ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಒಂದೇ ದಿನ ಸುರಿದ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದೆ. ನಿರಂತರ ಸುರಿದ ಮಳೆಯಿಂದ ವಿವಿಧೆಡೆ ರಸ್ತೆ ಹಾಗೂ ಸೇತುವೆ ಸಂಪರ್ಕ ಕಡಿತಗೊಂಡಿದೆ.
ಊರುಬೈಲು, ಚೆಂಬು, ಸಂಪಾಜೆ, ಕೊಯನಾಡು ಭಾಗದಲ್ಲಿ ಮಳೆಯಿಂದ ತೀವ್ರ ಹಾನಿ ಉಂಟಾಗಿದೆ. ಕೊಯನಾಡು ಕಿಂಡಿ ಅಣೆಕಟ್ಟೆಯಲ್ಲಿ ಮತ್ತೆ ಮರಗಳ ರಾಶಿ ಬಂದು ನಿಂತಿದ್ದು, ಪ್ರವಾಹ ನೀರು ಸಮೀಪದ ೭ ಮನೆಗಳಿಗೆ ನುಗ್ಗಿದೆ. ಬೆಳಿಗ್ಗೆ ಸುಮಾರು ೪ ಗಂಟೆ ವೇಳೆಗೆ ಮನೆಗಳಿಗೆ ದಿಡೀರ್ ನೀರು ನುಗ್ಗಿದ್ದರಿಂದ ಮನೆ ಮಂದಿ ಸಂಕಷ್ಟ ಎದುರಿಸುವಂತಾಯಿತು. ಗ್ರಾಮದ ಗುಡ್ಡಪ್ಪ ಎಂಬವರ ಮನೆಯಲ್ಲಿದ್ದ ಸಾಕಿದ್ದ ಹಂದಿ ಹಾಗೂ ಕೋಳಿ ಪ್ರವಾಹ ನೀರಿನಲ್ಲಿ ಕೊಚ್ಚಿ ಹೋಗಿದೆ.
ಈ ಬಾರಿ ಪಯಸ್ವಿನಿ ನದಿ ಉಕ್ಕಿ ಹರಿದು ಮೂರನೇ ಬಾರಿಗೆ ಕೊಯನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಘಟನೆಗೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಕಿಂಡಿ ಆಣೆಕಟ್ಟೇ ಕಾರಣವೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರವಾಹ ಹಿನ್ನೆಲೆ ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್, ತಹಶೀಲ್ದಾರ್ ಮಹೇಶ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಪಾಜೆಯಿಂದ ಊರುಬೈಲು ಗ್ರಾಮಕ್ಕೆ ಹೋಗುವ ಸೇತುವೆ ಹಾನಿಗೀಡಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಕರಿಕೆ ಮತ್ತು ಭಾಗಮಂಡಲ ರಸ್ತೆಯಲ್ಲಿ ಬೃಹತ್ ಬರೆ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸರಣಿ ಭೂಕಂಪನದ ಚೆಂಬು ಗ್ರಾಮದಲ್ಲಿ ಅತ್ಯಧಿಕ ಮಳೆಯಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಮತ್ತು ವಣಚಲು ಗ್ರಾಮದಲ್ಲಿ ಧಾರಾಕಾರ ಮಳೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ವಣಚಲುವಿನಲ್ಲಿ ದಾಖಲೆಯ ೯.೩೦ ಇಂಚು ಮಳೆಯಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ ಒಟ್ಟು ೨೨೭.೭೭ ಇಂಚು ಮಳೆ ಸುರಿದಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ೮.೩೦ ಇಂಚು ಮಳೆಯಾಗಿದೆ. ಮರ ಸಹಿತ ಗುಡ್ಡ ಕುಸಿದ ಪರಿಣಾಮ ವಣಚಲು ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಮಣ್ಣು ತೆರವು ಕಾರ್ಯಾಚರಣೆ ನಡೆಯಿತು.
ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಭರ್ತಿಯಾಗಿದ್ದು, ನದಿ ನೀರು ತುಂಬಿ ಹರಿದು ಶ್ರೀಭಗಂಡೇಶ್ವರ ದೇವಾಲಯದ ಆವರಣವನ್ನು ತಲುಪಿತ್ತು. ನಾಪೋಕ್ಲು ಮತ್ತು ಮಡಿಕೇರಿ ರಸ್ತೆಯ ಮೇಲೂ ನೀರು ಹರಿಯಿತು. ಭಾನುವಾರ ಹಗಲಿನಲ್ಲಿ ನದಿಯ ನೀರು ಕ್ಷೀಣಿಸಿತ್ತು, ಆದರೆ ಸೋಮವಾರ ಬೆಳಗ್ಗೆ ಪ್ರವಾಹದ ರೀತಿಯಲ್ಲಿ ನದಿ ಹರಿಯುತ್ತಿದ್ದ ದೃಶ್ಯ ಕಂಡು ಬಂತು. ರಾತ್ರಿ ಪೂರ್ತಿ ದಾಖಲೆಯ ಮಳೆ ಸುರಿದಿದೆ.
ಮಡಿಕೇರಿ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಲೆವೆಡೆ ಬರೆಕುಸಿದಿದ್ದು, ಮಣ್ಣು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಕಳೆದ ೧೨ ಗಂಟೆಗಳ ಕಾಲ ಸುರಿದ ಮಹಾಮಳೆಗೆ ಗ್ರಾಮೀಣರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕ ಮಳೆಯಿಂದ ಕಾಫಿ, ಕರಿಮೆಣಸು, ಭತ್ತ ಮತ್ತು ಅಡಿಕೆ ಬೆಳೆಗೆ ಹಾನಿಯಾಗಿದೆ.