Mysore
25
overcast clouds
Light
Dark

 ಅಧಿಕಾರಿಗಳ ಸಮರ್ಪಕ ನಿರ್ವಹಣೆಯಿಂದ ಮನಮೋಹಕವಾಗಿವೆ ಕೆಲ ಪಾರಂಪರಿಕ ಕಟ್ಟಡಗಳು

ಮೈಸೂರು: ಅರಮನೆಗಳ ನಗರಿ ಮೈಸೂರಿನಲ್ಲಿ ಹೆಜ್ಜೆ ಹೆಜ್ಜೆಗೂ ಕಾಣಸಿಗುವ ಪಾರಂಪರಿಕ ಕಟ್ಟಡಗಳ ಪೈಕಿ ಬಹುತೇಕ ಕಟ್ಟಡಗಳು ದುಸ್ಥಿತಿಯಲ್ಲಿವೆ. ಇದರ ಹೊರತಾಗಿಯೂ ಅಧಿಕಾರಿಗಳ ಬದ್ಧತೆಯು ಕಾರಣದಿಂದಾಗಿ ರಾಜರ ಕಾಲದಲ್ಲಿ ನಿರ್ವಾಣವಾದ ಕೆಲವು ಕಟ್ಟಡಗಳು ಇಂದಿಗೂ ಸುಂದರವಾಗಿ ಕಂಗೊಳಿಸುತ್ತಿವೆ.

ಕಟ್ಟಡಗಳನ್ನು ತಮ್ಮ ಸುಪರ್ದಿಗೆ ಪಡೆದಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯ ಪಾರಂಪರಿಕ ಕಟ್ಟಡಗಳನ್ನು ಉತ್ತಮವಾಗಿ ಸಂರಕ್ಷಿಸಿವೆ.

ಉನ್ನತ ಶಿಕ್ಷಣ ಇಲಾಖೆಗೆ ಸೇರುವ ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಕಟ್ಟಡ, ಮೈಸೂರು ವಿವಿ ಕಾರ್ಯಸೌಧ, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರುವ ಸಿಎಫ್‌ಟಿಆರ್‌ಐ, ನಜರಬಾದ್‌ನಲ್ಲಿರುವ ಅಂಚೆ ಇಲಾಖೆ ವ್ಯಾಪ್ತಿಯ ಕಾರಂಜಿ ಅರಮನೆ ಹಾಗೂ ರಾಜ ಮನೆತನದ ಖಾಸಗಿ ಟ್ರಸ್ಟ್ ಒಡೆತನದಲ್ಲಿರುವ ಜಗನ್ಮೋಹನ ಅರಮನೆ ಕಟ್ಟಡಗಳು ಉತ್ತಮವಾಗಿ ನಿರ್ವಹಿಸಲ್ಪಟ್ಟಿವೆ.

ಜಗನ್ಮೋಹನ ಅರಮನೆ

ಪುರಾತನ ಕಟ್ಟಡಗಳ ಪಟ್ಟಿಯಲ್ಲಿ ಒಂದಾದ ಜಗನ್ಮೋಹನ ಅರಮನೆಯನ್ನು ೧೮೬೧ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ್ದರು. ೧೮೯೭ರಲ್ಲಿ ಹಳೆಯ ಮರದ ಅರಮನೆ ಬೆಂಕಿಗಾಹುತಿಯದ ಸಂದರ್ಭದಲ್ಲಿ ಹೊಸ ಅರಮನೆಯನ್ನು ಕಟ್ಟುವವರೆಗೂ ರಾಜ ಪರಿವಾರದವರ ನಿವಾಸವಾಗಿತ್ತು.
೧೯೦೨ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕ ನಡೆದದ್ದೂ ಇಲ್ಲಿಯೇ. ಆ ಸಮಯದಲ್ಲಿ ಭಾರತದ ವೈಸ್‌ರಾಯ್‌ ಮತ್ತು ರಾಜ್ಯಪಾಲರಾಗಿದ್ದ ಲಾರ್ಡ್ ಕರ್ಜನ್ ಅವರು ಸಂಭ್ರವಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇಲ್ಲಿ ಬೃಹತ್ ಕಲ್ಯಾಣ ಮಂಟಪವನ್ನು ಕಾಣಬಹುದು. ಈ ಮಂಟಪ ದರ್ಬಾರ್ ಹಾಲ್ ಎಂದೂ ಪ್ರಸಿದ್ಧವಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಸ್ಥಳವೆಂದು ಪ್ರಖ್ಯಾತಿಯಾಗಿದೆ. ಈ ಅರಮನೆಯ ಒಳಾಂಗಣವನ್ನು ವಿಶೇಷ ಸಂದರ್ಭಗಳಾದ ಸಂಗೀತ ಕಛೇರಿ, ನಾಟಕ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮೈಸೂರು ವಿಶ್ವವಿದ್ಯಾನಿಲುಂದ ಘಟಿಕೋತ್ಸವಕ್ಕಾಗಿ ಬಳಸಲಾಗುತ್ತಿತ್ತು.

