್ಲಿರುವ ಯೂರೋವಿನ ಮೌಲ್ಯ ಕಡಿಮೆಯಾಗುತ್ತದೆ. ಹಾಗಾಗಿ ಒಟ್ಟಾರೆ ಮೀಸಲಿನ ಮೌಲ್ಯ ಕಡಿಮೆಯಾಗುತ್ತದೆ.
ಇಂತಹ ಸಮಯದಲ್ಲಿ ಏನು ಮಾಡಬಹುದು? ವಿದೇಶಿ ಬಂಡವಾಳ ಹರಿದು ಬರುತ್ತದೆ ಎಂದು ನಿರೀಕ್ಷಿಸುವುದು ಕಷ್ಟ. ಅದಕ್ಕಾಗಿ ತೆಗೆದುಕೊಂಡ ಕ್ರಮಗಳು ಸದ್ಯಕ್ಕೆ ಫಲಕಾರಿಯಾಗಿಲ್ಲ. ಹೊರಹರಿವನ್ನು ತಪ್ಪಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಇನ್ನು ಎಲ್ಲಾ ದೇಶಗಳಲ್ಲೂ ಆರ್ಥಿಕತೆಯಲ್ಲಿ ಬೆಳವಣಿಗೆ ಕುಂಠಿತವಾಗಿರುವು ದರಿಂದ ಹೆಚ್ಚಿನ ರಫ್ತನ್ನು ನೆಚ್ಚಿ ಕೂರುವುದೂ ಸಾಧುವಲ್ಲ. ಮೊದಲಿಗೆ ಇದೊಂದು ತಾತ್ಕಾಲಿಕ ಸಮಸ್ಯೆ ಎಂದಾಗಲಿ, ಎಷ್ಟೋ ದೇಶಗಳಿಗೆ ಹೋಲಿಸಿದರೆ ನಾವು ಸುಸ್ಥಿತಿಯಲ್ಲಿದ್ದೇವೆ ಎಂದು ನೆಮ್ಮದಿ ಪಟ್ಟುಕೊಳ್ಳುವುದನ್ನು ಬಿಡಬೇಕು.
ಇದು ಗಂಭೀರವಾದ ಸ್ಥಿತಿ ಅನ್ನುವುದನ್ನು ಒಪ್ಪಿಕೊಳ್ಳಬೇಕು. ಆರ್ಥಿಕ ಪ್ರಗತಿಗೆ ಬೇಕಾದ ಸಂಪನ್ಮೂಲವನ್ನು ಕಾರ್ಪೊರೇಟ್ ತೆರಿಗೆ, ಸಂಪತ್ತಿನ ಮೇಲಿನ ತೆರಿಗೆ, ಇತ್ಯಾದಿ ಕ್ರಮಗಳಿಂದ ಕ್ರೋಢೀಕರಿಸಬೇಕು. ಆ ಮೂಲಕ ಪೆಟ್ರೋಲ್ ಮೇಲಿನ ಸುಂಕವನ್ನು ಕಡಿಮೆ ಮಾಡಿದರೆ ಹಣದುಬ್ಬರದ ನಿಯಂತ್ರಣಕ್ಕೂ ಅನುಕೂಲ ವಾಗುತ್ತದೆ. ಇಂದಿನ ಆರ್ಥಿಕ ಸಂಕಷ್ಟದ ಸಮಯದಲ್ಲಿ ಅತಿಯಾಗಿ ಲಾಭ ಮಾಡಿ ಕೊಳ್ಳುತ್ತಿರುವ ಕಾರ್ಪೊರೇಟ್ ಜಗತ್ತಿಗೂ ಒಂದು ಜವಾಬ್ದಾರಿಯಿದೆ. ಹತ್ತು ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡುವ ಅವಶ್ಯಕತೆಯೂ ಇಲ್ಲ. ಅನವಶ್ಯಕ ಆಮದಿಗೆ ಕಡಿವಾಣ ಹಾಕಲು ಪ್ರಯತ್ನಿಸಬೇಕು. ೨೦೧೩ರಲ್ಲಿ ಚಿನ್ನದ ಆಮದಿಗೆ ನಿಯಂತ್ರಣ ಹೇರಲಾಗಿತ್ತು. ವಿದೇಶಿ ಬಂಡವಾಳ ಹೊರಹರಿಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು. ರಷ್ಯಾದಿಂದ ಆಮದು ಮಾಡಿಕೊಳ್ಳುವ ಪದಾರ್ಥಗಳಿಗೆ ರೂಪಾಯಿಯಲ್ಲಿ ಹಣ ಪಾವತಿಸುವ ಪ್ರಯತ್ನವನ್ನು ಇನ್ನಷ್ಟು ಗಂಭೀರವಾಗಿ ಮಾಡಬೇಕು. ಒಟ್ಟಿನಲ್ಲಿ ಇದೊಂದು ಗಂಭೀರ ಸಮಸ್ಯೆ ಎಂದು ಪರಿಗಣಿಸಿ, ಎಚ್ಚರದಿಂದ ನಿರ್ವಹಿಸುವುದು ನಮ್ಮ ಆದ್ಯತೆಯಾಗಬೇಕು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