ರಸ್ತೆ ಸೌಂದರ್ಯ ಹೆಚ್ಚಿಸು ಕಮಾನುಗಳಿಗೆ ಬೇಕಿದೆ ಕಾಯಕಲ್ಪ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಬರುವವರಿಗೆ ಸ್ವಾಗತ ನೀಡುತ್ತ ರಾಜರ ಆಳ್ವಿಕೆಯ ವೈಭವದ ಕಥೆ ಹೇಳುವ ಪಾರಂಪರಿಕ ಹೆಬ್ಬಾಗಿಲುಗಳು ವಿರೂಪಗೊಂಡು ನಿಂತಿವೆ. ಇದು ಪಾರಂಪರಿಕ ನಗರಿಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಅರಮನೆ ನಗರಿಯ ಅಂದವನ್ನು ಹೆಚ್ಚಿಸುವ ನಿಟ್ಟಿನಲ್ಲಿ ೧೮೮೧-೮೨ರಲ್ಲಿ ೧೦ನೇ ಚಾಮರಾಜ ಒಡೆಯರ್ ಅವರು ಈಗಿನ ಸರ್ಕಾರಿ ಅತಿಥಿ ಗೃಹದ ಬಳಿ, ಜಿಲ್ಲಾಧಿಕಾರಿ ಕಚೇರಿಯ ಬಳಿ, ಮಹಾರಾಣಿ ಕಾಲೇಜು, ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಬೃಹತ್ ಆಕಾರದ ಸ್ವಾಗತ ಕವಾನುಗಳನ್ನು(ಆರ್ಚ್) ನಿರ್ಮಿಸಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗ ಅವು ಅವಾಸನದ ಅಂಚಿಗೆ ಜಾರುತ್ತಿವೆ. ಗಾರೆ-ಇಟ್ಟಿಗೆ-ಕಲ್ಲಿನ ಮೂಲಕ ಕಟ್ಟಿರುವ ಅಪರೂಪದ ಈ ಕಮಾನುಗಳನ್ನು ಉಳಿಸಿಕೊಳ್ಳಬೇಕಿದೆ.
ಮರದ ಅರಮನೆಯನ್ನು ಕಟ್ಟಿಸುವ ಮುಂಚೆ ಮೈಸೂರು ಸಂಸ್ಥಾನದ ಕೋಟೆಯ ವಿಸ್ತರಣೆ ಮಾಡುವಾಗ ಈ ಕಮಾನುಗಳನ್ನು ನಿರ್ಮಿಸಲಾಗಿತ್ತು. ಈ ಕಮಾನುಗಳಲ್ಲಿ ನಾಲ್ಕು ಪ್ರತೇಖ ಮಾರ್ಗಗಳಿದ್ದು ವಾಹನಗಳು ಚಲಿಸಲು ರಸ್ತೆ, ಸೈಕಲ್‌ನಲ್ಲಿ ಸಂಚರಿಸುವವರಿಗೆ ಒಂದು ಮಾರ್ಗ, ಕಾಲ್ನಡಿಗೆಯಲ್ಲಿ ಸುರಕ್ಷಿತವಾಗಿ ಸಂಚಾರಿಸಲು ಒಂದು ಮಾರ್ಗ ನಿರ್ಮಿಸಿರುವುದು ವಿಶೇಷ.

ನಗರದ ಹೃದಯ ಭಾಗದಲ್ಲಿರುವ ನಜರ್‌ಬಾದ್‌ನ ಸರ್ಕಾರಿ ಅತಿಥಿ ಗೃಹ ಮತ್ತು ಮಹಾರಾಣಿ ಕಾಲೇಜಿನ ದ್ವಾರದ ಪಾರಂಪರಿಕ ಆರ್ಚ್ ಗೇಟ್ ಶಿಥಿಲಗೊಂಡಿದ್ದು, ಹೆಬ್ಬಾಗಿಲ ಮೇಲೆ ಅರಳಿ ಮರದ ಗಿಡಗಳು ಬೇರು ಬಿಟ್ಟಿರುವುದರಿಂದ ಸ್ವಾಗತ ಕಮಾನಿನ ಗೋಡೆಯಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಪ್ಲಾಸ್ಟಿಂಗ್ ಸಹ ಕಿತ್ತು ಬಿದ್ದಿದೆ. ಮಳೆ, ಬಿಸಿಲಿಗೆ ಇಡೀ ಆರ್ಚ್ ಗೇಟ್ ಪೇಟಿಂಗ್ಸ್, ಹಾಳಾಗಿ ಪಾಚಿ ಕಟ್ಟಿದ್ದು, ಕುಸಿದು ಬೀಳುವ ಸ್ಥಿತಿಗೆ ತಲುಪಿದೆ.