ಮೊದಲಿಗೆ ಈ ಕಟ್ಟಡವೂ ಶಿಥಿಲಾವಸ್ಥೆಯಲ್ಲಿತ್ತು. ನಂತರ ರಾಜ ವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ಖುದ್ದು ಆಸಕ್ತಿ ವಹಿಸಿ ಕಟ್ಟಡದ ದುರಸ್ತಿಗೆ ಮುಂದಾದರು. ಪಾರಂಪರಿಕ ಪದ್ಧತಿಯಂತೆಯೇ ಚುರಕಿ ಗಾರೆಯನ್ನು ಬಳಸಿ ಅರಮನೆಯನ್ನು ದುರಸ್ತಿಗೊಳಿಸಿದರು. ಇದೀಗ ಜಗನ್ಮೋಹನ ಅರಮನೆ ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದೆ.

ಪಾರಂಪರಿಕ ಕಟ್ಟಡಗಳ ದುರಸ್ತಿ ಕಾಮಗಾರಿಯಲ್ಲಿ ಅನುಭವವುಳ್ಳ ಶರಶ್ಚಂದ್ರ ಎಂಬವರ ಉಸ್ತುವಾರಿಯಲ್ಲಿ ಚುರಕಿ ಗಾರೆಯನ್ನು ಬಳಸಿ ಕಾಮಗಾರಿ ನಡೆಸಲಾಗಿದೆ. ದುರಸ್ತಿ ಕೆಲಸ ಇನ್ನೂ ಸ್ವಲ್ಪ ಬಾಕಿ ಇದ್ದು, ಆದಷ್ಟು ಶೀಘ್ರ ಪೂರ್ಣಗೊಳ್ಳಲಿದೆ. -ಎಂ.ಜಿ.ನರಸಿಂಹನ್, ಅಧೀಕ್ಷಕರು, ಜಗನ್ಮೋಹನ ಅರಮನೆ.

ಆಯುರ್ವೇದ ಆಸ್ಪತ್ರೆ ಕಟ್ಟಡ

ಈ ಕಟ್ಟಡವನ್ನು ೧೯೩೦ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಟ್ಟಿಸಿದ್ದು, ಆಗಿನ ಕಾಲದಲ್ಲಿ ಯಾರಾದರೂ ಅನಾರೋಗ್ಯಕ್ಕೀಡಾದಲ್ಲಿ ತುರ್ತು ಚಿಕಿತ್ಸೆ ಲಭ್ಯವಿರಲಿಲ್ಲ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಅಲೋಪತಿ ವೈದ್ಯರಿದ್ದರು. ಸಾಕಷ್ಟು ಮಂದಿ ಆಯುರ್ವೇದ ವೈದ್ಯರಿದ್ದರು.

