ನ.2ರಿಂದ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ
ಮೈಸೂರು: ಉದ್ಯೋಗ ಸೃಷ್ಟಿ ನೆಪದಲ್ಲಿ ರಾಜ್ಯದ ಫಲವತ್ತಾದ ಕೃಷಿ ಭೂಮಿ, ನೀರು, ವಿದ್ಯುತ್ ಅನ್ನು ಖಾಸಗಿ ಕಂಪೆನಿಗಳಿಗೆ ನೀಡಲು ನಡೆಸುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ವಿರೋಧಿಸಿ ನ.2ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸವಾವೇಶ ಆಯೋಜಿಸಲಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕದ ಸಂಯೋಜಕ ಬಡಗಲಪುರ ನಾಗೇಂದ್ರ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ.2ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆyuತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ರಾಜ್ಯಕ್ಕೆ ಹೊಸತಲ್ಲ. ಈ ಹಿಂದೆಯೂ ಇಂತಹ ಸಮಾವೇಶ ನಡೆದಿದೆ. ಸಾಮಾನ್ಯವಾಗಿ ಚುನಾವಣೆಗಳು ಸಮೀಪಿಸುತ್ತಿರುವ ಸಮಯದಲ್ಲಿ ಇಂತಹ ಸಮಾವೇಶ ಸಂಘಟಿಸಿ, ಇಷ್ಟು ಲಕ್ಷ ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗುತ್ತಿದೆ. ಇದರ ಫಲವಾಗಿ ಇಷ್ಟು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಇದರಿಂದ ನಮ್ಮ ರಾಜ್ಯದ ಯುವ ಸಮೂಹಕ್ಕೆ ಉದ್ಯೋಗ ಸಿಗುತ್ತದೆ ಎಂದು ಅಬ್ಬರದ ಪ್ರಚಾರ ಮಾಡಲಾಗುತ್ತದೆ. ಆ ಮೂಲಕ ಈ ರೀತಿ ಭ್ರಮೆ ಸೃಷ್ಟಿಸಲಾಗುತ್ತದೆ ಎಂದು ಆರೋಪಿಸಿದರು.
ವಾಸ್ತವದಲ್ಲಿ ಇಂತಹ ಹೂಡಿಕೆದಾರರ ಸಮಾವೇಶಗಳಿಂದ ರಾಜ್ಯದ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಅನುಕೂಲವಾಗುವ ಬದಲು ಕಾರ್ಪೊರೇಟ್ ಕಂಪೆನಿಗಳು, ಏಜೆಂಟರಿಗೆ ಲಾಭವಾಗುತ್ತದೆ. ಅಲ್ಲದೆ, ಒಂದು ಕಡೆ ರೈತರು ತಮ್ಮ ಭೂಮಿ ಕಳೆದುಕೊಳ್ಳುತ್ತಾರೆ. ಕಾರ್ಮಿಕರ ಶೋಷಣೆ ಇನ್ನಷ್ಟು ಹೆಚ್ಚುತ್ತದೆ. ಹೀಗಾಗಿ ಇಂತಹ ಹೂಡಿಕೆದಾರರ ಸಮಾವೇಶ ಅಗತ್ಯವಿಲ್ಲ. ಬಲವಂತವಾಗಿ ಭೂಮಿ ಕಸಿದುಕೊಳ್ಳಬಾರದು, ರೈತರು, ದಲಿತರ ಸ್ವಾಧೀನದಲ್ಲಿರುವ ಕೃಷಿ ಭೂಮಿ ಸಕ್ರಮಗೊಳಿಸಬೇಕು, ಅತಿವೃಷ್ಟಿಯಿಂದ ನಷ್ಟಕ್ಕೆ ಗುರಿಯದವರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು, ವಿದ್ಯುತ್ ಕ್ಷೇತ್ರದ ಖಾಸಗೀಕರಣ ನಿಲ್ಲಬೇಕು ಎಂದು ಒತ್ತಾಯಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನಾ ಸವಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.