ಮಳವಳ್ಳಿ: ತಾಲ್ಲೂಕಿನ ಬಿ.ಜಿ.ಪುರ ಹೋಬಳಿ ವಾಸುವಳ್ಳಿ ಬೋರೆ ಬಳಿ ಟಿವಿಎಸ್ ಸ್ಕೂಟರ್‌ಗೆ ಕ್ಯಾಂಟರ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವ್ಯಕ್ತಿಗಳು ತೀವ್ರ ಗಾಯಗೊಂಡು ದಾರುಣವಾಗಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಈ ಘಟನೆಯಲ್ಲಿ ಹಳದಾಸನಹಳ್ಳಿ ಗ್ರಾಮದ ಶಿವಮಲ್ಲಪ್ಪ (60) ಹಾಗೂ ಕಗ್ಗಲಿಪುರದ ನಂಜುಂಡಸ್ವಾಮಿ ಸಾವನ್ನಪ್ಪಿರುವ ರೈತರು.
ಇವರಿಬ್ಬರೂ ಟಿವಿಎಸ್ ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ವಾಸುವಳ್ಳಿ ಬೊರೆ ಬಳಿ ಕ್ಯಾಂಟರ್ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ತೂರಿಕೊಂಡು ಹೋಗಿ ರಸ್ತೆಯ ಬದಿಗೆ ಬಿದಿದ್ದಾರೆ, ಸ್ಕೂಟರ್ ಕ್ಯಾಂಟರ್ ಒಳಗಡೆಗೆ ಸಿಲುಕಿ ನಜ್ಜುಗುಜ್ಜಾಗಿದೆ. ಸ್ಥಳದಲ್ಲೆ ಹಳದಾಸನಹಳ್ಳಿ ಗ್ರಾಮದ ಶಿವಮಲ್ಲಪ್ಪ ಮೃತಪಟ್ಟರೆ, ಕಗ್ಗಲಿಪುರ ನಂಜುಂಡಸ್ವಾಮಿ ಮಂಡ್ಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಬೆಳಕವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬೆಳಕವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತರ ಶವ ಪರೀಕ್ಷೆ ವೇಳೆ ಶಾಸಕ ಡಾ.ಕೆ.ಅನ್ನದಾನಿ ಆಗಮಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.