ಗುಂಡ್ಲುಪೇಟೆ (ಬೇಗೂರು ) : ಇಲ್ಲಿ ಪ್ರತಿವರ್ಷವೂ ಗೌರಿ-ಗಣೇಶ ಹಬ್ಬಕ್ಕೆ ಚಾಲನೆ ಸಿಗುವುದು ಗ್ರಾಮದ ದೇವಮ್ಮನಗುಡಿ ಹಾಗೂ ವೀರನಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕವೆ,

ಹೌದು, ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ಬಹತೇಕರು ಉಪ್ಪಾರ ಜನಾಂಗವೇ ವಾಸಿಸುತ್ತಿದ್ದಾರೆ. ಈ ಜನ ಗಳಿಗೆ ಮಾತ್ರ ಸೀಮಿತವಾಗಿರುವ ಈ ದೇವಾಲಯಕ್ಕೆ ಮನೆಗೊಬ್ಬರಂತೆ ಸದಸ್ಯರು ಒಗ್ಗೂಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ತಂದ ನಂತರವಷ್ಟೆ ಇಲ್ಲಿ ʼಗೌರಿ ಗಣೇಶ ಹಬ್ಬಕ್ಕೆ ಚಾಲನೆ. ಗ್ರಾಮದಿಂದ ಹೊರಹೊಲಯದಲ್ಲಿ ವೀರಗಲ್ಲನ್ನು ಪ್ರತಿಷ್ಠಾಪಿಸಲಾಗಿದ್ದು, ಹಬ್ಬದ ದಿನದಂದು ಅರಿಶಿಣ ಕುಂಕುಮಗಳಿಂದ ವೀರಗಲ್ಲನ್ನು ಸಿಂಗರಿಸಿ ಪೂಜಿಸಿ ಬಂದ ಬಳಿಕ ಭಕ್ತಾಧಿಗಳಿಗೆ ಸಿಹಿ ಪಾನಕವನ್ನು ವಿತರಿಸಲಾಗುತ್ತದೆ.

ಹೊಸ ನೀರು : ಗೌರಿ ಹಬ್ಬಕ್ಕೆ ಇಡೀ ಮನೆಯನ್ನು ಸಂಪೂರ್ಣವಾಗಿ ಶುಚಿಗೊಳಿಸಿ ಸುಣ್ಣ-ಬಣ್ಣಗಳಿಂದ ಅಲಂಕರಿಸಿ ನಂತರ ಮಹಿಳೆಯರೆಲ್ಲ ಒಗ್ಗೂಡಿ ಕೊಡಗಳನ್ನಿಡಿದು ಹೊಸ ನೀರು ತಂದು ಅದರಲ್ಲಿ ಹಬ್ಬದ ಅಡುಗೆ ಮಾಡುವುದರಂದ ಇದು ಹೊಸ ನೀರು ತರುವುದು ಎಂದೇ ಪ್ರಸಿದ್ಧಿಗೊಂಡಿದೆ. ಇಲ್ಲಿ ಗುಂಪು-ಗುಂಪಾಗಿ ಚಿಕ್ಕ ಮಕ್ಕಳು ಕೂಡ ಕೊಡಗಳನ್ನು ಹಿಡಿದು ಬರುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಇದು ಗ್ರಾಮೀಣ ಭಾಗದಲ್ಲಿ ಇನ್ನೂ ಉಳಿದುಕೊಂಡು ಬಂದಿರುವ ವಿಶೇಷ ಪದ್ಧತಿಯಾಗಿದೆ.