ಹುಲಿ ಯೋಜನೆ ಅನುಷ್ಠಾನ ಬೇಡವೇ ಬೇಡ
ಬಿರ್ಸಾ ಮುಂಡಾ ಜಯಂತಿಯಲ್ಲಿ ನರೇಂದ್ರ ಆಗ್ರಹ
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮವನ್ನು ಹುಲಿ ಯೋಜನೆ ಪ್ರದೇಶವಾಗಿ ಘೋಷಿಸುವ ಮೊದಲು ವನ್ಯಜೀವಿಧಾಮದ ಒಳಗಿರುವ ಗಿರಿಜನರ ಪೋಡುಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಶಾಸಕ ಆರ್.ನರೇಂದ್ರ ಅವರು ಒತ್ತಾಯಿಸಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಬಿರ್ಸಾಮುಂಡಾರ ೧೪೮ನೇ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ನಾನು ೫-೬ ವರ್ಷಗಳಿಂದ ಹುಲಿ ಯೋಜನೆ ಜಾರಿಯನ್ನು ವಿರೋಧಿಸುತ್ತ ಬಂದಿದ್ದೇನೆ. ವನ್ಯಜೀವಿಧಾಮದಲ್ಲಿ ೫೬ ಆದಿವಾಸಿ ಪೋಡುಗಳಿದ್ದು ೧೫ ಸಾವಿರ ಗಿರಿಜನರು ವಾಸವಾಗಿದ್ದಾರೆ. ಪೋಡುಗಳಿಗೆ ಇನ್ನು ಸರಿಯಾಗಿ ಮೂಲ ಸೌಕರ್ಯ ಕಲ್ಪಿಸಿಲ್ಲ. ೪ ಪೋಡುಗಳಿಗೆ ಇನ್ನು ವಿದ್ಯುತ್ ಸೌಲಭ್ಯ ದೊರಕಿಲ್ಲ ಎಂದು ತಿಳಿಸಿದರು.
ವನ್ಯಜೀವಿಧಾಮದಲ್ಲಿ ೧೨-೧೩ ಹುಲಿಗಳಿರಬಹುದು. ಅವುಗಳ ರಕ್ಷಣೆಗಾಗಿ ೧೫ ಸಾವಿರ ಗಿರಿಜನರ ಬದುಕನ್ನು ನರಕ ಮಾಡುವುದು ಬೇಡ. ಒಂದು ವೇಳೆ ಹುಲಿ ಯೋಜನೆ ಜಾರಿಯಾದರೆ ಪೋಡುಗಳಿಗೆ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ಸಿಗುವುದಿಲ್ಲ. ಅರಣ್ಯಾಧಿಕಾರಿಗಳು ಪ್ರತಿಯೊಂದಕ್ಕೂ ತಕರಾರು ಮಾಡುತ್ತಾರೆ ಎಂದು ತಿಳಿಸಿದರು.
ಬಂಡೀಪುರ ಮತ್ತು ಬಿಳಿಗಿರಿರಂಗನಬೆಟ್ಟ ಹುಲಿ ಯೋಜನೆ ಪ್ರದೇಶಗಳಾಗಿವೆ. ಸಂಜೆ ೬ ಗಂಟೆ ನಂತರ ಪ್ರವೇಶ ನಿಷೇಧಿಸಲಾಗಿದೆ. ಹಾಗೆಯೇ ಇಲ್ಲಿಯೂ ಆಗಲಿದ್ದು ಮಲೆ ಮಹದೇಶ್ವರ ಭಕ್ತರು, ಗಿರಿಜನರಿಗೆ ತೀವ್ರ ತೊಂದರೆಯಾಗಲಿದೆ ಎಂದು ಹೇಳಿದರು.
ಹುಲಿ ಯೋಜನೆಯಿಂದ ಯಾವುದೇ ತೊಂದರೆಯಿಲ್ಲ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೇಳುತ್ತಾರೆ. ಈ ಬಗ್ಗೆ ನಮಗೆ ಲಿಖಿತವಾಗಿ ನೀಡಬೇಕು ಎಂದರೆ ಉತ್ತರವಿಲ್ಲ. ಹನೂರು ಕ್ಷೇತ್ರ ವ್ಯಾಪ್ತಿಯ ೮೨ ಪೋಡುಗಳ ೧೭೮೦ ಗಿರಿಜನರಿಗೆ ಭೂಮಿ ಹಕ್ಕು ಪತ್ರ ಕೊಡಿಸಿದ್ದೇನೆ ಎಂದರು.
ಉದ್ಘಾಟನೆ ನೆರವೇರಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ದಲಿತ, ಹಿಂದುಳಿದ ಜನಾಂಗಗಳ ಕಲ್ಯಾಣಕ್ಕೆ ಅಭಿವೃದ್ಧಿ ನಿಗಮಗಳನ್ನು ಪ್ರಾರಂಭಿಸಲಾಗಿದೆ. ಹಾಗೆಯೇ ಆದಿವಾಸಿ ಅಭಿವೃದ್ಧಿ ನಿಗಮ ಆರಂಭಿಸಬೇಕು ಎಂದು ಆಗ್ರಹಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರು ಮಾತನಾಡಿ, ಗಿರಿಜನರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.