Mysore
23
moderate rain
Light
Dark

ಸಾಹಸಸಿಂಹನ ಸ್ಮಾರಕ ಲೋಕಾರ್ಪಣೆಗೆ ದಿನಗಣನೆ

ಎಚ್‌ ಡಿ ಕೋಟೆ ಹಾಲಾಳು ಬಳಿ ಸ್ಮಾರಕ ಸಿದ್ಧ, ಡಿಸೆಂಬರ್‌ 18ರಂದು ಸಿಎಂ ಉದ್ಘಾಟನೆ, 13 ವರ್ಷಗಳ ಹೋರಾಟ ಕೊನೆಗೂ ಫಲಪ್ರದ

ಮೈಸೂರು: ಡಾ.ರಾಜ್ ಕುಮಾರ್,ವಿಷ್ಣುವರ್ಧನ್, ಅಂಬರೀಷ್ ಕನ್ನಡ ಚಿತ್ರರಂಗ ಕಂಡ ಮೂವರು ಮೇರು ನಟರು. ಈ ಮೂವರೂ ಕೂಡ ಈಗ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಆದರೆ ಡಾ.ರಾಜ್ ಕುಮಾರ್ ಮತ್ತು ಅಂಬರೀಷ್ ಅವರಿಗಿರುವಂತೆ ವಿಷ್ಣುವರ್ಧನ್ ಅವರಿಗೂ ಸ್ಮಾರಕವೊಂದನ್ನು ನಿರ್ಮಿಸುವ ಅಭಿಮಾನಿಗಳ ಕನಸು ಕೊನೆಗೂ ಸಾಕಾರಗೊಳ್ಳುವ ದಿನ ಬಂದಿದೆ. ಡಿಸೆಂಬರ್‌ 18ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿನಲ್ಲಿ ವಿಷ್ಣು ಸ್ಮಾರಕವನ್ನು ಉದ್ಘಾಟಿಸಿ, ಸಾಹಸ ಸಿಂಹನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

 

2009ರ ಡಿ.30ರಂದು ಮೈಸೂರಿನಲ್ಲಿ ದಿಢೀರ್‌ ಎಂದು ಬಾರದ ಲೋಕಕ್ಕೆ ಪಯಣಿಸಿದ ವಿಷ್ಣು ಅವರು ಮೃತಪಟ್ಟು ಈಗ 13 ವರ್ಷಗಳು ತುಂಬುತ್ತಿವೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಅವರ ಅಂತ್ಯಸಂಸ್ಕಾರ ನಡೆದರೂ ನಾನಾ ಕಾರಣಗಳಿಂದಾಗಿ ಅಲ್ಲಿ ಸ್ಮಾರಕ ನಿರ್ಮಿಸುವ ಕೆಲಸ ಕೈಗೂಡಲಿಲ್ಲ. ಪತ್ನಿ, ಹಿರಿಯ ಅಭಿನೇತ್ರಿ ಭಾರತಿ ವಿಷ್ಣುವರ್ಧನ್‌ ಅವರು ವಿಷ್ಣು ಸ್ಮಾರಕಕ್ಕಾಗಿ ದೀರ್ಘ ಹೋರಾಟವನ್ನೇ ನಡೆಸಬೇಕಾಗಿ ಬಂದಿದ್ದು ಈಗ ಇತಿಹಾಸ. ಹಿರಿಯ ನಟ ಬಾಲಣ್ಣ ಅವರು ಕಟ್ಟಿದ ಅಭಿಮಾನ್‌ ಸ್ಟುಡಿಯೋದ ಒಡೆತನಕ್ಕಾಗಿ ಅವರ ಕುಟುಂಬದ ಮಧ್ಯೆ ತಕರಾರು ಏರ್ಪಟ್ಟಿದ್ದು ಪ್ರಕರಣ ಇನ್ನೂ ನ್ಯಾಯಲಯದಲ್ಲಿದೆ. ಸ್ವತ: ಅಂಬರೀಶ್‌ ಅವರು ತಮ್ಮ ಕುಚಿಕು ಗೆಳೆಯನ ಸ್ಮಾರಕಕ್ಕಾಗಿ ಸಂಧಾನ ನಡೆಸಿದರೂ ಈ ಪ್ರಯತ್ನ ಕೈಗೂಡಿರಲಿಲ್ಲ. ಇದರಿಂದ ನೊಂದ ಭಾರತಿ ವಿಷ್ಣುವರ್ಧನ್ ವಿಷ್ಣು ಅವರಿಗೆ ಪ್ರಿಯವಾದ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣಕ್ಕೆ ಮನಸ್ಸು ಮಾಡಿದರು.