ಕೇವಲ ಗೋಡೆ ಮೇಲೆ ಬೆಳೆದಿರುವ ಗಿಡ ಕಿತ್ತು, ರೀ-ಪ್ಲಾಸ್ಟಿಂಗ್ ಸುಣ್ಣ-ಬಣ್ಣ ಬಳಿದರೆ ಸಾಕು ನೋಡಲು ಸುಂದರವಾಗಿ ಕಾಣುತ್ತದೆ. ಅಲ್ಪ ಹಣದಲ್ಲಿ ಈ ಹಳೆಯ ಕಮಾನನ್ನು ಸುರಕ್ಷಿತವಾಗಿ ಉಳಿಸಬಹುದಾಗಿದ್ದರೂ, ಇಚ್ಛಾಸಕ್ತಿ ಕೊರತೆಯಿಂದಾಗಿ ಕಮಾನು ಶಿಥಿಲಾವಸ್ಥೆಯಲ್ಲಿದೆ. ಮಹಾರಾಣಿ ಕಾಲೇಜಿನ ಬಳಿ ಇರುವ ಕಮಾನು ಮಾಯವಾಗಿಯೇ ಹೋಗಿದೆ.
ಸರ್ಕಾರಿ ಅತಿಥಿ ಗೃಹದ ಬಳಿ ವಿರೂಪವಾಗಿರುವ ಅನಾಥ ಕಮಾನು ಮೂಲಕವೇ ಸರ್ಕಾರಿ ಅತಿಥಿ ಗೃಹ ಪ್ರವೇಶಿಸಬೇಕು. ಅಲ್ಲದೆ ಮೈಸೂರು-ಬೆಂಗಳೂರು ಪ್ರಮುಖ ರಸ್ತೆಯಲ್ಲಿ ನಿತ್ಯ ಸಂಚರಿಸುವ ಸಾವಿರಾರು ಪ್ರವಾಸಿಗರಿಗೂ ಕಮಾನಿನ ದುಸ್ಥಿತಿ ಗೋಚರವಾಗುತ್ತಿದೆ. ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರು ಇಲ್ಲಿ ಓಡಾಡುತ್ತಾರೆ. ಅವರು ಪಾರಂಪರಿಕ ನಗರಿ ಪ್ರವೇಶಿಸುತ್ತಿದ್ದಂತೆ ಅನಾಥ ಸ್ಮಾರಕವೊಂದು ಕಣ್ಣಿಗೆ ಬಿದ್ದರೆ ಅವರಲ್ಲಿ ಯಾವ ರೀತಿಯ ಭಾವನೆ ಮೂಡಬಹುದೆಂದು ಚಿಂತಿಸಬೇಕಿದೆ.
