ಪೂರ್ಣ ಶುಲ್ಕ ಪಾವತಿ ಆದೇಶ ವಾಪಸ್ಸಿಗೆ ಆಗ್ರಹ
ಮೈಸೂರು: ವಿದ್ಯಾರ್ಥಿಗಳು ಕಾಲೇಜಿನ ಪೂರ್ಣ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬೇಕು ಎಂಬ ಸುತ್ತೋಲೆಯನ್ನು ಕೂಡಲೇ ಮೈಸೂರು ವಿಶ್ವವಿದ್ಯಾನಿಲಯ ಹಿಂಪಡೆಯಬೇಕು ಎಂದು ಆಗ್ರಹಿಸಿ ಯುವರಾಜ ಕಾಲೇಜಿನ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಳಿಗ್ಗೆ ಯುವರಾಜ ಕಾಲೇಜು ಆವರಣದಲ್ಲಿ ಜವಾಯಿಸಿದ ವಿದ್ಯಾರ್ಥಿಗಳು, ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ವಿನಾಕಾರಣ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು.
ಈ ಹಿಂದೆ ಕಾಲೇಜು ಶುಲ್ಕವನ್ನು ಕಂತಿನ ರೂಪದಲ್ಲಿ ಪಾವತಿಸಲಾಗುತ್ತಿತ್ತು. ನಂತರ ವಿದ್ಯಾರ್ಥಿವೇತನ ಬರುತ್ತಿದ್ದ ಕಾರಣ ಆ ಹಣವನ್ನು ಒಟ್ಟುಗೂಡಿಸಿ ಶುಲ್ಕವನ್ನು ಪಾವತಿಸಲಾಗುತ್ತಿತ್ತು. ಆದರೆ, ಈ ಬಾರಿ ಪ್ರವೇಶಾತಿ ಶುಲ್ಕವನ್ನು ಹೆಚ್ಚಿಸಿರುವುದಲ್ಲದೆ. ಸಂಪೂರ್ಣ ಶುಲ್ಕವನ್ನು ಪಾವತಿಸಿ ಪ್ರವೇಶಾತಿ ಪಡೆಯಬೇಕು ಎಂದು ಷರತ್ತು ವಿಧಿಸಲಾಗಿದೆ. ಬಡ ಕುಟುಂಬದಿಂದ ಬಂದ ನಾವು ದಿಢೀರನೇ ೨೦ ಸಾವಿರ ರೂ. ಶುಲ್ಕವನ್ನು ಎಲ್ಲಿಂದ ತರುವುದು ಎಂದು ಪ್ರಶ್ನಿಸಿದರು.
ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವರಿಗೆ ಮನವಿ ಪತ್ರ ಸಲ್ಲಿಸಿದ ವಿದ್ಯಾರ್ಥಿಗಳು, ಶುಲ್ಕ ಪಾವತಿಗೆ ಸಮಯವಕಾಶ ನೀಡಬೇಕು. ಕಳೆದ ವರ್ಷದ ವಿದ್ಯಾರ್ಥಿವೇತನ ನೀಡಬೇಕು ಹಾಗೂ ಕಾಲೇಜು ಆರಂಭವನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.
ಮಹೇಶ್ ಕುವಾರ್, ಮಲ್ಲೇಶ್, ಪ್ರಜ್ವಲ್, ರಮೇಶ್, ರೂಪ, ಶಂಕರ್, ಹರೀಶ್, ರಾಜೇಶ್, ಕೃಷ್ಣ ಮುಂತಾದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





