2017ರಲ್ಲಿ ಸಿದ್ದರಾಮಯ್ಯ ಮೈಸೂರಿನ ಗನ್‌ಹೌಸ್ ಸರ್ಕಲ್‌ನಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಪುತ್ಥಳಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪುತ್ಥಳಿ ನಿರ್ಮಾಣದ ವಿರುದ್ಧ ಕರ್ನಾಟಕ ಅರಸು ಸಂಘ ಹಾಗೂ ಅಖಿಲ ಭಾರತೀಯ ಕ್ಷತಿಯ ಮಹಾಸಭಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರ ವಿಭಾಗೀಯ ಪೀಠವು ನಿರ್ಮಾಣಕ್ಕೆ ತಡೆ ನೀಡಿದ್ದರು.
ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಪಾದಾಚಾರಿ ಮಾರ್ಗಗಳಲ್ಲಿ ಪುತ್ಥಳಿಗಳನ್ನು ನಿರ್ಮಾಣ ಮಾಡುವಂತಿಲ್ಲ ಎಂದು 2013ರಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದು ಹೈಕೋರ್ಟ್ ಉಲ್ಲೇಖಿಸಿತ್ತು. ಹೀಗೆ ಹೈಕೋರ್ಟ್ ವಿರೋಧವಿದ್ದರೂ ಸಹ ಇಂದು ( ಡಿಸೆಂಬರ್ 8 ) ನಗರದ ಗನ್‌ಹೌಸ್ ವೃತ್ತದಲ್ಲಿ ರಾತ್ರೋರಾತ್ರಿ ಕ್ರೇನ್ ಮೂಲಕ ದಿಢೀರನೆ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಪುತ್ಥಳಿಯನ್ನು ನಿಲ್ಲಿಸಲಾಗಿದೆ. ಸದ್ಯ ಈ ಘಟನೆಯ ಫೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಇದೇ ಗನ್ ಹೌಸ್ ಬಳಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪ್ರತಿಮೆ ಸ್ಥಾಪಿಸಲು ಅರಸು ಸಂಘ ಮೈಸೂರು ಮಹಾನಗರ ಪಾಲಿಕೆಯನ್ನು ಸಂಪರ್ಕಿಸಿತ್ತು. ಆದರೆ ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಈ ಸ್ಥಳ ಆರು ರಸ್ತೆಗಳು ಕೂಡುವ ವೃತ್ತವಾಗಿದ್ದು, ಇದು ಜನನಿಬಿಡ ಸ್ಥಳವಾಗಿದೆ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಪಾದಾಚಾರಿ ಮಾರ್ಗಗಳಲ್ಲಿ ಪುತ್ಥಳಿಗಳನ್ನು ನಿರ್ಮಾಣ ಮಾಡುವಂತಿಲ್ಲ ಎಂದು ತಡೆ ಬಂದ ಕಾರಣ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪ್ರತಿಮೆ ಸ್ಥಾಪನೆಯನ್ನು ಕೈಬಿಡಲಾಗಿತ್ತು. ಆದರೆ ಬಳಿಕ ಇದೇ ಜಾಗದಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆಯಾದ ಕಾರಣ ಅರಸು ಸಂಘ ಹಾಗೂ ಅಖಿಲ ಭಾರತೀಯ ಕ್ಷತಿಯ ಮಹಾಸಭಾ ಹೈಕೋರ್ಟ್ ಮೆಟ್ಟಿಲೇರಿತ್ತು.