ಹೀಗಾಗಿ ಅಂದು ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ಮೈಸೂರು ಸುತ್ತಮುತ್ತಲಿನ ಜನರಿಗೆ ಆಯುರ್ವೇದ ಚಿಕಿತ್ಸೆ ದೊರಕಲಿ ಎಂಬ ಉದ್ದೇಶದಿಂದ ಕೃಷ್ಣರಾಜ ಒಡೆಯರ್ ಅವರೊಂದಿಗೆ ಚರ್ಚಿಸಿ, ಅಂದು ಮೈಸೂರು ಭಾಗದಲ್ಲಿ ಉತ್ತಮ ವೈದ್ಯರೆನಿಸಿಕೊಂಡಿದ್ದ ಪಂಡಿತ್ ವೈದ್ಯರತ್ನ ಗುಂಡ್ಲುಪಂಡಿತ್ ಲಕ್ಷ್ಮಣಾಚಾರ ಅವರ ಹೆಸರಿನಲ್ಲಿ ಅಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಸ್ವಾತಂತ್ರ್ಯಾ ನಂತರ ಕಟ್ಟಡವನ್ನು ಸರ್ಕಾರಕ್ಕೆ ವಹಿಸಲಾಗಿತ್ತು.
ನಿರ್ವಹಣೆಯ ಕೊರತೆಯಿಂದ ಕಟ್ಟಡವು ಸುಸ್ಥಿತಿಯಲ್ಲಿ ಇರಲಿಲ್ಲ. ನಂತರ ಕೇಂದ್ರ ಸರ್ಕಾರದ ನೆರವಿನಿಂದ ಕಟ್ಟಡವನ್ನು ಸಂರಕ್ಷಿಸಲಾಗಿದೆ. ಇದೀಗ ಕಟ್ಟಡ ನಿರ್ವಹಣೆಯು ಉತ್ತಮವಾಗಿದೆ. ಇಂದು ಸಾವಿರಾರು ಮಂದಿ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಟ್ಟಡವನ್ನು ೧.೯೦ ಕೋಟಿ ರೂ. ವೆಚ್ಚದಲ್ಲಿ ದುರಸ್ತಿಗೊಳಿಸಲಾಯಿತು. ಪಾರಂಪರಿಕ ಕಟ್ಟಡಗಳ ದುರಸ್ತಿಯ ಬಗ್ಗೆ ಅನುಭವ ಇರುವ ಅಶೋಕ್ ಕುಮಾರ್ ಎಂಬವರು ಒಂದು ವರ್ಷದ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಈ ಭಾಗದ ಸಂಸದರು ಹಾಗೂ ಶಾಸಕರ ನೆರವಿನಿಂದ ಕಟ್ಟಡವು ದುರಸ್ತಿಗೊಂಡಿದೆ. ಮುಂದೆ ನಮ್ಮ ಇಲಾಖೆಯ ಅನುದಾನದಲ್ಲಿ ಕಟ್ಟಡವನ್ನು ಉತ್ತಮವಾಗಿ ಸಂರಕ್ಷಿಸಲಾಗುವುದು. -ಗಜಾನನಹೆಗಡೆ, ಪ್ರಾಂಶುಪಾಲರು, ಸರ್ಕಾರಿ ಆಯುರ್ವೇದ ಆಸ್ಪತ್ರೆ.

ಸಿಎಫ್‌ಟಿಆರ್‌ಐ ಕಚೇರಿ

೧೯೧೦ರಲ್ಲಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಂಗಿ ಚೆಲುವಾಜಮ್ಮಣ್ಣಿ ಅವರಿಗಾಗಿ ಕಟ್ಟಿಸಿಕೊಟ್ಟಿದ್ದ ಪಾರಂಪರಿಕ ಕಟ್ಟಡದಲ್ಲಿ ಪ್ರಸ್ತುತ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಈ ಕಟ್ಟಡವನ್ನು ಚೆಲುವಾಂಬ ವ್ಯಾನ್ಶನ್ ಎಂದೇ ಗುರುತಿಸಲಾಗುತ್ತದೆ.
ಅಂದು ಈ ಕಟ್ಟಡ ನಿರ್ವಾಣಕ್ಕೆ ತಗುಲಿದ ವೆಚ್ಚ ೪ ಲಕ್ಷ ರೂ. ಮಾತ್ರ. ಅದರಲ್ಲಿಯೂ ಚೆಲುವಾಜಮ್ಮಣ್ಣಿ ಅವರ ಪತಿ ಕಾಂತರಾಜೇ ಅರಸ್ ಅವರು ಕೃಷ್ಣರಾಜ ಒಡೆಯರ್ ಅವರ ಜೊತೆ ಮಾತುಕತೆ ನಡೆಸಿ ಕಟ್ಟಡ ನಿರ್ಮಾಣ ವೆಚ್ಚ ೪ ಲಕ್ಷ ರೂ. ಮೀರಬಾರದು ಎಂದು ಷರತ್ತು ವಿಧಿಸಿದ್ದರಂತೆ. ಹೀಗಾಗಿ ಅಷ್ಟೇ ಹಣವನ್ನು ಬಳಸಿ ಕಟ್ಟಡವನ್ನು ನಿರ್ಮಿಸಲಾಗಿದೆ.

