ಮೈಸೂರು: ದೇಶದ ಭವಿಷ್ಯ ರೂವಾರಿಗಳಾದ ನೀವು ದೇಶ ತಿದ್ದುವ ಒಳ್ಳೆಯ ಪ್ರಾಧ್ಯಾಪಕರಾಗಿ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಕುಲಪತಿ ಡಾ.ಎಸ್ ಅಹಲ್ಯಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಬುಧವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಮರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ 53 ದಿನ ನಡೆದ ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಶುಭಹಾರೈಸಿ ಅವರು ಮಾತನಾಡಿದರು.
ಭವಿಷ್ಯದ ಪ್ರಾಧ್ಯಾಪಕರಾಗುವ ನೀವು ಮುಂದಿನ ಕುಲಪತಿ, ಕುಲಸಚಿವ, ಪ್ರಾಧ್ಯಾಪಕ, ಪ್ರಾಚರ್ಯರಾಗುವು ಕನಸು ಹೊತ್ತಿದ್ದಿರಾ, ಖಂಡಿತ ನೀವೆಲ್ಲಾ ಒಳ್ಳೆಯ ಪ್ರಾಧ್ಯಾಪಕರಾಗುತ್ತಿರಾ ಎಂದು ಹಾರೈಕೆಯ ಮಾತುಗಳನ್ನಾಡಿದರು.
ಯಾವುದೇ ಪ್ರತಿಫಲಾಪೇಕ್ಷವಿಲ್ಲದೆ, ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಿ, ಗುರುಗಳಾಗಿ ನಿಮ್ಮಿಂದ ತಿದ್ದುವ ವಿದ್ಯಾರ್ಥಿಗಳಿಗೆ ಸರಿ ದಾರಿ ತೋರಿಸಿ ಎಂದು ಸಲಹೆ ನೀಡಿದರು.
ಇಂದಿನ ಗೂಗಲ್ ಕಾಲದ ಶಿಕ್ಷಣದಲ್ಲಿ ತಂತ್ರಜ್ಞಾನ ಅವರಿಸಿಕೊಂಡಿದೆ. ಆದರೆ ಕೃತಕ ತಂತ್ರಜ್ಞಾನ (ಎ.ಐ) ಅಥವಾ ಇನ್ಯಾವುದೇ ತಂತ್ರಜ್ಞಾನ ಬಂದರೂ ಪ್ರಾಧ್ಯಾಪಕರ ಸ್ಥಾನ ತುಂಬಲು ಸಾಧ್ಯವಿಲ್ಲ. ಇದೊಂದು ಸದೃಢವಾದ ಕೆಲಸವಾಗಿದೆ ಎಂದರು.
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮನೋಜ್ ಜೈನ್ ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷಾ ತಯಾರಿ ಜೊತೆಗೆ ಯುಪಿಎಸ್ ಸಿ ಮತ್ತು ಕೆಪಿಎಸ್‌ಸಿ ಕಡೆಗೆ ಗಮನ ಹರಿಸಿ ನಾಗರಿಕ ಸೇವೆಯಲ್ಲೂ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಇಲ್ಲಿನ ತರಬೇತಿ ಶಿಬಿರದಲ್ಲಿ ಬಹುತೇಕ ಮಹಿಳೆಯರೆ ಇದ್ದೀರಾ. ನೀವು ಮನೆಯಲ್ಲೂ ಹಾಗೂ ಸಮಾಜಕ್ಕೂ ಶಿಕ್ಷಕಿಯಾಗಿ ದೇಶವನ್ನು ತಿದ್ದುತಿದ್ದಿರಾ. ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ವರ್ಷ ಪೂರ್ತಿ ಓದಿದ್ದನ್ನು ಮೂರು ಗಂಟೆಯಲ್ಲಿ ನಿರೂಪಿಸಬೇಕು. ಪರೀಕ್ಷಾ ವೇಳೆಯ ಆ ಮೂರು ಗಂಟೆ ಸಮಯವೇ ನಿಮ್ಮ ಬದುಕು ರೂಪಿಸುವುದು. ಹೀಗಾಗಿ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಿ ಸಾಧನೆ ತಮ್ಮನ್ನ ಹುಡುಕಿಕೊಂಡು ಬರುತ್ತದೆ ಎಂದು ಸಲಹೆ ನೀಡಿದರು.
