Mysore
30
scattered clouds

Social Media

ಭಾನುವಾರ, 09 ಫೆಬ್ರವರಿ 2025
Light
Dark

ಕೇಂದ್ರ ಬಜೆಟ್‌ 2025| ದೇಶದ ಮೇಲಿನ ಸಾಲವನ್ನು ಏರಿಕೆ ಮಾಡಿದ್ದೇ ಸಾಧನೆ: ಎಂ.ಲಕ್ಷ್ಮಣ್‌

ಮೈಸೂರು: ದೇಶದ ಪ್ರತಿ ವ್ಯಕ್ತಿಯ ಮೇಲೆ 3.5 ಲಕ್ಷ ರೂ. ಸಾಲ ಹೇರಿ, ದೇಶದ ಮೇಲಿನ ಸಾಲವನ್ನು 205 ದಶಲಕ್ಷ ಕೋಟಿ ರೂ.ಗೆ ಏರಿಕೆ ಮಾಡಿರುವುದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು(ಫೆಬ್ರವರಿ.2) ಈ ಕುರಿತು ಸುದ್ದಿಗೋಷ್ಠಿ ನಡೆಸಿ ಖಾಲಿ ಚೆಂಬು, ತೆಂಗಿನಚಿಪ್ಪು ಪ್ರದರ್ಶಿಸುವ ಮೂಲಕ ಕೇಂದ್ರ ಬಜೆಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ಅವರು, 2025-26ನೇ ಸಾಲಿನ ಕೇಂದ್ರ ಬಜೆಟ್ ನಿರಾಶದಾಯಕ ಮತ್ತು ಭಾರತವನ್ನು ಸಾಲದ ಸುಳಿಗೆ ನೂಕಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಾ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಇದ್ದಾಗ ಬಜೆಟ್ ಗಾತ್ರ 14 ಲಕ್ಷ ಕೋಟಿ ರೂ. ಇತ್ತು. ಆದರೆ ಈ ಬಾರಿಯ ಬಜೆಟ್ ಗಾತ್ರ 50 ಲಕ್ಷ ಕೋಟಿ ರೂ. ಆಗಿದೆ. ಈ ಬಜೆಟ್‌ ಮಂಡಿಸಲು 16 ಲಕ್ಷ ಕೋಟಿ ರೂ. ಸಾಲ ತೆಗೆದುಕೊಂಡಿದ್ದಾರೆ. 1947 ರಿಂದ 2014ರ ಅವಧಿಯಲ್ಲಿ ಮಾಡಿದ್ದ ಸಾಲ 53 ಲಕ್ಷ ಕೋಟಿ ರೂ. ಮಾತ್ರ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೇವಲ 10 ವರ್ಷಗಳಲ್ಲಿ 205 ದಶಲಕ್ಷ ಕೋಟಿ ರೂ. ಆಗಿದೆ. ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವ ಬದಲಿಗೆ ಸಾಲದ ಕೂಪಕ್ಕೆ ತಳ್ಳಿರುವಂತಹ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಕಿಡಿಕಾರಿದರು.

ಇನ್ನೂ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಬಿಹಾರಕ್ಕಾಗಿ 78 ಸಾವಿರ ಕೋಟಿ ರೂ. ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ. ಎಲ್ಲೆಲ್ಲಿ ಚುನಾವಣೆ ಬರುತ್ತಾ ಇದೆ ಅಲ್ಲಿ ವಿಶೇಷ ಪ್ಯಾಕೇಜ್ ಕೊಟ್ಟು ಮತದಾರರ ಓಲೈಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಬಜೆಟ್‌ ರಾಜ್ಯಕ್ಕೆ ಶೂನ್ಯ ನೀಡಿದೆ

ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದು, ಯಾವುದೇ ಹೊಸ ಯೋಜನೆಗಳನ್ನು ನೀಡಿಲ್ಲ. ಜಿಎಸ್‌ಟಿ ಹಣದಲ್ಲೂ ಅನ್ಯಾಯ ಮಾಡಿದೆ. ನರೇಗಾ ಯೋಜನೆಯಲ್ಲೂ ಅನುದಾನ ಕಡಿಮೆ ಮಾಡಿದ್ದಾರೆ. ಕೃಷಿ ಕ್ಷೇತ್ರದ ಅನುದಾನದಲ್ಲೂ ಗಣನೀಯ ಇಳಿಕೆ ಆಗಿದೆ. ಮೇಕ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಅನುಷ್ಠಾನಕ್ಕೆ ಕೇವಲ 100 ಕೋಟಿ ರೂ.ನೀಡಿದ್ದಾರೆ. ಅಲ್ಲದೇ ಕಾರ್ಪೊರೇಟ್ ಕಂಪೆನಿಗಳ ತೆರಿಗೆ ಕಡಿಮೆ ಮಾಡುವ ಮೂಲಕ ಕ್ರೂರಿ ಕ್ಯಾಪಿಟಲಿಸ್ಟ್ ಓಲೈಸಲಾಗಿದೆ. ನಮ್ಮ ರಾಜ್ಯಕ್ಕೆ ಖಾಲಿ ಚೆಂಬು, ತೆಂಗಿನ ಕಾಯಿ ಚಿಪ್ಪು ಮತ್ತು ಮೂರು ನಾಮ ಹಾಕಿದ್ದಾರೆ ವಾಗ್ದಾಳಿ ನಡೆಸಿದರು.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಒಂದೇ ಒಂದು ಯೋಜನೆ ತರಲು ಸಾಧ್ಯವಾಗಿಲ್ಲ. ನಮ್ಮ ಸಂಸದರು ಹಾಗೂ ಸಚಿವರು ತಮಿಳುನಾಡಿನವರನ್ನು ನೋಡಿ ಕಲಿಯಬೇಕು. ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಒಂದಾಗುತ್ತಾರೆ. ನಮ್ಮಲ್ಲಿ ದಿನಬೆಳಗಾದರೆ ಸಿಎಂ ಸಿದ್ದರಾಮಯ್ಯ ಅವರನ್ನು ನಿಂದಿಸುತ್ತಾ ಕಾಲಹರಣ ಮಾಡುತ್ತಾರೆ ಎಂದು ಹೇಳಿದರು.

Tags: