ಮಲ್ಕುಂಡಿ : ಕಾಡಾನೆಗಳ ದಾಳಿಯಿಂದ ಗುಡಿಸಲು ಹಾಗೂ ಸೋಲಾರ್ ತಂತಿ ಬೇಲಿ ನಾಶವಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ದೇವರಾಯಶೆಟ್ಟಿಪುರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಗ್ರಾಮದ ಹೆಚ್.ಜಿ.ಮಹದೇವಸ್ವಾಮಿ ಎಂಬವರಿಗೆ ಸೇರಿದ ಗುಡಿಸಲು ಹಾಗೂ ಸೋಲಾರ್ ತಂತಿ ಬೇಲಿಯನ್ನು ಕಾಡಾನೆಗಳು ಲಗ್ಗೆ ಇಟ್ಟು ಸಂಪೂರ್ಣ ನಾಶಪಡಿಸಿವೆ.
ಗುಡಿಸಿಲಿನಲ್ಲಿ ಜಾನುವಾರುಗಳು ಇದ್ದವು, ಆದರೆ ಯಾವುದೇ ಅಪಾಯವಾಗಿಲ್ಲ. ರೈತ ಮುಖಂಡ ಕೆಂಪಣ್ಣ ಮಾತನಾಡಿ, ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಬೇಸಿಗೆ ಇರುವುದರಿಂದ ಜಮೀನಿನಲ್ಲಿ ಯಾವುದೇ ಫಸಲು ಇಲ್ಲದ ಕಾರಣ ಕಾಡಾನೆಗಳು ಊರಿನತ್ತ ಬರುತ್ತಿವೆ. ಇದರಿಂದ ಭೀತಿ ಎದುರಾಗಿದೆ. ಆಗಿರುವ ನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಅರಣ್ಯ ಅಧಿಕಾರಿಗಳು ಕಾಡಾನೆಗಳ ಹಾವಳಿಯನ್ನು ತಪ್ಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.





