- ಹಬ್ಬ ಆಚರಿಸಿದರೆ ಸಾವು ಸಂಭವಿಸುವ ಭಯ.
- ವಿಘ್ನ ನಿವಾರಕನೇ ಇಲ್ಲಿ ಜನರಿಗೆ ವಿಘ್ನ.
ಚಾಮರಾಜನಗರ: ದೇಶದಾದ್ಯಂತ ಬಹಳ ಶ್ರದ್ಧಾ ಭಕ್ತಿಯಿಂದ, ಸಡಗರ ಸಂಭ್ರಮದಿಂದ ಆಚರಣೆ ಮಾಡುವ ಗೌರಿ ಗಣೇಶ ಹಬ್ಬವೇ ಇಲ್ಲೊಂದು ಸಮುದಾಯಕ್ಕೆ ತೊಡಕಾಗಿದ್ದು, ಹಬ್ಬ ಆಚರಿಸಿದರೆ ಸಾವು ಸಂಭವಿಸುವ ಭಯದಿಂದ ಹಬ್ಬ ಆಚರಿಸುವುದನ್ನೇ ಕೈ ಬಿಟ್ಟಿದ್ದಾರೆ.
ನಗರದ ಉಪ್ಪಾರ ಸಮುದಾಯದ ಕೆಲವು ಕುಟುಂಬ ವರ್ಗದವರು ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡುವುದಿಲ್ಲ, ಇದು ಅಚ್ಚರಿ ಎನಿಸಿದರೂ ಇದು ಸತ್ಯ ಮನೆಯಲ್ಲಿ ಅನ್ನ, ಸ್ನಾನವನ್ನು ಮಾಡದ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ. ವಿಘ್ನ ವಿನಾಯಕನನ್ನು ಇಡೀ ದೇಶವೇ ಬರಮಾಡಿಕೊಂಡು ಸಂಭ್ರಮಪಟ್ಟರೇ, ಇವರು ಮಾತ್ರ ಈ ಹಬ್ಬದಿಂದ ದೂರವೇ ಉಳಿಯುತ್ತಾರೆ. ಹಬ್ಬದ ಸಂಭ್ರಮದಿಂದ ಉಪ್ಪಾರ ಸಮುದಾಯದ ಶೇ.೭೦ ಕ್ಕೂ ಹೆಚ್ಚು ಮಂದಿ ದೂರ ಉಳಿಯುತ್ತಾರೆ.
ಗೌರಿ-ಗಣೇಶ ಹಬ್ಬ ಮಾಡುವುದಿರಲಿ, ರುಚಿಯಾದ ಊಟವನ್ನೂ ಸಹ ಈ ದಿನದಂದು ಸೇವಿಸುವುದಿಲ್ಲ. ಕೆಲವರು ಮುದ್ದೆ, ಉಪ್ಪುಸಾರು ಸೇವಿಸಿದರೆ, ಇನ್ನೂ ಕೆಲವರು ಉಪ್ಪುಸಾರಿಗೆ ಒಗ್ಗರಣೆಯನ್ನೂ ಹಾಕದೇ ಸಪ್ಪೆ ಸಾರಿನಲ್ಲೇ ಮುದ್ದೆ ತಿನ್ನುತ್ತಾರೆ. ಕೆಲವರು ಇದನ್ನು ಧಿಕ್ಕರಿಸಿ ಅನ್ನ- ಸಾರು ಮಾಡಿದ್ರೆ, ಅದನ್ನು ತಿನ್ನುವ ಮೊದಲೇ ಯಾರಾದರೂ ಮೃತಪಡುತ್ತಾರಂತೆ. ಆಹಾರದಲ್ಲಿ ಹುಳು ಕಾಣಿಸಿಕೊಂಡ ಪ್ರಸಂಗಗಳು ನಡೆದಿದ್ದರಿಂದ ಹಬ್ಬದ ಗೋಜಿಗೆ ಹೋಗದೇ ಮುದ್ದೆ- ಉಪ್ಪು ಸಾರಿಗಷ್ಟೇ ತೃಪ್ತಿ ಪಡುತ್ತಿದ್ದಾರೆ.
ಹಬ್ಬ ಆಚರಿಸದ ಕಾರಣ: ಗೌರಿ ಹಬ್ಬ ಆಚರಿಸಿದರೇ ಮಕ್ಕಳಿಗೆ ಕೆಡುಕಾಗುವ ಭಯ ಈ ಸಮುದಾಯದಲ್ಲಿ ರೂಢಿಗತವಾಗಿ ನಡೆದುಕೊಂಡು ಬಂದಿದೆ. ಹಬ್ಬ ಆಚರಣೆಗೆ ಮುಂದಾದಗಲೆಲ್ಲಾ ಮಕ್ಕಳ ಸಾವು, ಮನೆಯಲ್ಲಿ ಹಿರಿಯರ ಸಾವು ಸಂಭವಿಸುವುದರಿಂದ ಹಬ್ಬದ ಆಚರಣೆಯನ್ನೇ ಈ ಸಮುದಾಯ ಕೈ ಬಿಟ್ಟಿದೆ. ಹಿರಿಯರ ಸಂಪ್ರದಾಯ ಇಂದೂ ಕೂಡ ಹಾಗೆ ಮುಂದುವರೆದಿದ್ದು, ಹಬ್ಬದ ಮಾರನೇ ದಿನ ಸ್ನಾನ ಮಾಡಿಕೊಂಡು ಗಣಪನಿಗೆ ಪೂಜೆ ಸಲ್ಲಿಸುತ್ತಾರೆ. ಇನ್ನೂ, ಕೆಲವರು ಮೂರು ದಿನ ಅನ್ನ ಮಾಡದೇ, ದೇಗುಲಕ್ಕೆ ಹೋಗದೆ, ಒಗ್ಗರಣೆ ಹಾಕುವುದನ್ನು ನಿಲ್ಲಿಸುತ್ತಾರೆ.