ಸ್ವಾತಂತ್ರ್ಯಾ ನಂತರ ೧೯೪೮ರಲ್ಲಿ ಈ ಕಟ್ಟಡವನ್ನು ರಾಜಮನೆತನದವರು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದರು. ಎರಡು ವರ್ಷಗಳ ನಂತರ ಅಲ್ಲಿ ಸಿಎಫ್‌ಟಿಆರ್‌ಐ ತನ್ನ ಚಟುವಟಿಕೆುಂನ್ನು ಆರಂಭಿಸಿತು. ಇದೀಗ ಕಟ್ಟಡದ ನಿರ್ವಹಣೆಯನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಎಫ್‌ಟಿಆರ್‌ಐ ಮಾಡುತ್ತಿದೆ.

ಕಟ್ಟಡದ ಮುಂಭಾಗ ಆಕರ್ಷಣೀಯವಾದ ಉದ್ಯಾನ ನಿರ್ಮಿಸಲಾಗಿದೆ. ಕಟ್ಟಡದ ಸುತ್ತಮುತ್ತ ಮರಗಿಡಗಳು ಸೊಂಪಾಗಿ ಬೆಳೆದು ನಿಂತಿವೆ. ಕಟ್ಟಡದ ಹೊರಭಾಗ ಇಂದಿಗೂ ಆಕರ್ಷಣೀಯವಾಗಿದೆ. ನಿರ್ವಹಣೆ ಹಾಗೂ ಸಂರಕ್ಷಣೆ ಉತ್ತಮವಾಗಿದೆ.

ಆಹಾರ ಸಂಸ್ಕರಣೆ, ತಯಾರಿಕೆ ಹಾಗೂ ಸಂಶೋಧನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಗಾರಗಳಿಗೆ ಈ ಕಟ್ಟಡ ಸಾಕ್ಷಿಯಾಗಿದೆ. ದೇಶ-ವಿದೇಶಗಳ ಹಲವಾರು ಗಣ್ಯರು ಹಾಗೂ ಸಚಿವರು ಇಲ್ಲಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾರಂಪರಿಕ ಕಟ್ಟಡದ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಸುವಾರು ೫೦ ಮಂದಿ ಕೆಲಸಗಾರರನ್ನು ನಿರ್ವಹಣೆಗೆ ನೇಮಕ ಮಾಡಿಕೊಳ್ಳಲಾಗಿದೆ. ಕಟ್ಟಡದ ತಾರಸಿಯ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳುತ್ತಿದ್ದೇವೆ. ಕಟ್ಟಡ ನಿರ್ವಹಣೆಗೆ ವಾರ್ಷಿಕ ೬೫ ಲಕ್ಷ ರೂ. ನಷ್ಟು ಖರ್ಚಾಗುತ್ತದೆ. ಈಗಷ್ಟೇ ೧ ಕೋಟಿ ರೂ. ವ್ಯಯಿಸಿ ಕಟ್ಟಡಕ್ಕೆ ಪೈಂಟಿಂಗ್ ಮಾಡಿಸಲಾಗಿದೆ. ಹಳೆಯ ಚರಂಡಿ ವ್ಯವಸ್ಥೆಯನ್ನು ೧ ಕೋಟಿ ರೂ. ವೆಚ್ಚದಲ್ಲಿ ಬದಲಾವಣೆ ಮಾಡಲಾಗಿದೆ.
-ವಿ.ಎಚ್.ಗಂಗಾಧರಪ್ಪ, ಹಿರಿಯ ಪ್ರಧಾನ ವಿಜ್ಞಾನಿ, ಸಿಎಫ್‌ಟಿಆರ್‌ಐ

ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ

ಕಾರಂಜಿ ಮ್ಯಾನ್ಸ್ನ್‌ ಎಂದೇ ಕರೆಯಲಾಗುವ ಈ ಕಟ್ಟಡವನ್ನು ೨ನೇ ಚಾಮರಾಜ ಒಡೆಯರ್ ಅವರು ೧೯೦೨ರಲ್ಲಿ ಕೃಷ್ಣರಾಜಮ್ಮಣ್ಣಿ ಅವರಿಗಾಗಿ ಕಟ್ಟಿಸಿದ್ದರು. ಆದರೆ, ಅವರು ಕ್ಷಯರೋಗದಿಂದ ಮೃತಪಟ್ಟರು. ಅವರ ಮೂವರು ಮಕ್ಕಳೂ ಮೃತಪಟ್ಟರು. ಇದರಿಂದಾಗಿ ಕಟ್ಟಡ ಕಾಮಗಾರಿ ವಿಳಂಬವಾಯಿತು. ೧೯೧೪ರಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ ರಾಜಮನೆತನದವರು ಅಲ್ಲಿ ವಾಸಿಸುತ್ತಿದ್ದರು. ಕಟ್ಟಡ ಕಾಮಗಾರಿಗೆ ತಗುಲಿದ ವೆಚ್ಚ ೪.೨೯ ಲಕ್ಷ ರೂ.ಗಳು.

೩೧.೫ ಎಕರೆ ವಿಸ್ತೀರ್ಣದ ಪ್ರದೇಶದಲ್ಲಿರುವ ಈ ಕಟ್ಟಡವನ್ನು ೧೯೬೪ರಲ್ಲಿ ರಾಜಮನೆತನದವರಾದ ದೇಶರಾಜೇ ಅರಸ್ ಅವರಿಂದ ಅಂಚೆ ಇಲಾಖೆ ೨೪ ಲಕ್ಷ ರೂ. ನೀಡಿ ಖರೀದಿಸಿ ಈ ಕಟ್ಟಡದಲ್ಲಿ ಅಂಚೆ ತೆರಪಿನ ಶಿಕ್ಷಣ ಕೇಂದ್ರವನ್ನು ಆರಂಭಿಸಿತು.

ಇದೀಗ ಇಲಾಖೆಯು ಕಟ್ಟಡ ನಿರ್ವಹಣೆಗೆಂದು ಓರ್ವ ಅಧಿಕಾರಿಯನ್ನು ನಿಯೋಜನೆ ಮಾಡಿದೆ. ಕಟ್ಟಡ ದುರಸ್ತಿ ಹಾಗೂ ಸಂರಕ್ಷಣೆಗೆ ಯಾವುದೇ ಕೊರತೆಯಾಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾಗಿ ಕಟ್ಟಡ ಹಾಗೂ ಅದರ ಸುತ್ತಲಿನ ಪರಿಸರವನ್ನು ಸುಂದರ ಹಾಗೂ ಸ್ವಚ್ಛವಾಗಿ ನಿರ್ವಹಣೆ ಮಾಡಲಾಗುತ್ತಿದೆ.

ಕಟ್ಟಡದ ಒಳಭಾಗವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಲಾಗಿದೆ. ಈ ಹಿಂದೆ ಹಾಕಿದ್ದ ನೆಲಹಾಸುಗಳೇ ಇಂದಿಗೂ ಕಂಗೊಳಿಸುತ್ತಿವೆ. ಕಟ್ಟಡದ ಸುತ್ತ ಸುಂದರವಾದ ಉದ್ಯಾನ ನಿರ್ಮಾಣ ಮಾಡಲಾಗಿದೆ. ಅದರ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