ನಂಜನಗೂಡು: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ದೂರು ನೀಡಿದ್ದರೂ ಸ್ಥಳಕ್ಕೆ ಬಂದ ಅಬಕಾರಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಹಿಂದಿರುಗಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ನಂಜನಗೂಡಿನ ಬಳ್ಳೂರು ಹುಂಡಿ ಗ್ರಾಮದ ಮಹದೇವ ಹಾಗೂ ಈರೇಗೌಡನ ಹುಂಡಿ ಗ್ರಾಮದ ಚೆನ್ನಪ್ಪ ಎಂಬುವವರು ಅಕ್ರಮ ಮದ್ಯದ ಚಟಕ್ಕೆ ಬಲಿಯಾಗಿದ್ದಾರೆ.
ತಾಲ್ಲೂಕಿನ ಬಳ್ಳೂರು ಹುಂಡಿ, ಈರೇಗೌಡನ ಹುಂಡಿ, ಅಂಜನಾಪುರ, ಮಡುವಿನಹಳ್ಳಿ, ಕೊತ್ತನಹಳ್ಳಿ, ಆದಿವಾಸಿ ಕಾಲೋನಿ ಸೇರಿದಂತೆ ಇನ್ನು ಅನೇಕ ಗ್ರಾಮಗಳಲ್ಲಿ ಪೆಟ್ಟಿ ಅಂಗಡಿ ಮತ್ತು ಗಿರಣಿ ಅಂಗಡಿಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ಸ್ಥಳೀಯರು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಈರೇಗೌಡನ ಹುಂಡಿ, ಅಂಜನಪುರ ಗ್ರಾಮಕ್ಕೆ ಪರಿಶೀಲನೆಗೆ ಬಂದ ಅಬಕಾರಿ ಅಧಿಕಾರಿಗಳಿಗೆ ರಾಶಿ ರಾಶಿ ಕುಡಿದು ಬಿಸಾಡಿರುವ ಖಾಲಿ ಪ್ಯಾಕೆಟ್‌ಗಳ ದರ್ಶನವಾಗಿದೆ. ಹೀಗಿದ್ದೂ ಪರಿಶೀಲನೆಗೆ ಬಂದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಬರಿಗೈಲಿ ಹಿಂದಿರುಗಿದ್ದಾರೆ. ಈ ಬಗ್ಗೆ ಸ್ಥಳೀಯರು ಪ್ರಶ್ನಿಸಿದರೂ ಕ್ಯಾರೆ ಎನ್ನದೆ ಮೌನಕ್ಕೆ ಶರಣಾಗಿದ್ದಾರೆ.
ಅಬಕಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಬೀಲುವುದು ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ.