ಸಾಲಿಗ್ರಾಮ : ತಾಲ್ಲೂಕಿನ ದೊಡ್ಡಕೊಪ್ಪಲಿನಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ವಾಸದ ಮನೆಯೊಂದು ಮುರಿದು ಬಿದ್ದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಗ್ರಾಮದ ರಮೇಶ ಎಂಬವರ ಪತ್ನಿ ಮಹದೇವಮ್ಮ ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆಗಳು ರಾತ್ರಿ ಎಲ್ಲರೂ ಮಲಗಿರುವ ಸಮಯದಲ್ಲಿ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಇದನ್ನು ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಮಳೆಯ ಆರ್ಭಟ: ಕೆಆರ್‌ಎಸ್‌ಗೆ ಹೆಚ್ಚಿದ ಒಳಹರಿವು
ಮನೆಯ ಇನ್ನುಳಿದ ಅಲ್ಪಸ್ವಲ್ಪ ಗೋಡೆಗಳು ಬೀಳುವಂತಿದ್ದು ಮನೆಯ ಒಳಗೂ ಹೋಗಲಾಗದೆ ಬೇರೆ ಮನೆಯಲ್ಲಿ ವಾಸ ಮಾಡಲು ಮನೆಯೂ ಇಲ್ಲದೆ ಮಹದೇವಮ್ಮ ಅವರ ಕುಟುಂಬವು ಬೀದಿಗೆ ಬಿದ್ದಂತಾಗಿದೆ. ಈ ಘಟನೆಯಿಂದ ಕುಟುಂಬಕ್ಕೆ ಅಪಾರ ನಷ್ಟವಾಗಿದೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಹದೇವಮ್ಮ ಅವರ ಕುಟುಂಬವು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ.
ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರೇಗೌಡ, ಮುಖಂಡರುಗಳಾದ ರೇವಣ್ಣ, ಬಲರಾಮ, ಬಸವರಾಜು, ಅರುಣ್, ಶಿವಕುಮಾರ್, ಆನಂದ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಮಹದೇವಮ್ಮ ಅವರ ಕುಟುಂಬಕ್ಕೆ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಕೂಡಲೇ ಸ್ಪಂದಿಸಿ ಅವರಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.





