ಆಹ್ವಾನ ಪತ್ರಿಕೆಯಲ್ಲಿ ತಿದ್ದುಪಡಿ, ಕೆಲ ಕವಿಗಳ ಆಯ್ಕೆಗೆ ಅಕ್ಷೇಪ
ಮೈಸೂರು : ಕೆಲ ದಿನಗಳ ಹಿಂದೆ ನಾಡಿನ ನಾನಾ ಟ್ರಸ್ಟ್ ಗಳಿಗೆ ನೇಮಕ ಮಾಡುವಾಗ ಕಳೆದ ವರ್ಷವೇ ಮೃತಪಟ್ಟಿದ್ದ ರಾಜೇಶ್ವರಿ ತೇಜಸ್ವಿ ಅವರನ್ನು ನೇಮಿಸಿ ಎಡವಟ್ಟು ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಈ ಬಾರಿ ದಸರಾ ಮುಖ್ಯ ಕವಿ ಗೋಷ್ಠಿಗೆ ಮೃತಪಟ್ಟ ಕವಿ ಹೆಸರು ಸೇರಿಸಿ ಮತ್ತೊಂದು ಮಹಾ ಎಡವಟ್ಟು ಮಾಡಿದೆ.
ಮೂರು ವರ್ಷಗಳ ಹಿಂದೆಯೇ ಮೃತಪಟ್ಟಿರುವ ಹಿರಿಯ ಕವಿ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ ಜಿಕೆ ರವೀಂದ್ರ ಕುಮಾರ್ ಅವರ ಹೆಸರನ್ನು ಸೇರಿಸಲಾಗಿದೆ. ಇದು ಆಹ್ವಾನ ಪತ್ರಿಕೆಯಲ್ಲಿ ಮುದ್ರಣವಾಗಿ ವೈರಲ್ ಆಗಿದೆ, ಇದು ತಿಳಿತಿದ್ದಂತೆ ದಸರಾ ಕವಿಗೋಷ್ಠಿ ಉಪಸಮಿತಿ ಅವರ ಹೆಸರು ಬದಲಿಸಿ ಹೊಸ ಆಹ್ವಾನ ಪತ್ರಿಕೆ ರವಾನಿಸಿದೆ. ಈ ಕುರಿತು ಸಮಿತಿ ಕಾರ್ಯಾಧ್ಯಕ್ಷ ಪ್ರೊಫೆಸರ್ ಎಂಜಿ ಮಂಜುನಾಥ್ ಅವರನ್ನು ವಿಚಾರಿಸಿದರೆ ಅದು ಅಧಿಕೃತ ಆಹ್ವಾನ ಪತ್ರಿಕೆಯಲ್ಲ. ಮೊದಲು ಹೆಸರಿತ್ತು ಅದನ್ನು ತೆಗೆಸಿ ಹೊಸದನ್ನು ನೀಡಲಾಗಿದೆ ಎನ್ನುವ ಉತ್ತರ ನೀಡುತ್ತಾರೆ. ಆದರೆ ರವೀಂದ್ರ ಕುಮಾರ್ ಹೆಸರನ್ನು ನೀಡಿದವರು ಯಾರು ಎಂದು ಕೇಳಿದರೆ ಸಮರ್ಪಕ ಉತ್ತರ ಅವರಿಂದ ಬರಲಿಲ್ಲ.
ಈ ನಡುವೆ ಮುಖ್ಯ ಕವಿಗೋಷ್ಠಿಗೆ ಕೆಲವರನ್ನು ಆಯ್ಕೆ ಮಾಡುವುದು ಚರ್ಚೆಗೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ಎಷ್ಟೇ ಅಕಾಡೆಮಿ ಸದಸ್ಯ ಸ್ಥಾನದಿಂದ ಬದಲಾಯಿಸಿದವರನ್ನು ಕವಿಗೋಷ್ಠಿಗೆ ಹಾಕಲಾಗಿದೆ ಕೆಲವರ ಹೆಸರನ್ನು ತಪ್ಪಾಗಿ ಮುದ್ರಿಸಲಾಗಿದೆ.
2007 ರಲ್ಲೂ ಕವಿಗೋಷ್ಠಿಗೆ ಆಯ್ಕೆ ಮಾಡುವಾಗ ಹೀಗೆಯೇ ಎಡವಟ್ಟು ಮಾಡಿ ಇಡೀ ಕವಿಗೋಷ್ಠಿ ತನ್ನ ಮಹತ್ವವನ್ನೇ ಕಳೆದುಕೊಂಡಿತ್ತು. ಅನಂತರ ಎಚಿತ ಸರ್ಕಾರ ಕವಿಗೋಷ್ಠಿ ಉಪ ಸಮಿತಿಗೆ ಅರ್ಹರು ಹಾಗೂ ಅನುಭವಿಗಳನ್ನು ನೇಮಿಸಿ ಸರಿಪಡಿಸಿತ್ತು. ಮತ್ತೆ ಈ ಬಾರಿ ಕವಿಗಳ ಆಯ್ಕೆಯಲ್ಲಿ ಆಗಿರುವ ಎಡವಟ್ಟು ಕವಿಗೋಷ್ಠಿ ಮತ್ತೆ ಹಳೆ ಹಾದಿ ಹಿಡಿಯಲಿದೆಯೇ ಎನ್ನುವ ಚರ್ಚೆ ಹುಟ್ಟು ಹಾಕಿದೆ.
ಇಷ್ಟಲ್ಲದೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಕವಿಗೋಷ್ಠಿ ಸಮಿತಿಯವರು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ವರ್ಗಾಯಿಸಿದ್ದಾರೆ. ಏಕೆಂದರೆ ಆಹ್ವಾನ ಪತ್ರಿಕೆಯಲ್ಲಿ ಪ್ರತಾಪ್ ಸಿಂಹ, ಚಾಮರಾಜನಗರ ಲೋಕಸಭಾ ಸದಸ್ಯ ಎಂದಿರುವುದು ಇಂತಹ ಅನುಮಾನ ಹುಟ್ಟು ಹಾಕುವಂತೆ ಮಾಡಿದೆ.