Mysore
23
overcast clouds
Light
Dark

ಕೊಡಗು-ದಕ್ಷಿಣ ಕನ್ನಡ ಜಿಲ್ಲೆ ಗಡಿಭಾಗದಲ್ಲಿ ವರುಣನ ಅವಾಂತರ : ಮಡಿಕೇರಿ-ಮಂಗಳೂರು ಹೆದ್ದಾರಿ ಸಂಪರ್ಕ ಕಡಿತ

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ವರುಣ ಅವಾಂತರ ಸೃಷಿಸಿದೆ.
ಧಾರಾಕಾರ ಮಳೆಯಿಂದ ಪಯಸ್ವಿನಿ ನದಿ ಉಕ್ಕಿ ಹರಿದಿದ್ದು, ಕೆಲ ಮನೆಗಳಿಗೆ ನೀರು ನುಗ್ಗಿದೆ. ಮಳೆ ಹೆಚ್ಚಾದ ಪರಿಣಾಮ ಸ್ಥಳೀಯ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ರಾತ್ರಿಯೇ ಸ್ಥಳಾಂತರಗೊಂಡರು. ಅಲ್ಲದೆ, ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೇಲೂ ನೀರು ಹರಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.


ಕೊಯನಾಡು ಬಳಿ ಸೇತುವೆಯ ಒಂದು ಬದಿ ಕುಸಿಯಲಾರಂಭಿಸಿದ್ದು, ಹೆದ್ದಾರಿ ಸಂಚಾರ ಬಂದ್ ಆಗುವ ಭೀತಿ ಎದುರಾಗಿದೆ. ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಆತಂಕದ ನಡುವೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊಯನಾಡಿನ ಕೆಲ ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕೊಯನಾಡು-ದೇವರಕೊಲ್ಲಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮತ್ತೆ ಹೆದ್ದಾರಿ ಕುಸಿಯುವ ಭೀತಿ ಎದುರಾಗಿದೆ.
ಸಂಪಾಜೆಯ ಜೀಡ್ಲ, ಅರೆಕಲ್ಲು ಪ್ರದೇಶದಲ್ಲೂ ಭಾರೀ ಮಳೆಯಾಗಿದೆ. ಇಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿದ್ದು, ಪಾಲಡ, ಅರಂಬೂರಿನಲ್ಲಿ ಹೆದ್ದಾರಿಯ ಮೇಲೆ ನೀರು ಹರಿದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಉಂಬಳೆ ಕಟ್ವಪಲ್ಲಿ ಬಳಿ ರಸ್ತೆ ಮೇಲೆ ಮಣ್ಣು ಕುಸಿದಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಅರಂಬೂರು, ಪಾಲಡ್ಕ, ಪೆರಾಜೆ ಹೆದ್ದಾರಿಗಳಲ್ಲೂ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.


ಇನ್ನು ಅರೆಕಲ್ಲು ಗ್ರಾಮದ ದಟ್ಟಾರಣ್ಯದಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಬೃಹತ್ತಾದ ಬೆಟ್ಟದ ಮೇಲಿಂದ ಮರ, ಕಲ್ಲು, ಕೆಸರುಮಿಶ್ರಿತ ನೀರು ಕೊಚ್ಚಿಕೊಂಡು ಬಂದಿದೆ. ಈ ಭಾಗದಲ್ಲಿ ಮಳೆ ಕಡಿಮೆಯಾದರೂ ಭೂಕುಸಿತ ಉಂಟಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಘಟನೆಯಿಂದ ಅರೆಕಲ್ಲು ಗ್ರಾಮದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ದಬ್ಬಡ್ಕದಲ್ಲಿ ಸುಮಾರು ಅರ್ಧ ಎಕರೆಯಷ್ಟು ರಬ್ಬರ್ ತೋಟ ಕುಸಿದಿದೆ. ಅಲ್ಲದೆ, ದಬ್ಬಡ್ಕ ಕೊಪ್ಪದ ಬಾಲಕೃಷ್ಣ ಎಂಬವರ ಮನೆಗೆ ಹಾನಿಯಾಗಿದ್ದು, ಅಪಾಯದ ಮುನ್ಸೂಚನೆ ದೊರೆತ ಹಿನ್ನೆಲೆ ಮನೆಯವರು ಸುರಕ್ಷಿತ ಸ್ಥಳಗಳಿಗೆ ತೆರಳಿ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ ಭೇಟಿ ನೀಡಿ ಪರಿಶೀಲಿಸಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ ೨೪ ಗಂಟೆ ಅವಧಿಯಲ್ಲಿ ೫೮.೨೬ ಮಿ.ಮೀ. ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೧೫.೯೮ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ ೨೦೭೨.೫೯ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೧೭೪೦.೧೯ ಮಿ.ಮೀ ಮಳೆಯಾಗಿತ್ತು.


ಮಡಿಕೇರಿ ತಾಲ್ಲೂಕಿನಲ್ಲಿ ೯೩.೮೫ ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ ೪೦.೧೫ ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ ೪೦.೭೭ ಮಿ.ಮೀ. ಸರಾಸರಿ ಮಳೆಯಾಗಿದೆ. ಮಡಿಕೇರಿ ಕಸಬಾ ೬೬.೬೦, ನಾಪೋಕ್ಲು ೩೦.೨೦, ಸಂಪಾಜೆ ೧೭೦, ಭಾಗಮಂಡಲ ೧೦೮.೬೦, ವಿರಾಜಪೇಟೆ ಕಸಬಾ ೧೦೦.೪೦, ಹುದಿಕೇರಿ ೧೯, ಶ್ರೀಮಂಗಲ ೧೨, ಪೊನ್ನಂಪೇಟೆ ೪೦, ಅಮ್ಮತ್ತಿ ೨೨, ಬಾಳೆಲೆ ೪೭.೫೦, ಸೋಮವಾರಪೇಟೆ ಕಸಬಾ ೫೦.೮೦, ಶನಿವಾರಸಂತೆ ೩೦.೪೦, ಶಾಂತಳ್ಳಿ ೭೯, ಕೊಡ್ಲಿಪೇಟೆ ೪೩.೨೦, ಕುಶಾಲನಗರ ೫, ಸುಂಟಿಕೊಪ್ಪ ೩೬.೨೦ ಮಿ.ಮೀ. ಮಳೆಯಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