Mysore
23
overcast clouds
Light
Dark

ಹುಲಿ ದಾಳಿಗೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ:ಎ.ಎಸ್.ಪೊನ್ನಣ್ಣ

ಮಡಿಕೇರಿ: ಪೊನ್ನಂಪೇಟೆ ವ್ಯಾಪ್ತಿಯ ಕೆ.ಬಾಡಗ ಗ್ರಾಮದಲ್ಲಿ ಇಬ್ಬರು ಹುಲಿ ದಾಳಿಗೆ ಬಲಿಯಾಗಲು ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣವೆಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಚೇತನ್ ಎಂಬಾತನನ್ನು ಹುಲಿ ಕೊಂದು ಹಾಕಿದೆ. ಸೋಮವಾರ ಬೆಳಿಗ್ಗೆ ವೃದ್ಧರೊಬ್ಬರನ್ನು ಬಲಿ ತೆಗೆದುಕೊಂಡಿದೆ. ಅರಣ್ಯ ಅಧಿಕಾರಿಗಳು ಚೇತನ್ ಮೃತಪಟ್ಟಾಗಲೇ ಎಚ್ಚೆತ್ತುಕೊಂಡಿದ್ದರೆ ವೃದ್ಧನ ಜೀವ ಉಳಿಯುತ್ತಿತ್ತು. ಅರಣ್ಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರತಿನಿಧಿಗಳು ಅಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲು ಆದೇಶ ಮಾಡದೆ, ಭಾವನಾತ್ಮಕ ಭಾಷಣಗಳನ್ನು ಮಾಡುತ್ತಿದ್ದಾರೆ. ಹುಲಿಗಳನ್ನು ಗುಂಡು ಹೊಡೆದು ಕೊಲ್ಲುವ ಮಾತುಗಳನ್ನಾಡುತ್ತಾರೆ. ಹುಲಿಯನ್ನು ಕೊಂದು ಜನರು ಜೈಲಿಗೆ ಹೋಗಬೇಕೆ? ಎಂದು ಪ್ರಶ್ನಿಸಿದರು.
ಜನಪ್ರತಿನಿಧಿಗಳು ನಾಟಕ ಮಾಡುವುದನ್ನು ಬಿಡಬೇಕು, ಜನರ ಜೀವನದೊಂದಿಗೆ ಚೆಲ್ಲಾಟ ಆಡಬಾರದು. ಹುಲಿಯನ್ನು ಕೊಂದ ತಕ್ಷಣ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ. ಹುಲಿ ಕಾಡು ಬಿಟ್ಟು ನಾಡಿಗೆ ಏಕೆ ಬರುತ್ತಿದೆ ಎನ್ನುವ ಬಗ್ಗೆ ಅಧ್ಯಯನ ನಡೆಯಬೇಕಿದೆ. ಕಾಡುಗಳನ್ನು ನಾಶ ಮಾಡಿ ತೋಟಗಳನ್ನೇ ಕಾಡೆಂದು ಅರಣ್ಯ ಅಧಿಕಾರಿಗಳು ಪ್ರತಿಬಿಂಬಿಸುತ್ತಿದ್ದಾರೆ. ಹುಲಿ ಎರಡು ಅಮಾಯಕ ಜೀವಗಳನ್ನು ಬಲಿ ಪಡೆದ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಅರಣ್ಯ ಅಧಿಕಾರಿಗಳು ತಮ್ಮ ಕಡತದಲ್ಲಿ ಉಲ್ಲೇಖಿಸಿದ್ದಾರೆ. ಇದು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಪೊನ್ನಣ್ಣ ಆರೋಪಿಸಿದರು.
ಸಂಬಂಧಪಟ್ಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ ವನ್ಯಜೀವಿಗಳ ದಾಳಿ ಕುರಿತು ಉನ್ನತ ಮಟ್ಟದ ಸಭೆ ನಡೆಸಬೇಕು. ಹುಲಿ ಉಪಟಳ ತಡೆಯುವಲ್ಲಿ ವಿಫಲರಾಗಿರುವ ಅರಣ್ಯ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೆ ಒಳಪಡಿಸಬೇಕು, ಕಠಿಣ ಶಿಕ್ಷಯಾಗುವಂತೆ ನೋಡಿಕೊಳ್ಳಬೇಕು ಮತ್ತು ಹುಲಿ ಉಪಟಳದ ವಿರುದ್ಧ ಅರಣ್ಯ ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ ಕಾನೂನು ಘಟಕದ ಜಿಲ್ಲಾಧ್ಯಕ್ಷ ಶ್ರೀಧರ್ ನಾಯರ್‌, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಪ್ರಮುಖರಾದ ಕಿರಣ್ ಪೂವಯ್ಯ, ಬಲ್ಯಾಟಂಡ ಕೌಶಿಕ್ ಹಾಗೂ ಶರೀನ್ ಗಿರೀಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