2016ರಲ್ಲಿ ಭಾರತಿ ಅವರ ಮನವಿಗೆ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಚ್.ಡಿ.ಕೋಟೆ ತಾಲ್ಲೂಕಿನ ಹಾಲಾಳು ಗ್ರಾಮದಲ್ಲಿ ಐದು ಎಕರೆ ಜಮೀನು ಮಂಜೂರು ಮಾಡಿದರು. ಆದರೆ ಆರಂಭದಲ್ಲಿ ಇಲ್ಲೂ ಕೆಲವು ವಿಘ್ನಗಳು ಎದುರಾದವು. ಆದರೆ ಭಾರತಿ ಅವರ ಕನಸಿಗೆ ಒತ್ತಾಸೆಯಾಗಿ ನಿಂತ ಮೈಸೂರು ಜಿಲ್ಲಾಡಳಿತ ಭೂ ಮಂಜೂರಾತಿಯನ್ನು ಅಂತಿಮಗೊಳಿಸಿತು. 2019 ರಲ್ಲಿ ಯಡಿಯೂರಪ್ಪ ಸರಕಾರ ಡಾ.ವಿಷ್ಣುವರ್ಧನ್ ಪ್ರತಿಷ್ಠಾನಕ್ಕೆ 11 ಕೋಟಿ ರೂ. ಅನುದಾನ ಬಿಡುಗಡೆಗೊಳಿಸುವ ಕಾಮಗಾರಿಗೆ ಚಾಲನೆ ನೀಡಿತು.

ಎಚ್‌.ಡಿ ಕೋಟೆ ಉದ್ಭೂರು ರಸ್ತೆಗೆ ಹೊಂದಿಕೊಂಡಿರುವ ಹಾಲಾಳು ಗ್ರಾಮದಲ್ಲಿ ವಿಷ್ಣು ಸ್ಮಾರಕದ ಕೆಲಸ ಭರದಿಂದ ಸಾಗಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಸಾಹಸ ಸಿಂಹನ ಅವರ 13ನೇ ಪುಣ್ಯತಿಥಿಗೆ ಮುನ್ನ ಉದ್ಘಾಟನೆಯಾಗಲಿದೆ. ದಿಲ್ಲಿಯ ರಾಜಪಥದಲ್ಲಿ ಇತ್ತೀಚೆಗೆ ಅನಾವರಣಗೊಂಡ ನೇತಾಜಿ ಪ್ರತಿಮೆಯ ರೂವಾರಿ, ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯಲ್ಲಿ ಆರು ಅಡಿ ಎತ್ತರದ ವಿಷ್ಣು ದಾದಾ ಪ್ರತಿಮೆ ಪ್ರತಿಷ್ಠಾಪನೆಗೆ ಸಿದ್ಧವಾಗುತ್ತಿದೆ.

ವಿಷ್ಣು ಸ್ಮಾರಕಕ್ಕಾಗಿ ಸರ್ಕಾರ ಸುಮಾರು 11 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು 2021 ರಿಂದ ಕಾಮಗಾರಿ ಕೆಲಸ ಆರಂಭವಾಗಿದೆ. ಬೆಂಗಳೂರಿನ ಎಂ.೯ ಕಂಪೆನಿಯ ನಿಶ್ಚಲ್ ಸ್ಮಾರಕದ ರೂಪುರೇಶೆ ಸಿದ್ಧಪಡಿಸಿದ್ದಾರೆ. ಕೃಷ್ಣ ಶಿಲೆಯಲ್ಲಿ ಕೆತ್ತಲಾದ ವಿಷ್ಣುವಿನ ಪ್ರತಿಮೆ ಸುತ್ತಲೂ ವೃತ್ತಾಕಾರದ ಫೋಟೋ ಗ್ಯಾಲರಿ, ಗ್ಯಾಲರಿಯ ಇಬ್ಬದಿಯಲ್ಲಿಯೂ ವಿಷ್ಣುವರ್ಧನ್ ಅಭಿನಯದ ಸಿನಿಮಾಗಳ ಡಿಜಿಟಲ್ ಪೋಸ್ಟರ್ ಪ್ರದರ್ಶನ ಇರಲಿದೆ.

