ಮೈಸೂರು: ನಾನು ಯುದ್ದದ ಪರ ಅಲ್ಲ, ಶಾಂತಿಯ ಪರ. ಯುದ್ದದ ಬದಲು ಪಾಕಿಸ್ತಾನ ಮತ್ತು ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.
ಉಗ್ರರ ದಾಳಿಗೆ ಸಂಬಂಧಿಸಿದಂತೆ, ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅನಿವಾರ್ಯತೆ ಇದೆಯೇ ಎಂಬ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅಗತ್ಯವಿಲ್ಲ. ಕಾಶ್ಮೀರದ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಬೇಕು. ನಾವು ಯುದ್ಧದ ಪರ ಇಲ್ಲ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಬೇಕು ಎಂದರು.
ಪ್ರಧಾನಿಯವರು ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ:
ಕಾಶ್ಮೀರದ ಉಗ್ರರ ದಾಳಿಗೆ ಸಂಭಂಧಿಸಿದಂತೆ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿಯವರು ಭಾಗವಹಿಸದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇದು ಮಹತ್ವಯುತ ಸಭೆಯಾಗಿದ್ದು, ಪ್ರಧಾನಿಯವರು ಈ ಸಭೆಯಲ್ಲಿ ಹಾಜರಿರಬೇಕಿತ್ತು. ಆದರೆ ಅವರಿಗೆ ಈ ಸಭೆಗಿಂತ ಬಿಹಾರದ ಚುನಾವಣಾ ಪ್ರಚಾರವೇ ಮುಖ್ಯವೆಂದು ಕಾಣುತ್ತದೆ. ಪ್ರಧಾನಿಯವರು ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದರು.
ಚಾಮರಾಜನಗರಕ್ಕೆ 20 ಬಾರಿ ಮುಖ್ಯಮಂತ್ರಿಯಾಗಿ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚಾಮರಾಜನಗರಕ್ಕೆ ಮೊದಲ ಬಾರಿ ಭೇಟಿ ನೀಡಿದಾಗಲೇ, ಅಲ್ಲಿಗೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆಂಬ ಕಳಂಕ ತೊಡೆದು ಹೋಯಿತು ಎಂದರು.





