ಹನೂರು : ತಾಲೂಕಿನ ಶಾಗ್ಯ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಆರ್ ನರೇಂದ್ರ ಭೂಮಿ ಪೂಜೆ ಸಲ್ಲಿಸಿದರು.
ಈ ವೇಳೆ ಶಾಸಕ ಆರ್ ನರೇಂದ್ರ ಮಾತನಾಡಿ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿ 25 ಕೋಟಿ ಅನುದಾನದಲ್ಲಿ ಹನೂರು ವಿಧಾನಸಭಾ ಕ್ಷೇತ್ರಾದ್ಯಂತ ಅಭಿವೃದ್ಧಿ ಮಾಡಲಾಗುತ್ತಿದೆ. ಬಹು ದಿನಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಬಂಡಳ್ಳಿ ತೆಳ್ಳನೂರು ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿ ಪ್ರಾರಂಭವಾಗಬೇಕಿದೆ.
ಈ ವಿಶೇಷ ಅನುದಾನದಲ್ಲಿ ಸಾಮಾನ್ಯ ವರ್ಗದವರ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಲೋಕನಹಳ್ಳಿ, ಪಾಳ್ಯ, ಸತ್ತೆಗಾಲ, ಬಂಡಳ್ಳಿ, ಕೌದಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಈಗಾಗಲೇ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಶಾಗ್ಯ ಗ್ರಾಮದ ವೀರಶೈವ ಹಾಗೂ ನಾಯಕರ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 18 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಚಾಲನೆ ನೀಡಿರುವ ಕಾಮಗಾರಿಗಳು ಇನ್ನು ಎರಡು ತಿಂಗಳುಗಳಲ್ಲಿ ಮುಗಿಯಲಿದೆ ಎಂದು ತಿಳಿಸಿದರು.
ಶಾಗ್ಯ ಗ್ರಾಮಕ್ಕೆ ದಿ ರಾಜುಗೌಡರು ಶಾಸಕರಾಗಿದ್ದ ಸಂದರ್ಭದಲ್ಲಿ ಎಲ್ಲಾ ವರ್ಗದವರಿಗೆ ನಿವೇಶನ ಕೊಡಿಸಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದೇ ನಿಟ್ಟಿನಲ್ಲಿ ನಾನು ಸಹ ಈ ಹೊಸ ಬಡಾವಣೆ ಸೇರಿದಂತೆ ಇನ್ನಿತರ ಬಡಾವಣೆಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಈ ಬಾರಿಯು ನೀವು ನನಗೆ ಆಶೀರ್ವದಿಸಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ಉಳಿದ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಅದ್ದೂರಿ ಮೆರವಣಿಗೆ: ಶಾಗ್ಯ ಗ್ರಾಮಕ್ಕೆ ಆಗಮಿಸಿದ ಶಾಸಕ ಆರ್ ನರೇಂದ್ರ ರವರನ್ನು ವೀರಶೈವ, ನಾಯಕ, ಆದಿ ಜಾಂಬವ ಸಮಾಜದ ಯುವಕ ಮುಖಂಡರುಗಳು ಅದ್ದೂರಿ ಸ್ವಾಗತ ಕೋರಿದರು. ಇದೇ ಸಂದರ್ಭದಲ್ಲಿ ಶಾಸಕ ಆರ್ ನರೇಂದ್ರ ಶಾಗ್ಯ ಗ್ರಾಮದಲ್ಲಿರುವ ನಡೆದಾಡುವ ದೇವರು, ಕಾಯಕಯೋಗಿ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮಿಗಳ ಪುತ್ತಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಗಿರೀಶ್, ಶಾಗ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರೋಗ್ಯಮ್ಮ, ಸದಸ್ಯರಾದ ಜಾನ್ ಪೌಲ್, ಶರತ್, ತಾಪಂ ಮಾಜಿ ಸದಸ್ಯ ಜವಾದ್ ಅಹಮದ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನ್, ಮುಖಂಡರುಗಳಾದ ಶಾಗ್ಯ ಬಸವರಾಜು, ಉದ್ದನೂರು ಸಿದ್ದರಾಜು, ಮಲ್ಲೇಶ್, ನಂಜುಂಡ ನಾಯಕ, ಸುಂದರ್, ವಿನಯ್, ಕೆಂಪರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.