ಒಟ್ಟಾರೆ ಎರಡು ಎಕರೆಯಲ್ಲಿ ಸ್ಮಾರಕ, ಮಲ್ಟಿಫ್ಲೆಕ್ಸ್ ಚಿತ್ರಮಂದಿರ ಮಾದರಿಯಲ್ಲಿ ಹವಾನಿಯಂತ್ರಿತ ಥಿಯೇಟರ್, ಪುರುಷ- ಮತ್ತು ಮಹಿಳಾ ಕಲಾವಿದರ ಡ್ರೆಸ್ಸಿಂಗ್ ಕೊಠಡಿ, ಸುಸಜ್ಜಿತ ಶೌಚಾಲಯ, ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಪ್ರತಿಷ್ಠಾನ ಅಭಿವೃದ್ಧಿಪಡಿಸಲಿದೆ. ಮುಂಭಾಗ ಸುಂದರವಾದ ಕಾರಂಜಿ ನಿರ್ಮಾಣವಾಗಲಿದ್ದು ಸ್ಮಾರಕದ ಹೊರ ಆವರಣದಲ್ಲಿ ಸಸ್ಯೋದ್ಯಾನ ನಿರ್ಮಿಸಿ ವಿವಿಧ ಪ್ರಭೇದದ ಹೂವಿನ ಗಿಡಗಳನ್ನು ವೃತ್ತಾಕಾರದಲ್ಲಿ ನೆಟ್ಟು ಬೆಳೆಸಲಾಗುತ್ತಿದೆ.

ಪೊಲೀಸ್ ವಸತಿ ಮೂಲಭೂತ ಸೌಕರ್ಯಗಳ ನಿಗಮಕ್ಕೆ ಈ ನಿರ್ಮಾಣದ ಟೆಂಡರ್ ನೀಡಲಾಗಿದ್ದು ಸರಕಾರ ಈಗಾಗಲೇ ರೂ.10 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧೀನದಲ್ಲಿ ಡಾ.ವಿಷ್ಣುವರ್ಧನ್ ಪ್ರತಿಷ್ಠಾನ ಇದರ ಉಸ್ತುವಾರಿ ನೋಡಿಕೊಳ್ಳಲಿದೆ. ಡಾ.ವಿಷ್ಣು ಸ್ಮಾರಕ ಸಮಿತಿಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ಉಪ ಸಮಿತಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ.

ಬೆಂಗಳೂರಿನಲ್ಲಿ ಡಾ.ರಾಜ್‌ಕುಮಾರ್ ಸ್ಮಾರಕ೨.೨೦ ಎಕರೆಯಲ್ಲಿ, ಅಂಬರೀಷ್ ಸ್ಮಾರಕ೧.೩೪ ಎಕರೆಯಲ್ಲಿ ನಿರ್ಮಾಣಗೊಂಡಿದ್ದರೆ ವಿಷ್ಣುವರ್ಧನ್ ಸ್ಮಾರಕ ೫ ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಮೈಸೂರಿನ ಮತ್ತೊಂದು ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುವ ನಿರೀಕ್ಷೆ ಇದೆ. ಅಭಿಮಾನಿಗಳು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಇನ್ನುಳಿದ ಮೂರು ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಭಾರತಿ ವಿಷ್ಣುವರ್ಧನ್‌ ಅವರ ನವೀಕೃತ ಮನೆಯ ಗೃಹಪ್ರವೇಶಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಷ್ಣು ಸ್ಮಾರಕವನ್ನು ಶೀಘ್ರವೇ ಲೋಕಾರ್ಪಣೆಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದರು.

ಇದೀಗ ಡಿ.18 ರಂದು ಸ್ಮಾರಕ ಲೋಕಾರ್ಪಣೆಗೊಳಿಸಲು ಅಧಿಕೃತವಾಗಿ ದಿನಾಂಕ ನಿಗದಿಪಡಿಸಲಾಗಿದೆ. ಸ್ಮಾರಕದ ಕಾಮಗಾರಿ ಭರದಿಂದ ನಡೆದಿದೆ. ಆದಷ್ಟು ಬೇಗ ಸ್ಮಾರಕ ಸಿದ್ಧವಾಗಿ ಜನರ ವೀಕ್ಷಣೆಗೆ ಮುಕ್ತವಾಗಲಿ ಎನ್ನುವುದು ವಿಷ್ಣು ಅಭಿಮಾನಿಗಳ ಆಶಯವಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