ಎಲ್ಲಾ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಬರವಣಿಗೆ ತುಂಬಾ ಮುಖ್ಯ. ಹೀಗಾಗಿ ಬರೆಯುವುದನ್ನ ರೂಢಿಸಿಕೊಳ್ಳಿ. ಓದುವಾಗ ಜೊತೆ ಜೊತೆಗೆ ಕೀ ನೋಟ್ಸ್ ಮಾಡುವ ಮೂಲಕ ಬರವಣಿಗೆಯ ಶೈಲಿಯನ್ನು ಹೆಚ್ಚಿಸಿಕೊಳ್ಳಿ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ ಹಲಸೆ ಮಾತನಾಡಿ, ಎಲ್ಲಾ ಭವಿಷ್ಯದ ಪ್ರಾಧ್ಯಾಪಕರಿಗೆ ಶುಭಾಶಯಗಳು. ಇಲ್ಲಿನ ಎಲ್ಲಾ ನುರಿತ ಪ್ರಾಧ್ಯಾಪಕರು ನಿಮಗೆ ಮಾರ್ಗದರ್ಶನ ನೀಡಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಇಂದಿನ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣದ ಕೊರತೆ ಇದೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ನೀವೆಲ್ಲಾ ಸಜ್ಜುಗೊಳ್ಳಬೇಕು. ಗುಣಮಟ್ಟದ ಶಿಕ್ಷಣದಿಂದ ದೇಶಕ್ಕೇ ಉನ್ನತವಾದ ಸಂಶೋಧಕರು ಸಿಗುತ್ತಾರೆ ಎಂದರು.
ವಿದ್ಯಾರ್ಥಿಗಳು ತಮ್ಮ ಗುರಿಯನ್ನ ಸ್ಪಷ್ಟಪಡಿಸಿಕೊಳ್ಳಬೇಕು. ಜೊತೆಗೆ ಆತ್ಮಾವಲೋಕನ ಮಾಡಿಕೊಂಡು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ವಿ.ವಿ. ಕುಲಸಚಿವ ಪ್ರೊ. ಕೆ.ಬಿ. ಪ್ರವೀಣ ಮಾತನಾಡಿ ನಮ್ಮ ಕರ್ನಾಟಕ ರಾಜ್ಯ ಮುಕ್ತ ವಿ.ವಿಯು ನ್ಯಾಕ್ ನಿಂದ ಎ+ ಮಾನ್ಯತೆ ಪಡೆದಿದೆ. ಇದಕ್ಕೆ ನಮ್ಮ ಕುಲಪತಿಗಳ ಶ್ರಮ ದೊಡ್ಡದು. ಇಂತಹ ವಿವಿಯ ಪರಿಸರದಲ್ಲಿ ತರಬೇತಿ ಪಡೆದ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದರು.
ಸಮಾರಂಭದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ. ಹೆಚ್. ವಿಶ್ವನಾಥ್, ಶೈಕ್ಷಣಿಕ ಡೀನ್ ಪ್ರೊ. ರಮಾನಾಥಂ ನಾಯ್ಡು, ಕರಾಮುವಿ ಸ್ಮರ್ಧಾತ್ಮಕ ಪರೀಕ್ಷಾ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಪ್ರಾಧ್ಯಾಪಕರಾದ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್, ಡಾ. ಶೈಲೇಶ್ ರಾಜೇ ಅರಸ್, ಡಾ. ಜ್ಯೋತಿಶಂಕರ್, ವಿಶೇಷಾಧಿಕಾರಿ ಮಹದೇವ, ಹಿರಿಯ ಪ್ರಾಧ್ಯಾಪಕ ಎನ್.ಎನ್ ಪ್ರಹ್ಲಾದ, ಸಿಬ್ಬಂದಿಗಳಾದ ಗಣೇಶ್ ಕೆ.ಜಿ. ಕೊಪ್ಪಲ್ ಮತ್ತು ಸಿದ್ದೇಶ್ ಹೊನ್ನೂರು ಸೇರಿದಂತೆ ಇತರರು ಇದ್ದರು.