Mysore
30
overcast clouds

Social Media

ಗುರುವಾರ, 11 ಜೂನ್ 2026
Light
Dark

ಅಮಾನತಾಗಿರುವ ಪ್ರೊ.ನಾಗರಾಜು ಮರು ನೇಮಕ ಸದ್ಯಕಿಲ್ಲ : ಕುಲಪತಿ

ಮೈಸೂರು: ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮಾನತುಗೊಂಡಿದ್ದ ಮೈಸೂರು ವಿವಿ ಭೂಗೋಳ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಚ್.ನಾಗರಾಜ್ ಮರು ನೇಮಕ ಕುರಿತಂತೆ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲು ಮೈಸೂರು ವಿವಿ ಸಿಂಡಿಕೇಟ್ ನಿರ್ಧರಿಸಿದೆ.

ಶುಕ್ರವಾರ ಮೈಸೂರು ವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಪ್ರಭಾರ ಕುಲಪತಿ ಪ್ರೊ.ಎಚ್.ರಾಜಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಪ್ರೊ.ನಾಗರಾಜು ಅವರು ಬರೆದಿದ್ದ ಪತ್ರ ಸುದೀರ್ಘ ಚರ್ಚೆಗೆ ದಾರಿಮಾಡಿತಲ್ಲದೆ, ಸದಸ್ಯರು ಪರ-ವಿರೋಧ ಅಭಿಪ್ರಾಯಗಳನ್ನು ದಾಖಲಿಸಿದರು ಎಂದು ಗೊತ್ತಾಗಿದೆ.

ಪ್ರಭಾರ ಕುಲಪತಿ ಮಾತನಾಡಿ, ಅಮಾನತು ಅವಧಿ ೬ ತಿಂಗಳು ಮುಗಿದಿರುವುದರಿಂದ ಆದೇಶ ರದ್ದುಗೊಳಿಸಿ ಮತ್ತೆ ತಮ್ಮನ್ನು ವಿವಿಗೆ ಸೇರಿಸಿಕೊಳ್ಳಬೇಕೆಂದು ನಾಗರಾಜ್ ಅವರು ಮೈಸೂರು ವಿವಿಗೆ ಪತ್ರ ಬರೆದು ಮನವಿ ವಾಡಿದ್ದಾರೆ. ಈ ಸಂಬಂಧ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆದಿತ್ತು. ಕೆಲವರು ನಾಗರಾಜ್ ಅವರಿಗೆ ಅವಕಾಶ ನೀಡುವಂತೆ ಹಾಗೂ ಮತ್ತೆ ಕೆಲವರು ಬೇಡವೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಇದು ನ್ಯಾಯಲಯದಲ್ಲಿ ಇರುವುದರಿಂದ ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯುವ ನಿರ್ಧಾರಕ್ಕೆ ಸಿಂಡಿಕೇಟ್ ಸಭೆಯಲ್ಲಿ ಸಮ್ಮತಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರೊ. ನಾಗರಾಜ್ ಅವರು ಧಾರವಾಡ ವಿವಿ ಕುಲಸಚಿವರೂ ಆಗಿದ್ದರು. ಆದರೆ, ಇವರು ಮಾರ್ಗದರ್ಶನ ಮಾಡಿದ್ದ ಸೌಮ್ಯ ಎಂಬ ಯುವತಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಲ್ಲಿ ಸಿಕ್ಕಿ ಬಿದ್ದಳು. ಅಲ್ಲದೆ, ಆಕೆಯು ವಿಚಾರಣೆಯ ಸಂದರ್ಭದಲ್ಲಿ ಪ್ರೊ.ನಾಗರಾಜ್ ಅವರ ಹೆಸರನ್ನು ಬಹಿರಂಗಪಡಿಸಿದ್ದರು. ಇದರಿಂದ ಪ್ರೊ. ನಾಗರಾಜ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದರು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!