Mysore
23
few clouds

Social Media

ಶುಕ್ರವಾರ, 09 ಜನವರಿ 2026
Light
Dark

ವಿಶ್ವವಿದ್ಯಾನಿಲಯಗಳು ಪರಿವರ್ತನೆಯೆ ಕೇಂದ್ರಗಳಾಗಬೇಕು : ಸಚಿವ ಮಹದೇವಪ್ಪ

ಮೈಸೂರು : ವಿಶ್ವವಿದ್ಯಾನಿಲಯಗಳು ಯುವಜನರಲ್ಲಿ ತಾಂಡವವಾಡುತ್ತಿರುವ ಜಾತೀಯತೆ ತೊಲಗಿಸುವ ಪರಿವರ್ತನೆಯ ಕೇಂದ್ರಗಳಾಗಬೇಕು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಮಾನಸ ಗಂಗೋತ್ರಿಯ ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವಿಶ್ವ ಜ್ಞಾನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕರ್ನಾಟಕದಲ್ಲಿ ಅಂಬೇಡ್ಕರ್ ಹೆಜ್ಜೆ ಗುರುತುಗಳು ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ವಿಶ್ವ ವಿದ್ಯಾನಿಲಯಗಳು ಸಮ ಸಮಾಜದ ನಿರ್ಮಾಣ ಮಾಡುವ ಜ್ಞಾನ ಕಣಜಗಳಾಗಿ ಬೆಳೆಯಬೇಕು. ಮೈಸೂರು ವಿಶ್ವ ವಿದ್ಯಾಲಯ ವಿಶ್ವದ ಶ್ರೇಷ್ಠ ವಿಶ್ವ ವಿದ್ಯಾಲಯಗಳಲ್ಲಿ ಒಂದಾಗಿದೆ. ಇದರಲ್ಲಿ ದೇಶದ ಮೊದಲ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್, ರಾಷ್ಟ್ರಕವಿ ಕುವೆಂಪು ಸೇರಿದಂತೆ ಅನೇಕ ಸಾಧಕರು ಕೂಡ ಅಧ್ಯಯನ ಮಾಡಿದ್ದಾರೆ. ಇವೆಲ್ಲರೂ ತಮ್ಮ ಜ್ಞಾನವನ್ನು ಪಸರಿಸಿದವರು ಎಂದು ತಿಳಿಸಿದರು.

ಇದನ್ನು ಓದಿ: ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ

ವಿಶ್ವ ವಿದ್ಯಾನಿಲಯ ಚಿಂತನೆಗಳ ಚಿಲುಮೆ. ಕುವೆಂಪು ಅವರು ಮೈಸೂರು ವಿಶ್ವ ವಿದ್ಯಾಲಯದ ಕುಲಪತಿಯಾಗಿದ್ದ ಕಾಲದ ಸಂಧರ್ಭದಲ್ಲಿ ವಿಶ್ವ ವಿದ್ಯಾಲಯಕ್ಕೆ ಅನೇಕ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪನೆ ಮಾಡಿ ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಿದರು. ವಿವಿಗಳು ಸಂಶೋಧನೆಗೆ ಗಮನಹರಿಸುವ ಜತೆಗೆ,ಚಿಂತನೆಗಳ ತಾಣವಾಗಬೇಕು. ಸಮಾಜದಲ್ಲಿ ನಡೆಯುತ್ತಿರುವ ಹಲವಾರು ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿ ಜನರ ಮುಂದಿಡಬೇಕು ಎಂದರು.

ಮೈಸೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಡಾ. ಬಿ ಆರ್ ಅಂಬೇಡ್ಕರ್ ಸಂಶೋಧನಾ ಕೇಂದ್ರವು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ನಂತರ ಈ ಹಂತಕ್ಕೆ ಬೆಳೆದು ನಿಂತಿದೆ. ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವರು ಇದರ ಬೆಳವಣಿಗೆಗೆ ಅಪಾರ ಅನುದಾನವನ್ನು ನೀಡಿ ಪ್ರೋತ್ಸಾಹಿಸಿರುವುದರಿಂದ ವಿವಿ ಪರವಾಗಿ ಧನ್ಯವಾದಗಳನ್ನು ಹೇಳುತ್ತೇನೆ ಎಂದರು. ಅಂಬೇಡ್ಕರ್ ಅವರ ಚಿಂತನೆಗಳನ್ನು ವಿಶ್ವ ಮಟ್ಟದಲ್ಲಿ ತಿಳಿಸಲು ನಾವು ಕಟಿಬದ್ಧವಾಗಿ ಕಾರ್ಯ ನಿರ್ವಹಿಸುತ್ತೇವೆ. ಮುಂದಿನ ದಿನಗಳಲ್ಲಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಲುಬೇಕಾದ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.

ಇದನ್ನು ಓದಿ: ನಮ್ಮ ವಿಶ್ವವಿದ್ಯಾಲಯಗಳ ಭ್ರಷ್ಟಾಚಾರದ ಆಳ ಮತ್ತು ಮೂಲ ಎಲ್ಲಿ?

ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಹಿರಿಯ ಪ್ರಾಧ್ಯಾಪಕ ಡಾ. ಜೆ. ಸೋಮಶೇಖರ್ ಮಾತನಾಡಿ, ೧೯೯೪ ರಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಅಂಬೇಡ್ಕರ್ ಪೀಠ ಸ್ಥಾಪನೆ ಆಯಿತು. ನಂತರ ೨೦೦೦ ನೇ ಇಸವಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ವಾಗಿ ನಡೆದುಕೊಂಡು ಬರುತ್ತಿದೆ. ಈ ಕೇಂದ್ರದಲ್ಲಿ ಅಂಬೇಡ್ಕರ್ ಅವರು ಗಳಿಸಿದ ಜ್ಞಾನವನ್ನು ವಿಶ್ವ ಮಟ್ಟದಲ್ಲಿ ಸಾರುವ ಕಾರ್ಯವನ್ನು ಮಾಡುತ್ತಿದೆ. ದಿವಂಗತ ಮಾಜಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರು ಈ ಕೇಂದ್ರವನ್ನು ಸ್ಥಾಪನೆ ಮಾಡಿದರು. ಸಿದ್ದರಾಮಯ್ಯ ಅವರು ಮೊದಲು ಮುಖ್ಯಮಂತ್ರಿಗಳಾದ ೫೦ ಲಕ್ಷ ರೂ.ನೀಡಿದ್ದರು. ಅನಂತರ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ೩ ಕೋಟಿ ನೀಡಿದ್ದರು. ಈಗ ಸಂವಿಧಾನ ಅಧ್ಯಯನ ಪೀಠಕ್ಕೆ ೧೦ ಕೋಟಿ ಅನುದಾನ ನೀಡಿದ್ದಾರೆ. ಜ್ಞಾನ ದರ್ಶನ ಕೇಂದ್ರದಲ್ಲಿ ಅಂಬೇಡ್ಕರ್ ಮ್ಯೂಸಿಯಂ, ಕಂಪ್ಯೂಟರ್ ತರಬೇತಿ ಕೇಂದ್ರ, ದಲಿತ ಡಾಕ್ಯುಮೆಂಟ್ ಸೆಂಟರ್ ನ್ನು ಸ್ಥಾಪಿಸಲಾಗಿದೆ. ಕೇಂದ್ರವನ್ನು ಇನ್ನೂ ಅಭಿವೃದ್ಧಿ ಪಡಿಸಲು ೧೫ ಕೋಟಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಶಾಸಕ ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಕೆ. ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್, ಮೈಸೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಎಂ.ಕೆ. ಸವಿತಾ, ಭಾಗ್ಯಲಕ್ಷ್ಮೀ ವಿ.ಶ್ರೀನಿವಾಸಪ್ರಸಾದ್ ಮತ್ತಿತರರು ಹಾಜರಿದ್ದರು.

Tags:
error: Content is protected !!