ಮೈಸೂರು : ರಾಜ್ಯದ ಅಣೆಕಟ್ಟುಗಳ ಸುರಕ್ಷತೆ ಕುರಿತು ಸರ್ಕಾರ ತಾಂತ್ರಿಕ ಸಮಿತಿ ರಚಿಸಿದ್ದು, ಈ ಸಮಿತಿ ವರದಿ ಬಂದ ನಂತರ ಅಗತ್ಯ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು‘ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಅಣೆಕಟ್ಟಿನ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಆರ್‌ಎಸ್ ಅಣೆಕಟ್ಟಿನ ನಂತರ ಕಬಿನಿಯಲ್ಲಿ ಬಾಗಿನ ಅರ್ಪಣೆ ಮಾಡಿದ್ದೇವೆ. ಈ ಮಧ್ಯೆ ಎರಡು ವರ್ಷ ಅಣೆಕಟ್ಟು ಭರ್ತಿ ಆಗಿರಲಿಲ್ಲ. ಈ ವರ್ಷ ತುಂಬಿದೆ. ಕಬಿನಿಯಿಂದ ನಮಗೆ ಕಷ್ಟ ಕಾಲದಲ್ಲೂ ಸಹಾಯವಾಗುತ್ತಿದೆ. ಈ ಪ್ರದೇಶ ವಿಸ್ತರಣೆ ಮಾಡಬೇಕು ಎಂದು ನಮ್ಮ ಶಾಸಕರು ಪ್ರಸ್ತಾವನೆ ನೀಡಿದ್ದಾರೆ. ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಮಾರು ೩೫ ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದೇವೆ. ಈ ಭಾಗದಲ್ಲಿ ೮೮ ಕೋಟಿ ರೂ. ಮೊತ್ತದ ಹನಿ ನೀರಾವರಿ ಯೋಜನೆಗೆ ಡಿಪಿಆರ್ ಸಿದ್ಧಗೊಳಿಸಿ ಪ್ರಸ್ತಾವನೆ ಸಲ್ಲಿಸಿದ್ದೇವೆ‘ ಎಂದು ತಿಳಿಸಿದರು.
ತುಂಗಭದ್ರಾ ಅಣೆಕಟ್ಟು ಗೇಟ್ ದುರಸ್ತಿಯಾದ ಬಳಿಕ ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆ ವಿಚಾರದಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿದೆ. ಈ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ‘ ಎಂದರು.
ಕಬಿನಿ ಉತ್ಸವ ಮಾಡುವ ಬಗ್ಗೆ ಒತ್ತಾಯ ಇದೆ ಎಂದು ಕೇಳಿದಾಗ, ‘ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಸಚಿವರು ಹಾಗೂ ಇತರರೊಂದಿಗೆ ಚರ್ಚೆ ಮಾಡುತ್ತೇನೆ. ಕಬಿನಿ ಉತ್ಸವ, ಕಾವೇರಿ ಆರತಿ ಮಾಡಲು ನಾವು ಚರ್ಚೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮಗಳ ಮೂಲಕ ಪ್ರವಾಸೋದ್ಯಮ ಆಕರ್ಷಣೆ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ ಎಂದು ಹೇಳಿದರು. ಬಟಾನಿಕಲ್ ಗಾರ್ಡನ್ ಮಾಡುವ ಯೋಜನೆ ನೆನೆಗುದಿಗೆ ಬಿದ್ದಿದೆಯಲ್ಲ ಎಂದು ಕೇಳಿದಾಗ, ‘ಇದಕ್ಕೆ ಬಂಡವಾಳ ಹೂಡಿಕೆ ಮಾಡುವವರು ಮುಂದೆ ಬರಬೇಕು. ನಮ್ಮ ಆದ್ಯತೆ ಇರುವುದು ನೀರಿನ ಸಮರ್ಪಕ ಬಳಕೆ ಹಾಗೂ ಅಣೆಕಟ್ಟು ಸುರಕ್ಷತೆ ಬಗ್ಗೆ ಇದೆ‘ಎಂದು ಹೇಳಿದರು.
ಖಾಸಗಿ ಕೆಲಸದ ನಿಮಿತ್ತ ಪ್ರಯಾಣ; ದಿಢೀರನೆ ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, ‘ನಾನು ಸಿಎಂಗೆ ಮಾಹಿತಿ ನೀಡಿ ನಾನು ಕಾರ್ಯಕ್ರಮದಿಂದ ಹೊರಟಿದ್ದೆ. ಮಾರ್ಗ ಮಧ್ಯದಲ್ಲೇ ನನ್ನ ಬೆಂಗಾವಲು ವಾಹನ ಅಪಘಾತಕ್ಕೀಡಾಯಿತು. ತಾಯಿ ಚಾಮುಂಡೇಶ್ವರಿ ಕೃಪೆ ಯಾರಿಗೂ ಅಪಾಯವಾಗಿಲ್ಲ. ವಕೀಲರ ಜೊತೆ ಸಭೆ ನಿಗದಿಯಾದ ಕಾರಣ, ನಾನು ೭.೩೦ಕ್ಕೆ ತೆರಳಿ, ೯.೩೦ಕ್ಕೆ ವಾಪಸ್ ಬಂದಿದ್ದೇನೆ. ನಂತರ ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ನನ್ನ ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹೋಗಿದ್ದು, ಅದನ್ನು ಮುಗಿಸಿಕೊಂಡು ಬಂದಿದ್ದೇನೆ. ಇದರ ಹೊರತಾಗಿ ರಾಜಕಾರಣವಿಲ್ಲ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಅವರಿಗೆ ಅಪಮಾನ ಮಾಡಲಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರಿಗೆ ಯಾವಾಗಲೂ ನನ್ನ ಮೇಲೆ ಪ್ರೀತಿ ಜಾಸ್ತಿ. ನಾನು ಹೆಚ್ಚು ಬಲಿಷ್ಠವಾಗಿರುವುದಕ್ಕೆ ನನ್ನ ಮೇಲೆ ಪ್ರೀತಿ ಜಾಸ್ತಿ ಎಂದು ಲೇವಡಿ ಮಾಡಿದರು.





