Mysore
18
clear sky

Social Media

ಗುರುವಾರ, 15 ಜನವರಿ 2026
Light
Dark

ಅವೈಜ್ಞಾನಿಕ ಇ-ಖಾತೆ ವ್ಯವಸ್ಥೆಯಿಂದ ಆಸ್ತಿಮಾಲೀಕರಿಗೆ ಪರದಾಟ: ಮಾಜಿ ಮೇಯರ್ ಶಿವಕುಮಾರ್

E-Khata System

ಮೈಸೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವುದೇ ಪೂರ್ವ ಪ್ರಯೋಗ ಸಾಧಕ, ಬಾಧಕಗಳನ್ನು ಪರೀಕ್ಷೆಗೆ ಒಳಪಡಿಸದೇ ಅವೈಜ್ಞಾನಿಕವಾಗಿ ರಾಜ್ಯಾದ್ಯಂತ ಎಲ್ಲಾ ಆಸ್ತಿಗಳಿಗೆ ಇ-ಖಾತಾ ಕಡ್ಡಾಯವಾಗಬೇಕೆಂದು ಆದೇಶ ಮಾಡಿದೆ.

ಆದರೆ ಅದಕ್ಕಾಗಿ ಸದ್ಯ ಬಳಸುತ್ತಿರುವ ತಂತ್ರಾಂಶ ಅಸಪರ್ಮಕವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಇ- ಖಾತೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗದೇ ದಿನಗಟ್ಟಲೆ ಪರದಾಡುವಂತಾಗಿದೆ ಎಂದು ಮಾಜಿ ಮೇಯರ್ ಶಿವಕುಮಾರ್ ಆರೋಪಿಸಿದರು.

ಮೈಸೂರು ನಗರದಲ್ಲಿಯೇ ಸುಮಾರು ೨.೫ ಲಕ್ಷ ಆಸ್ತಿಗಳಿವೆ. ಆಸ್ತಿ ಮಾಲೀಕರು ಇ- ಖಾತೆಗಾಗಿ ಅರ್ಜಿ ಸಲ್ಲಿಸಿದರೆ ಪ್ರತಿ ಅರ್ಜಿಯ ಮಾಹಿತಿಯನ್ನು ಹೊಸ ತಂತ್ರಾಂಶಕ್ಕೆ ಅಳವಡಿಸಲು ಮಾಡಲು ಸುಮಾರು ಅರ್ಧ ದಿನ ಹಿಡಿಯುತ್ತಿದೆ. ಜೊತೆಗೆ ಅರ್ಜಿ ಸಲ್ಲಿಸಲೆಂದೇ ವೃದ್ಧರು, ಮಹಿಳೆಯರು ಪಾಲಿಕೆಯ ಎಲ್ಲ ೯ ವಲಯ ಕಚೇರಿಗಳ ಎದುರು ಗಂಟೆಗಟ್ಟಲೆ ಕಾದು ನಿಲ್ಲುವಂತಾಗಿದೆ. ಸಿಎಂ ತವರು ಜಿಲ್ಲೆಯಲ್ಲಿರುವ ನಗರದಲ್ಲಿಯೇ ಈ ಪರಿಸ್ಥಿತಿ ಉಂಟಾಗಿದ್ದರೂ ಸಿಎಂ ಅವರು ಏಕೆ ಗಮನಿಸಿಲ್ಲ ಎಂಬುದು ಬೇಸರದ ಸಂಗತಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈಗಾಗಲೇ ದೊಡ್ಡ ನಗರಗಳಾದ ಮುಂಬಯಿ, ಜೋಯಿಡಾ, ದೆಹಲಿ ಮೊದಲಾದ ಕಡೆಗಳಲ್ಲಿ ಇ- ಖಾತೆ ನೀಡಿಕೆ ವ್ಯವಸ್ಥೆ ಜಾರಿಯಲ್ಲಿದ್ದು, ಅಲ್ಲೆಲ್ಲಾ ಅತ್ಯಾಧುನಿಕ ತಂತ್ರಾಂಶ ಬಳಸಿರುವ ಕಾರಣ ಇ-ಖಾತೆಯು ಆಸ್ತಿ ಮಾಲೀಕರಿಗೆ ಬೆರಳ ತುದಿಯಲ್ಲೇ ಸಿಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಬಳಸಲಾಗುತ್ತಿರುವ ತಂತ್ರಾಂಶ ತೀರಾ ಹಳೆಯದಾಗಿದೆ. ಇದನ್ನು ರಾಜ್ಯವ್ಯಾಪಿ ಜಾರಿಗೆ ತರುವ ಮುನ್ನ ಯಾವುದಾದರೂ ನಗರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಜಾರಿಗೊಳಿಸಿ, ಸಾಧಕ ಬಾಧಕ ಪರಿಶೀಲಿಸಿ, ಲೋಪಗಳನ್ನು ಸರಿಪಡಿಸಿಕೊಂಡ ಬಳಿಕ ರಾಜ್ಯಾದ್ಯಂತ ಜಾರಿಗೊಳಿಸಬೇಕಾಗಿತ್ತು. ಈ ರೀತಿ ಮಾಡದ ಕಾರಣ ಈಗ ಜನತೆ ಸಮಸ್ಯೆ ಎದುರಿಸಬೇಕಾಗಿದೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ನಗರಪಾಲಿಕೆ ಮಾಜಿ ಸದಸ್ಯ ಬಿ.ವಿ.ಮಂಜುನಾಥ್ ಅವರು ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ವ್ಯವಸ್ಥೆಯಿಂದ ಇ-ಖಾತೆ ಇಲ್ಲದೆ ಯಾವುದೇ ಆಸ್ತಿ ಕ್ರಯ ನೋಂದಣಿಯಾಗುವುದಿಲ್ಲ. ಹಳೇ ಖಾತೆಯಲ್ಲಿನ ಮಾಹಿತಿಯನ್ನೇ ಇ-ಖಾತೆಗೆ ವರ್ಗಾಯಿಸುವುದಾದರೆ, ಆಸ್ತಿಗಳನ್ನು ಹಳೇ ಖಾತೆಯ ಮಾಹಿತಿಯ ಮೇಲೆ ಕ್ರಯ, ನೋಂದಣಿಗೆ ಅವಕಾಶ ನೀಡಬಹುದಾಗಿದ್ದು, ಸರ್ಕಾರ ಈ ಕುರಿತು ಗಮನಹರಿಸಬೇಕೆಂದು ಆಗ್ರಹಿಸಿದರು.

ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಸುಬ್ಬಯ್ಯ, ರೂಪಾ ಯೋಗೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Tags:
error: Content is protected !!