ಸುತ್ತೂರು: ಕಳೆದ ಆರು ದಿನಗಳಿಂದ ನಡೆಯುತ್ತಿರು ಸುತ್ತೂರು ಜಾತ್ರೆಗೆ ಇಂದು ( ಫೆಬ್ರವರಿ 11 ) ತೆರೆ ಬೀಳಲಿದ್ದು, ಇಂದು ಅಮಿತ್ ಶಾ ಕ್ಷೇತ್ರಕ್ಕೆ ಆಗಮಿಸಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅತಿಥಿಗೃಹವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸುತ್ತೂರು ಮಠದ ಕೊಡುಗೆಯನ್ನು ಶ್ಲಾಘಿಸಿ ಅದನ್ನು ತಮ್ಮ ಬಿಜೆಪಿ ಪಕ್ಷ ಸದಾ ಸ್ಮರಿಸಿಕೊಳ್ಳುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅಯೋಧ್ಯೆಯ ರಾಮಮಂದಿರದ ಬಾಲರಾಮ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಅಮಿತ್ ಶಾ ಸನ್ಮಾನಿಸಿದರು. ಅಯೋಧ್ಯೆಯಲ್ಲಿ ಸುತ್ತೂರು ಮಠದ ಶಾಖಾ ಮಠ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂಬ ಮಾಹಿತಿ ಹಂಚಿಕೊಂಡ ಅವರು ಸುತ್ತೂರು ಮಠದ ಹಿಂದಿನ 24 ಮಠಾಧೀಶರನ್ನು ನೆನಪಿಸಿಕೊಳ್ಳುತ್ತೇನೆ, ಸುತ್ತೂರು ಮಠ ನಿಸ್ವಾರ್ಥ ಸೇವೆಯನ್ನು ಮಾಡಿಕೊಂಡು ಬಂದಿದೆ. ಅಹ್ಮದಾಬಾದ್ ಕಾರ್ಯಕ್ರಮವನ್ನು ರದ್ದು ಮಾಡಿ ಇಲ್ಲಿಗೆ ಬಂದಿದ್ದೇನೆ, ಸುತ್ತೂರು ಮಠದ ಕೊಡುಗೆಯನ್ನು ಬಿಜೆಪಿ ಸದಾ ಸ್ಮರಿಸಿಕೊಳ್ಳುತ್ತದೆ ಎಂದು ತಿಳಿಸಿದರು.
ಜೆಎಸ್‌ಎಸ್ ಸಂಸ್ಥೆ ಮೂಲಕ ಶಿಕ್ಷಣ ಸೌಲಭ್ಯ ಒದಗಿಸಿರುವುದನ್ನು ಶ್ಲಾಘಿಸಿದ ಅಮಿತ್ ಶಾ 350ಕ್ಕೂ ಹೆಚ್ಚು ಜೆಎಸ್‌ಎಸ್ ಸಂಸ್ಥೆಗಳಿವೆ, ಒಂದು ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರೆ. ಅಂಗವಿಕಲರಿಗೂ ಪಾಲಿಟೆಕ್ನಿಕ್ ತೆರೆದಿರುವುದು ಪುಣ್ಯದ ಕೆಲಸ ಎಂದರು.