ನವದೆಹಲಿ: ಉತ್ತರ ಭಾರತದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮುಂದುವರೆದಿರುವಂತೆಯೇ ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ದೆಹಲಿಯಲ್ಲಿ ಅಕ್ಷರಶಃ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರಿ ಮಳೆಯಿಂದಾಗಿ ದೆಹಲಿಯಲ್ಲಿ ಯಮುನಾ ನದಿ ಉಕ್ಕಿ ಹರಿಯುತ್ತಿದ್ದು, ನೀರಿನ ಮಟ್ಟ 207.25 ಮೀಟರ್‌ಗೆ ತಲುಪಿದೆ. ಇದರೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟದ ಸಮೀಪಕ್ಕೆ ಯಮುನಾ ನದಿ ಹರಿವು ತಲುಪಿದ್ದು, ಯಮುನಾ ನದಿ ನೀರಿನ ಮಟ್ಟ 1978ರಲ್ಲಿ 207.49 ಮೀಟರ್‌ಗೆ ಏರಿಕೆಯಾಗಿದ್ದದ್ದು ಈವರೆಗಿನ ದಾಖಲೆಯಾಗಿದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಹೇಳಿದೆ.
The water level of the Yamuna River, which is still in spate in Delhi recorded at 207.55 metres, which is the highest ever.
— ANI (@ANI) July 12, 2023
ಇಂದು ಬೆಳಗ್ಗೆ 4ರ ಹೊತ್ತಿಗೆ ದೆಹಲಿಯ ಹಳೇ ರೈಲು ಸೇತುವೆ ಬಳಿ ನೀರಿನ ಮಟ್ಟ 207 ಮೀಟರ್ ಗಡಿ ದಾಟಿತ್ತು. 8ರ ಹೊತ್ತಿಗೆ 207.25 ಮೀಟರ್‌ಗೆ ಏರಿಕೆಯಾಗಿದೆ. ಇದು 2013ರ ಬಳಿಕದ ಗರಿಷ್ಠ ಪ್ರಮಾಣ ಆಗಿದೆ. ಆಗ ನಿರಿನ ಮಟ್ಟ 207.32 ಮೀಟರ್‌ಗೆ ತಲುಪಿತ್ತು. ಇಂದು ಮಧ್ಯಾಹ್ನ 12ರ ವೇಳೆಗೆ ಯಮುನಾ ನದಿ ನೀರಿನ ಮಟ್ಟ 207.35 ಮೀಟರ್‌ಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ ಮತ್ತು ಏರಿಕೆ ಮುಂದುವರಿಯಲಿದೆ ಎಂಬುದಾಗಿ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ ಮಾಹಿತಿ ನೀಡಿದೆ.
ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ
ಕಳೆದ ಮೂರು ದಿನಗಳಿಂದ ನದಿ ನೀರಿನ ಪ್ರಮಾಣ ತೀವ್ರವಾಗಿ ಏರಿಕೆಯಾಗಿದ್ದು, ಭಾನುವಾರ ಬೆಳಗ್ಗೆ 11ರ ವೇಳೆಗೆ 203.14 ಮೀಟರ್‌ಗೆ ತಲುಪಿದ್ದ ನೀರು, ಸೋಮವಾರ ಸಂಜೆ 5ರ ಹೊತ್ತಿಗೆ 205.4 ಮೀಟರ್ ಹಾಗೂ ಅದೇ ದಿನ ರಾತ್ರಿ ವೇಳೆಗೆ 206 ಮೀಟರ್ ದಾಟಿತ್ತು. ಅನೇಕ ವಸತಿ ಪ್ರದೇಶಗಳಲ್ಲಿ 2–3 ಅಡಿಗಳಷ್ಟು ನೀರು ನಿಂತಿದ್ದು, ಜನರು ಸಂಕಷ್ಟಕ್ಕೀಡಾಗಿದ್ದಾರೆ. ನದಿ ನೀರು ಅಪಾಯದ ಮಟ್ಟ (205.33 ಮೀಟರ್ ಗಡಿ) ದಾಟಿರುವುದರಿಂದ, ತಗ್ಗುಪ್ರದೇಶಗಳಲ್ಲಿ ವಾಸಿಸುತ್ತಿರುವವರನ್ನು ಸ್ಥಳಾಂತರಿಸಲಾಗಿದೆ. ಪ್ರವಾಹಪೀಡಿತ ಪ್ರದೇಶಗಳ ಮೇಲೆ ಕಣ್ಗಾವಲಿರಿಸುವ ಸಂಬಂಧ 16 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.
ಸಿಎಂ ಕೇಜ್ರಿವಾಲ್ ತುರ್ತು ಸಭೆ
ಇನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಧಿಕಾರಿಗಳ ಸಭೆ ನಡೆಸಿ, ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿರುವುದು ಹಾಗೂ ನಗರದ ವಿವಿಧೆಡೆ ನೀರು ನಿಂತು ಉಂಟಾಗಿರುವ ಸಮಸ್ಯೆ ಕುರಿತು ಚರ್ಚಿಸಿದ್ದಾರೆ. ಭಾರಿ ಮಳೆ ಕಾರಣ ಹರಿಯಾಣದ ಹಥಿನಿಕುಂಡ ಬ್ಯಾರೇಜ್‌ಗೆ ಒಳಹರಿವು ಹೆಚ್ಚಿದೆ. ಹಾಗಾಗಿ, ಬ್ಯಾರೇಜ್‌ನಿಂದ ನೀರು ಬಿಟ್ಟಿರುವ ಕಾರಣ ದೆಹಲಿಯಲ್ಲಿ ಯಮುನಾ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ಉಂಟಾಗಿರುವ ತೊಂದರೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ.