ಮೈಸೂರು: ಮಾಜಿ ಮುಖ್ಯಮಂತ್ರಿ ಹಾಗೂ ಕಾಮಗ್ರೆಸ್‌ನ ಹಿರಿಯ ನಾಯಕ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಪಕ್ಷ ಸೂಚಿಸಿದರೆ ಅವರ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧವಿದ್ದೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಪಕ್ಷ ನನಗೆ ಯಾವುದೇ ಸವಾಲು ಕೊಟ್ಟರೂ ಅದನ್ನು ನಿಭಾಯಿಸುತ್ತೇನೆ. ಪಕ್ಷದ ತೀರ್ಮಾನವೇ ಅಂತಿಮ’ ಎಂದು ಪರೋಕ್ಷವಾಗಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆಸುವ ಇಚ್ಛೆಯನ್ನು ವ್ಯಕ್ತಪಡಿಸಿದರು.
‘ನಾನು ವರುಣಾ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಸಂಘಟನೆ ಮಾಡುತ್ತಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಪಕ್ಷವು ಹೆಚ್ಚು ಸ್ಥಾನ ಪಡೆಯಲು ಹೋರಾಟ ಮಾಡುತ್ತಿದ್ದೇವೆ. ಸಂಘಟನೆ ಬಲಪಡಿಸುತ್ತಿದ್ದೇವೆ’ ಎಂದರು. ‘ನರೇಂದ್ರ ಮೋದಿ ಎಂಬುದು ಕೇವಲ ಅಲೆ ಅಲ್ಲ, ಅದೊಂದು ಸುನಾಮಿ. ಕಾಂಗ್ರೆಸ್‌ನವರಿಗೆ ಇದು ಇನ್ನೂ ಅರ್ಥವಾಗಿಲ್ಲ. ಏಕೆಂದರೆ ಆ ಪಕ್ಷದವರು ಭ್ರಮೆಯಲ್ಲಿದ್ದಾರೆ. ಆದ್ದರಿಂದಲೇ, ಗುಜರಾತ್ ಫಲಿತಾಂಶದ ಪರಿಣಾಮವು ಕರ್ನಾಟಕದ ಚುನಾವಣೆ ಮೇಲೆ ಆಗುವುದಿಲ್ಲ ಎಂದು ಹೇಳುತ್ತಿದೆ. ಮುಂಬರುವ ಚುನಾವಣೆ ನಂತರ ಕಾಂಗ್ರೆಸ್‌ಗೆ ಉತ್ತರ ಸಿಗಲಿದೆ’ ಎಂದು ಪ್ರತಿಕ್ರಿಯಿಸಿದರು.