ಮೈಸೂರು : ಸಿದ್ದರಾಮಯ್ಯ ಸರ್ಕಾರದಲ್ಲಿ ಪುತ್ರನ ಹಸ್ತಕ್ಷೇಪ ಜೋರಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪುಷ್ಠಿ ನೀಡುವಂತೆ ಯತೀಂದ್ರ ಸಿದ್ದರಾಮಯ್ಯ ಅವರು ಸಿಎಂ ಜೊತೆ ಮಾತನಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ.
ಮೈಸೂರಿನ ಚಟ್ನಳ್ಳಿ ಪಾಳ್ಯ ಗ್ರಾಮದಲ್ಲಿ ನೆನ್ನೆ ನಡೆದ ಜನಸಂಪರ್ಕ ಸಭೆಯಲ್ಲಿ ಜನರ ಅಹವಾಲು ಸ್ವೀಕರಿಸುವ ವೇಳೆ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಂದೆ ಸಿಎಂ ಸಿದ್ದರಾಮಯ್ಯ ಜೊತೆ ನಡೆಸಿರುವ ಫೋನ್ ಸಂಭಾಷಣೆ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ತಂದೆಯೋಟ್ಟಿಗೆ ಫೋನ್ ನಲ್ಲಿ ಮಾತನಾಡಿರುವ ಯತೀಂದ್ರ ಆರಂಭದಲ್ಲಿ ಅಪ್ಪ ಹೇಳಿ ಎಂದು ಮಾತು ಶುರು ಮಾಡಿದ್ದಾರೆ. ಈ ವೇಳೆ ಸಿದ್ದರಾಮಯ್ಯನವರು ವಿವೇಕಾನಂದ ಯಾರು ಎಂದು ಪ್ರಶ್ನಿಸಿದ್ದಾರೆ. ಆಗ ಯತೀಂದ್ರ, ಮಹದೇವ್ ಅವರಿಗೆ ಫೋನ್ ನೀಡುವಂತೆ ತಮ್ಮ ತಂದೆಗೆ ಹೇಳುತ್ತಾರೆ. ಅವರಿಗೆ ಫೋನ್ ಕೊಟ್ಟ ತಕ್ಷಣ ಅವರನ್ನು ತರಾಟೆಗೆ ತೆಗೆದುಕೊಂಡ ಯತೀಂದ್ರ, ನಾನು ಕೊಟ್ಟಿದ್ದನ್ನು ಬಿಟ್ಟು ಬೇರೆ ಯಾವುದೆಂದು ಪ್ರಶ್ನಿಸಿದ್ದಾರೆ. ನನಗೆ ಗೊತ್ತಿಲ್ಲ ನಾನು ಕೊಟ್ಟಿರುವ ನಾಲ್ಕೈದು ಮಾತ್ರ ಮಾಡಿ ಎಂದು ಸೂಚನೆ ನೀಡಿದ್ದಾರೆ.
ಸಧ್ಯ ಯತೀಂದ್ರ ಅವರ ಈ ಫೋನ್ ಸಂಭಾಷಣೆಯ ವಿಡಿಯೋ ಭಾರೀ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.