ಡಿಸಿ ಕಚೇರಿ ಮತ್ತು ಗ್ರಾಮಾಂತರ ಬಸ್ ನಿಲ್ದಾಣದ ಕಮಾನು ರಕ್ಷಣೆ: ಪಾರಂಪರಿಕ ತಜ್ಞರ ಸಮಿತಿ ಹಾಗೂ ಹಿರಿಯ ನಾಗರಿಕರ ಒತ್ತಾಯದ ಮೇರೆಗೆ ಪಾಲಿಕೆ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮತ್ತು ಗ್ರಾಮಾಂತರ ಬಸ್ ನಿಲ್ದಾಣದ ಬಳಿಯಿರುವ ಕಮಾನಿಗಳ ಸುತ್ತ ಕಬ್ಬಿಣದ ಗ್ರೀಲ್‌ಗಳನ್ನು ಅಳವಡಿಸಿದ್ದರು. ಕೆಲವು ಕಡೆ ಗಾರೆ ಹಾಕಿ, ಬಣ್ಣ ಬಳಿದು ಸಂರಕ್ಷಿಸಿದ್ದಾರೆ. ಇದರಂತೆ ನಗರದ ಹೃದಯ ಭಾಗದಲ್ಲಿರುವ ನಜರ್ ಬಾದ್‌ನ ಸರ್ಕಾರಿ ಅತಿಥಿ ಗೃಹ ಮತ್ತು ಮಹಾರಾಣಿ ಕಾಲೇಜಿನ ದ್ವಾರದ ಪಾರಂಪರಿಕ ಆರ್ಚ್ ಗೇಟ್‌ಗಳನ್ನು ಸಂರಕ್ಷಿಸಬೇಕು.
* ೧೮೮೧-೮೨ರಲ್ಲಿ ೧೦ನೇ ಚಾಮರಾಜ ಒಡೆಯರ್ ಅವರಿಂದ ಕಮಾನುಗಳ ನಿರ್ಮಾಣ
* ಅರಮನೆ ನಗರಿಯ ರಸ್ತೆಗಳ ಸೌಂದರ್ಯ ಹೆಚ್ಚಿಸುವ ಕಮಾನುಗಳು
* ಈ ಕಮಾನುಗಳಲ್ಲಿ ನಾಲ್ಕು ಮಾರ್ಗಗಳಿವೆ
* ವಾಹನಗಳು ಚಲಿಸಲು ರಸ್ತೆ, ಸೈಕಲ್‌ನಲ್ಲಿ ಸಂಚರಿಸುವವರಿಗೆ ಒಂದು ಮಾರ್ಗ, ಕಾಲ್ನಡಿಗೆಯಲ್ಲಿ ಸುರಕ್ಷಿತವಾಗಿ ಸಂಚಾರಿಸಲು ಒಂದು ಮಾರ್ಗ ನಿರ್ಮಿಸಿರುವುದು ವಿಶೇಷ.
ನಮ್ಮ ಅವಧಿಯಲ್ಲಿ ಗ್ರಾಮಾಂತರ ಬಸ್ ನಿಲ್ದಾಣ ಮುಂಭಾಗ ಮತ್ತು ಡಿಸಿ ಕಚೇರಿಯಲ್ಲಿನ ಕಮಾನುಗಳಿಗೆ ಸರಳಪಳಿಗಳನ್ನು ಅಳವಡಿಸಿ ಸಂರಕ್ಷಣೆ ಮಾಡಲಾಗಿತ್ತು. ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಇರುವ ಕಮಾನಿನಲ್ಲಿ ಉದ್ಯಾನ ಮಾದರಿಯಲ್ಲಿ ಅಂದವನ್ನು ಹೆಚ್ಚಿಸಿದೆ. ಆದರೆ, ಸರ್ಕಾರಿ ಅತಿಥಿ ಗೃಹದ ಬಳಿಯಿರುವ ಕಮಾನು ತೀರ ಹಾಳಾಗಿದ್ದು, ಅಳಿವಿನ ಅಂಚಿಗೆ ತಲುಪಿದೆ.
ಪಾರಂಪರಿಕ ಕಟ್ಟಡಗಳು ಮುಂದಿನ ತಲೆಮಾರಿಗೆ ಇತಿಹಾಸ ಹೇಳುವ ಕುರುಹುಗಳಾಗಿವೆ. ಅವುಗಳನ್ನು ಉಳಿಸಿಕೊಳ್ಳಬೇಕಾಗಿರುವುದು ಅಗತ್ಯ. ಹಾಗಾಗಿ ಸ್ಥಳೀಯ ಆಡಳಿತ ಮತ್ತು ಸಂಬಂಧಪಟ್ಟವರು ಎಷ್ಟೇ ಕಷ್ಟವಾದರೂ ಅವುಗಳನ್ನು ಉಳಿಸಿಕೊಳ್ಳುವ ಮತ್ತು ಉತ್ತಮವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
– ಶಂಕರೇಗೌಡ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ.





